ರೆಮ್ಡೆಸಿವಿರ್ ಕಾಳಸಂತೆಕೋರರ ಸೆರೆ

BKT 34
Published on

ಬಾಗಲಕೋಟೆ: ಜಿಲ್ಲೆಯಲ್ಲಿ ರೆಮ್ಡೆಸಿವಿರ್ ಹಾಹಾಕಾರದ ಹಿಂದೆ ಕಳ್ಳದಂಧೆ ವಾಸನೆ ಹೊರಸೂಸುತ್ತಿತ್ತಾದರೂ ಹೊಗೆ ಎಲ್ಲಿಂದ ಬರುತ್ತಿದೆ ಎನ್ನುವುದು ಪಕ್ಕಾ ಆಗಿರಲಿಲ್ಲ. ಇದೀಗ ಬಾಗಲಕೋಟೆ ಸಿಇಎನ್ ಪೊಲೀಸರು ಜೀವರಕ್ಷಕ ಔಷಧ ಕಾಳಸಂತೆಕೋರರನ್ನು ರೆಡ್‌ಹ್ಯಾಂಡ್ ಆಗಿ ಹಿಡಿಯುವ ಮೂಲಕ ಜಾಲವನ್ನು ಪತ್ತೆಮಾಡಿದ್ದಾರೆ.

ಬಾಗಲಕೋಟೆ ನಗರದಲ್ಲಿ ರೆಮ್ಡೆಸಿವಿರ್ ಅಕ್ರಮವಾಗಿ ಭಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಜಾಲದ ಹನ್ನೊಂದು ಜನ ಆರೋಪಿಗಳನ್ನು ಖೆಡ್ಡಾಗೆ ಕೆಡವಿರುವ ಪೊಲೀಸರು ಅವರಿಂದ 14 ತುಂಬಿದ ಹಾಗೂ ಎರಡು ಖಾಲಿ ಇರುವ ರೆಮ್ಡೆಸಿವಿರ್ ವೈಲ್ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಜಿಲ್ಲಾ ಕೋವಿಡ್ ಆಸ್ಪತ್ರೆಯ ಮೂವರು ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳ ಎಂಟು ಜನ ಸೇರಿ ಒಟ್ಟು ಹನ್ನೊಂದು ಆರೋಪಿಗಳನ್ನು ಬಂಧಿಸಿದ್ದಾರೆ. ಜಿಲ್ಲಾ ಕೋವಿಡ್ ಆಸ್ಪತ್ರೆಯ ವಿಠ್ಠಲ ಚಲವಾದಿ, ರಾಜು ಗುಡಿಮನಿ, ರಂಗಪ್ಪ ದಿನ್ನಿ ಹಾಗೂ ಖಾಸಗಿ ಆಸ್ಪತ್ರೆ ಸಿಬ್ಬಂದಿ ಬಾಲಚಂದ್ರ ಭಜಂತ್ರಿ, ತಿಮ್ಮಣ್ಣ ಗಡದನ್ನವರ, ಮಹಾಂತಗೌಡ ಬಿರಾದಾರ, ಶ್ರೀಕಾಂತ ಲಮಾಣಿ, ಮಂಜುನಾಥ ಗಾಣಿಗೇರ, ಪ್ರವೀಣ ಕೊಳ್ಳಿ, ಗಣೇಶ ನಾಟಿಕಾ ಹಾಗೂ ಭೀಮಸೆಪ್ಪ ಎನ್ನುವವರು ಬಂಧಿತ ಆರೋಪಿಗಳು ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ತಿಳಿಸಿದ್ದಾರೆ.

ಮೊದಲು 18 ಸಾವಿರಕ್ಕೆ ಮಾರಾಟ
ಬಂಧಿತ ಆರೋಪಿಗಳಿಂದ ಜಪ್ತಿ ಮಾಡಿಕೊಂಡಿರುವ ಎರಡು ವೈಲ್ಗಳನ್ನು ಈ ಮೊದಲು ಒಂದಕ್ಕೆ 18 ಸಾವಿರ ರೂ.ಗಳಂತೆ ಮಾರಾಟ ಮಾಡಿದ್ದಾರೆ. ಆ ನಂತರದಲ್ಲಿ ಬೆಲೆಯನ್ನು ಹೆಚ್ಚಿಸಿದ್ದು, ಒಂದಕ್ಕೆ 25 ರಿಂದ 30 ಸಾವಿರ ರೂ.ಗೆ ಒಂದರಂತೆ ಮಾರಾಟ ಮಾಡುತ್ತಿದ್ದರು. ಹೀಗೆ ನಾಲ್ಕು ವೈಲ್ಗಳನ್ನು ಮಾರಾಟ ಮಾಡುತ್ತಿದ್ದ ವೇಳೆ ಎಸ್ಪಿ ಲೋಕೇಶ ಜಗಲಾಸರ್ ಮಾರ್ಗದರ್ಶನದಲ್ಲಿ ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಸಿಪಿಐ ಮಲ್ಲಯ್ಯ ಮಠಪತಿ, ಬಾಗಲಕೋಟೆ ಟೌನ್ ಠಾಣೆ ಸಿಪಿಐ ವಿಜಯ ಮುರುಗುಂಡಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ ರೆಮ್‌ಡೆಸಿವಿರ್ ವೈಲ್ ಸೇರಿ 30 ಸಾವಿರ ರೂ. ನಗದು ವಶಕ್ಕೆ ಪಡೆದಿದ್ದಾರೆ.

ದಾಳಿಯಲ್ಲಿ ಕಾರ್ಯನಿರ್ವಹಿಸಿರುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಎಸ್ಪಿ ಲೋಕೇಶ ಜಗಲಾಸರ್, ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ.

ಸಮಗ್ರ ತನಿಖೆ
ಆರೋಪಿಗಳಿಂದ ವೈಲ್ಗಳು ಬಂದಿದ್ದರೂ ಇವುಗಳನ್ನು ಬಳಕೆ ಮಾಡುತ್ತಿರುವ ವೈದ್ಯರ ಪಾತ್ರ ಏನಾದರೂ ಇದೆಯಾ? ಜಿಲ್ಲಾ ಆಸ್ಪತ್ರೆಯಿಂದ ರೆಮ್ಡೆಸಿವಿರ್ ಕಳ್ಳಸಾಗಣೆ ಆಗಿದ್ದರಲ್ಲಿ ಅಲ್ಲಿ ನಿಷ್ಕಾಳಜಿ ಇದೆಯಾ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರತಿ ಆಯಾಮದಲ್ಲಿ ತನಿಖೆ ಮುಂದುವರಿಸಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ.

ಕಳ್ಳಸಂತೆಯಲ್ಲಿ ಜೀವರಕ್ಷಕಗಳನ್ನು ಮಾರಾಟ ಮಾಡುವ ಕೆಲಸಕ್ಕೆ ತೊಡಗಿಸಿಕೊಳ್ಳಬೇಡಿ. ಇದರಿಂದ ಅವಶ್ಯಕತೆ ಇರುವವರಿಗೆ ಔಷಧ ಸಿಗದೆ ಅವಶ್ಯಕತೆ ಇಲ್ಲದವರ ಕೈಗೆ ಸಿಗುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ. ಇಂತಹ ಕೆಲಸ ಮಾಡುತ್ತಿರುವವರಿಗೆ ಎಚ್ಚರಿಕೆ ನೀಡಿರುವ ಎಸ್ಪಿ, ನಮ್ಮ ಕೆಲಸ ಇಲ್ಲಿಗೆ ಮುಗಿದಿಲ್ಲ, ಮುಂದುವರಿದಿದೆ. ಜಿಲ್ಲೆಯಲ್ಲಿ ಯಾರು ಯಾರು ಈ ಕೆಲಸ ಮಾಡುತ್ತಿದ್ದಾರೆ ಅವರನ್ನು ಹುಡುಕಿ ತೆಗೆಯುತ್ತೇವೆ. ನಗರ ಮಾತ್ರವಲ್ಲದೆ, ಜಿಲ್ಲಾದ್ಯಂತ ಹದ್ದಿನ ಕಣ್ಣು ನೆಡಲಾಗಿದೆ. ಅವರೆಲ್ಲರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ಖಡಕ್ ಸೂಚನೆ ನೀಡಿದ್ದಾರೆ.

ಆರೋಪಿಗಳು ಕೆಳಹಂತದ ಸಿಬ್ಬಂದಿ
ಆರೋಪಿಗಳೆಲ್ಲರೂ ಸ್ಟಾಫ್‌ನರ್ಸ್ ಹಾಗೂ ಟೆಕ್ನಿಷಿಯನ್‌ಗಳು ಇದ್ದಾರೆ. ಇವರು ರೋಗಿಗಳಿಗೆ ರೆಮ್ಡೆಸಿವಿರ್ ಹಾಕಿದ್ದೇವೆ ಎಂದು ಹೇಳಿ ಹೊರಗಡೆ ತಂದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು. ಸದ್ಯಕ್ಕೆ ಈ ಪ್ರಕರಣ ನಮ್ಮ ಜಿಲ್ಲೆಗೆ ಸೀಮಿತವಾದಂತೆ ಕಾಣಿಸುತ್ತಿದೆ. ಆದರೂ ತನಿಖೆ ನಡೆದಿದ್ದು, ಆ ವೇಳೆ ಮತ್ತೆ ಯಾವ ವಿಚಾರಗಳು ಬೆಳಕಿಗೆ ಬರುತ್ತವೆ ನೋಡಬೇಕು.

ಸದ್ಯಕ್ಕೆ ನಮಗೆ ಲಭ್ಯವಾಗಿರುವ ಮಾಹಿತಿಯಂತೆ ಜಿಲ್ಲಾ ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಿರುವ ಶಂಕೆ ಇದ್ದು, ಇದರಲ್ಲಿ ಅಲ್ಲಿನ ಸಿಬ್ಬಂದಿ ಪಾತ್ರ ಪ್ರಮುಖವಾಗಿದೆ. ಇದರಲ್ಲಿ ಯಾರಾದರೂ ವೈದ್ಯಾಧಿಕಾರಿಗಳು, ವೈದ್ಯರ ಪಾತ್ರ ಇದೆಯಾ ಎಂದು ತನಿಖೆ ನಡೆದಿದೆ. ಹಾಗೆಯೇ ಕಾಳಸಂತೆಯಲ್ಲಿ ಖರೀದಿಸಿ ಬಳಕೆ ಮಾಡಿದ್ದಾೃರು? ಕಳ್ಳ ವಸ್ತುವನ್ನು ವಿಚಾರಣೆ ಇಲ್ಲದೆ ಬಳಕೆ ಮಾಡಿದ್ದೇಗೆ ಈ ದಿಕ್ಕಿನಲ್ಲೂ ತನಿಖೆ ನಡೆದಿದೆ.

ಆರೋಪಿಗಳ ವಿರುದ್ಧ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡ್ರಗ್ ಕಂಟ್ರೋಲ್ ಆ್ಯಕ್ಟ್-1950, ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ-2020 ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿವೆ.

ಬಾಗಲಕೋಟೆ ನಗರದಲ್ಲಿ ಬೆಳಕಿಗೆ ಬಂದಿರುವ ರೆಮ್ಡೆಸಿವಿರ್ ಕಾಳಸಂತೆ ಮಾರಾಟದ ಪ್ರಕರಣದಲ್ಲಿ ಜಿಲ್ಲಾ ಆಸ್ಪತ್ರೆ ಜತೆಗೆ ಆರರಿಂದ ಏಳು ಆಸ್ಪತ್ರೆಗಳು ಭಾಗಿಯಾಗಿರುವ ಬಗ್ಗೆ ನಮ್ಮ ಗಮನಕ್ಕೆ ಇದ್ದು, ತನಿಖೆ ನಡೆದಿದೆ. ಅದು ಮುಗಿದ ಬಳಿಕವೇ ಪೂರ್ಣ ವಿವರ ಲಭ್ಯವಾಗಲಿದೆ. ಇದರಲ್ಲಿ ಯಾರದೇ ಪಾತ್ರ ಇದ್ದರೂ ಅವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಕಠಿಣ ಕ್ರಮ ಜರುಗಿಸುತ್ತೇವೆ.
-ಲೋಕೇಶ ಜಗಲಾಸರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬಾಗಲಕೋಟೆ

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net