ಐತಿಹಾಸಿಕ ಶಿರೂರ ಕೆರೆಗೆ ಬಾಗಿನ

BKT 7-1
Published on

ಬಾಗಲಕೋಟೆ: ಪ್ರಸಕ್ತ ವರ್ಷದ ಉತ್ತಮ ಮಳೆಯಿಂದಾಗಿ 13 ವರ್ಷಗಳ ನಂತರ ಭರ್ತಿಯಾಗಿರುವ ತಾಲೂಕಿನ ಶಿರೂರ ಗ್ರಾಮದ ಐಹಾಸಿಕ ಕೆರೆಗೆ ಶಾಸಕ ಡಾ.ವೀರಣ್ಣ ಚರಂತಿಮಠ, ಸಂಸದ ಪಿ.ಸಿ. ಗದ್ದಿಗೌಡರ ಶನಿವಾರ ಬಾಗಿನ ಅರ್ಪಣೆ ಮಾಡಿದರು.

ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಸದಾ ಬರಗಾಲದಿಂದ ತೀವ್ರ ಸಮಸ್ಯೆ ಎದುರಿಸಿದ್ದ ನಮ್ಮ ಜಿಲ್ಲೆಗೆ ಈ ಸಾರಿ ಉತ್ತಮ ಮಳೆಯಾಗಿದೆ. ಇದರಿಂದ ಕೆರೆ, ಕಟ್ಟೆಗಳಿಗೆ ಜೀವ ಕಳೆ ಬಂದಿದೆ. ಆಲಮಟ್ಟಿ ಹಿನ್ನೀರಿನಿಂದಲು ಸಹ ಅನೇಕ ಗ್ರಾಮಗಳಲ್ಲಿ ಅಂತರ್ಜಲಮಟ್ಟ ಏರಿಕೆಯಾಗಿದೆ. ರೈತರು, ಜಾನುವಾರುಗಳಿಗೆ ಅನುಕೂಲವಾಗಿರುವುದು ಸಂತೋಷಕರ ಸಂಗತಿ. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಕೆರೆ, ಹಳ್ಳ, ಕೊಳ್ಳ, ನದಿಗಳ ರಕ್ಷಣೆಗೆ ಪ್ರತಿಯೊಬ್ಬರೂ ಪಣತೊಡಬೇಕು. ಪರಿಸರ ಉಳಿದರೆ ಜೀವ ಸಂಕುಲ ಉಳಿಯುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಇನ್ನು ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲರೂ ಕೈ ಜೋಡಿಸಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿ ಪಾಲಿಸಬೇಕು ಎಂದರು. ಬಾಗಿನ ಅರ್ಪಣೆ ಮುನ್ನ ಈರಯ್ಯ ಮುಷ್ಟಿಗೇರಿ ನೇತೃತ್ವದಲ್ಲಿ ಗಂಗಾ ಪೂಜೆ, ವರುಣ ದೇವ ಶಾಂತಿ ಪೂಜೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ, ತಾಪಂ ಸದಸ್ಯ ರಾಜಶೇಖರ ಅಂಗಡಿ, ಜಿಪಂ ಸದಸ್ಯ ರಂಗನಗೌಡ ಗೌಡರ, ಮುಖಂಡರಾದ ಸುರೇಶ ದೇಸಾಯಿ, ನ್ಯಾಯವಾದಿ ಸಿ.ವಿ. ಕೋಟಿ, ಸಿ.ಎಂ. ಪ್ಯಾಟಿಶೆಟ್ಟರ, ಬಸಪ್ಪ ಮೆಣಸಗಿ, ಶೇಖಪ್ಪ ಮಾಚಾ, ಬಸವರಾಜ ಬಿಲ್ಲಾರ, ಸಿದ್ದಪ್ಪ ಮೆಳ್ಳಿ, ಗುರಮ್ಮ ಸಂಕೀಣಮಠ, ಲಲಿತಾ ಪಾಟೀಲ, ಗಿರಿಜಾ ಎಮ್ಮಿಮಠ, ನಂದಾ ಹೊಸಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net