ರಕ್ಕಸ ಮಳೆಗೆ ಜನಜೀವನ ಅಸ್ತವ್ಯಸ್ತ

BKT 13-1
Published on

ಬಾಗಲಕೋಟೆ: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದಲೂ ರಕ್ಕಸ ಮಳೆಗೆ ಸಿಕ್ಕು ಜನಜೀವನ ಅಲ್ಲೋಲ ಕಲ್ಲೋಲವಾಗಿದೆ.

ಘಟಪ್ರಭೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಮತ್ತೆ ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಪ್ರಸಿದ್ಧ ಹೊಳೆಬಸವೇಶ್ವರ ದೇವಸ್ಥಾನಕ್ಕೆ ಜಲದಿಗ್ಭಂಧನ ಉಂಟಾಗಿದೆ. ದೇವಸ್ಥಾನದಲ್ಲಿ ಅಂದಾಜು ಆರು ಅಡಿಯಷ್ಟು ನೀರು ನುಗ್ಗಿದೆ.

ಹುನಗುಂದ ತಾಲೂಕಿನಲ್ಲಿಯೂ ವರುಣನ ಆರ್ಭಟ ಜೋರಾಗಿದ್ದು, ಮಳೆ ಕೆಲಕಾಲ ನಿಂತರೂ ಬಡಾವಣೆಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಮಾತ್ರ ಕಡಿಮೆಯಾಗುತ್ತಿಲ್ಲ. ಹಳ್ಳ, ಚೆಕ್ ಡ್ಯಾಂಗಳಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಹುನಗುಂದ ಪಟ್ಟಣದ ನಾಲ್ಕೈದು ಬಡಾವಣೆಗಳು ಸಂಪೂರ್ಣ ಜಲಾವೃತವಾಗಿವೆ. ಕುಂಬಾರಗಲ್ಲಿ, ಕಂಬಾರಗಲ್ಲಿ, ಓಂಶಾಂತಿ ನಗರ, ಬಸ್ ನಿಲ್ದಾಣದ ಪಕ್ಕದ ಬಡಾವಣೆಯಲ್ಲಿಯೂ ನೀರು ನುಗ್ಗಿದೆ. ಮನೆಯೊಳಗೆ ನುಗ್ಗಿದ ನೀರನ್ನು ಹೊರಹಾಕಲು ಜನರು ಹರಸಾಹಸ ಪಡುವಂತಾಗಿದೆ. ಜೊತೆಗೆ ಬಡಾವಣೆಗಳಲ್ಲಿಯ ಅಂಗಡಿಮುಂಗಟ್ಟುಗಳಿಗೂ ನೀರು ನುಗ್ಗಿದ್ದು ಸರಕು ಸರಂಜಾಮುಗಳು ನೀರಿನಲ್ಲಿ ಹಾಳಾಗಿವೆ. ಇದರಿಂದಾಗಿ ಜನರು ಪರದಾಡುವಂತಾಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ.

ಅಪಾರ ಬೆಳೆ ಹಾನಿ
ಕಳೆದ ಆಗಸ್ಟ್‌ನಲ್ಲಿ ಪ್ರವಾಹ, ಸೆಪ್ಟೆಂಬರ್ ಮಳೆ ಆವಾಂತರ ಈಗ ಮತ್ತೊಮ್ಮೆ ರಣಮಳೆಯಿಂದಾಗಿ ರೈತರ ಸ್ಥಿತಿಯಂತೂ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಜಿಲ್ಲೆಯಲ್ಲಿ ಒಟ್ಟು 75 ಸಾವಿರ ಹೆಕ್ಟೇರ್‌ಗೂ ಅಧಿಕ ಬೆಳೆ ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಅದರಲ್ಲೂ ಸುಮಾರು 30 ಸಾವಿರ ಹೆಕ್ಟೇರ್‌ಗಳಲ್ಲಿ ಬೆಳೆಯಲಾಗಿದ್ದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದ್ದರೇ, ಮುಂಗಾರು ಬೆಳೆಗಳಾದ ಕಬ್ಬು, ಸೂರ್ಯಕಾಂತಿ, ಸೋಯಾ, ಜೋಳ, ಮೆಕ್ಕೆಜೋಳ, ಸಜ್ಜೆ ಜೊತೆಗೆ ಈಗ ಬಿತ್ತನೆ ಮಾಡಿದ್ದ ತೊಗರಿ, ಹೆಸರೂ ಬೆಳೆಗಳು ಹಾಳಾಗಿದೆ. ಅದರಲ್ಲೂ ಆಳೆತ್ತರಕ್ಕೆ ಬೆಳೆದು ನಿಂತಿದ್ದ ಕಬ್ಬು ಸಹ ಮಳೆಯ ಹೊಡೆತಕ್ಕೆ ನೆಲಕ್ಕುರುಳುತ್ತಿರುವುದು ರೈತರಿಗೆ ನಿದ್ದೆಗೆಡಿಸಿದೆ.

ತೆರೆಯದ ಕಾಳಜಿ ಕೇಂದ್ರ
ಜಿಲ್ಲೆಯಲ್ಲಿ ರಕ್ಕಸ ಮಳೆಯಿಂದಾಗಿ ಈಗಾಗಲೇ 769 ಮನೆಗಳಿಗೆ ಹಾನಿಯಾಗಿದ್ದು, ನೋಡ ನೋಡುತ್ತಿದ್ದಂತೆ ಗೋಡೆಗಳು ಉರುಳಿ ಬೀಳುತ್ತಿವೆ. ಮನೆಗಳು ಸೋರುತ್ತಿದ್ದು, ಬೀಳುವ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ನೂರಾರು ಕುಟುಂಬಗಳಿಗೆ ಆಸರೆ ಇಲ್ಲವಾಗಿದೆ. ಆದಾಗ್ಯೂ ಸಹ ಕಚೇರಿ ಬಿಟ್ಟು ಹೊರಬರದ ಅಧಿಕಾರಿಗಳು ಕನಿಷ್ಠ ಪಕ್ಷ ಕಾಳಜಿ ಕೇಂದ್ರಗಳನ್ನು ತೆರೆಯುತ್ತಿಲ್ಲ. ಇದರಿಂದ ಹುನಗುಂದ ಪಟ್ಟಣದ ಜನರು ಮಂಗಳವಾರ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದರು. ರಸ್ತೆ ತಡೆ ಮೂಲಕ ವಾಹನ ಸಂಚಾರ ಸ್ಥಗಿತಗೊಳಿಸಿದ್ದರು. ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿ ತಾಲೂಕು ಆಡಳಿತ ಹಾಗೂ ಕ್ಷೇತ್ರದ ಶಾಸಕರ ವಿರುದ್ಧ ಕಿಡಿಕಾರಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net