ಮಳೆ, ಪ್ರವಾಹಕ್ಕೆ 1500 ಕೋಟಿ ರೂ. ಹಾನಿ

BKT 24-1
Published on

ಬಾಗಲಕೋಟೆ: ಪ್ರಕೃತಿ ವಿಕೋಪದಿಂದ ಪ್ರಸಕ್ತ ವರ್ಷ ಜಿಲ್ಲೆಗೆ ದೊಡ್ಡಮಟ್ಟದ ಆಘಾತವಾಗಿದೆ. ಮಳೆ, ಪ್ರವಾಹದಿಂದ ಅಂದಾಜು 1500 ಕೋಟಿ ರೂ. ಹಾನಿಯಾಗಿದೆ. ಸಮೀಕ್ಷಾ ಕಾರ್ಯ ಪೂರ್ಣಗೊಂಡ ಬಳಿಕ ನಿಖರವಾದ ನಷ್ಟ ಗೊತ್ತಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ನಗರದ ಬಿವಿವಿ ಸಂಘದ ಇಂಜಿನಿಯರಿಂಗ್ ಕಾಲೇಜು ಸಭಾಭವನದಲ್ಲಿ ಶುಕ್ರವಾರ ಸಂಜೆ ಪ್ರವಾಹ ಹಾಗೂ ಮಳೆ ಹಾನಿ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 25 ರಿಂದ ಸೆಪ್ಟೆಂಬರ್ 13 ವರೆಗೆ 857 ಕೋಟಿ ರೂ., ಸೆಪ್ಟೆಂಬರ್ 14 ರಿಂದ 30ರ ವರೆಗೆ 187 ಕೋಟಿ ರೂ., ಅಕ್ಟೋಬರ್ 1 ರಿಂದ 15 ರವರೆಗೆ 483 ಕೋಟಿ ರೂ. ಸೇರಿ ಒಟ್ಟಾರೆ ಮಳೆ, ಪ್ರವಾಹದಿಂದ 1500 ಕೋಟಿ ರೂ. ಹಾನಿಯಾಗಿದೆ ಎಂದರು.

ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳ ಪ್ರವಾಹಕ್ಕೆ 31 ಗ್ರಾಮಗಳು ಹಾಗೂ 270 ಕುಟುಂಬಗಳು ಬಾಧಿತವಾಗಿದ್ದವು. ಇವುಗಳ ಪೈಕಿ 67 ಕುಟುಂಬಗಳ 270 ಜನರಿಗೆ 4 ಪರಿಹಾರ ಕೇಂದ್ರಗಳಲ್ಲಿ ತಾತ್ಕಾಲಿಕವಾಗಿ ಆಶ್ರಯ ಒದಗಿಸಲಾಗಿತ್ತು. ಮಳೆ ನೀರು ನುಗ್ಗಿ ಸಂಕಷ್ಟದ ಪರಿಸ್ಥಿತಿ ಎದುರಿಸಿದ ಜಿಲ್ಲೆಯ 353 ಕುಟುಂಬಗಳಿಗೆ ತಲಾ 10 ಸಾವಿರ ರೂ. ದಂತೆ ತುರ್ತು ಪರಿಹಾರ ನೀಡಲಾಗಿದೆ. ಪ್ರವಾಹಕ್ಕೆ ಬಾದಾಮಿ ತಾಲೂಕಿನ ಓರ್ವ ಹಾಗೂ ಸಿಡಿಲು ಬಡಿದು ಮುಧೋಳ ತಾಲೂಕಿನ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಪರಿಹಾರ ಒದಗಿಸಲು ಕ್ರಮ ವಹಿಸಲಾಗಿದೆ. 15 ಜಾನುವಾರಗಳು ಮೃತಪಟ್ಟಿದ್ದು, ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.

ಇನ್ನು 66 ಸಾವಿರ ಹೆಕ್ಟೇರ್ ಕೃಷಿ, 47 ಸಾವಿರ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಅತಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆ ನಾಶವಾಗಿದೆ. ಪರಿಹಾರ ತಂತ್ರಾಂಶದ ಮೂಲಕ 7373 ರೈತರಿಗೆ 728 ಲಕ್ಷ ರೂ. ಇನ್‌ಪುಟ್ ಸಬ್ಸಿಡಿ ನೀಡಲಾಗಿದೆ. ಒಟ್ಟು 5881 ಮನೆಗಳು ಹಾನಿಯಾಗಿದ್ದು, ಈ ಪೈಕಿ 361 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾಗೂ 5520 ಮನೆಗಳು ಭಾಗಶಃ ಹಾನಿಯಾಗಿರುತ್ತವೆ. ಜಂಟಿ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ. ಮಳೆಗೆ ನಗರ, ಗ್ರಾಮೀಣ, ಜಿಲ್ಲಾ ಮುಖ್ಯ ರಸ್ತೆ, ರಾಜ್ಯ ಹೆದ್ದಾರಿಗಳು ಹಾನಿಯಾಗಿವೆ. ಲೋಕೋಪಯೋಗಿ ಇಲಾಖೆ ಸೇರಿದ 440 ಕಿ.ಮೀ., ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ 1450 ಕಿ.ಮೀ. ಗ್ರಾಮೀಣ ರಸ್ತೆ, 34 ಬ್ರಿಡ್ಜ್ ಕಂ ಬ್ಯಾರೇಜ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ 29 ನೀರಿನ ಕಾಮಗಾರಿ, ಸಣ್ಣ ನೀರಾವರಿ ಇಲಾಖೆಗೆ ಸೇರಿದ 43 ಕಾಲುವೆ, ನಾಲಾ, 15 ಏತ ನೀರಾವರಿ, 155 ಶಾಲಾ ಕೊಠಡಿಗಳು, 30 ಅಂಗನವಾಡಿ ಕಟ್ಟಡಗಳು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಬರುವ 500 ಕಿ.ಮೀ. ರಸ್ತೆ, 24 ಕಟ್ಟಡ ಹಾನಿಯಾಗಿವೆ ಎಂದು ತಿಳಿಸಿದರು.

ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಜಿ.ಪಂ ಸಿಇಒ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಇದ್ದರು.

ಮೋದಿ ಸರ್ಕಾರದಿಂದ ಅತಿ ಹೆಚ್ಚು ಪರಿಹಾರ
ಕೇಂದ್ರ ಸರ್ಕಾರದಿಂದ ಪರಿಹಾರ ಬಂದಿಲ್ಲ ಅಂತ ಸುಖಾಸುಮ್ಮನೆ ಅಪಪ್ರಚಾರ ಮಾಡುವುದು ಸರಿಯಲ್ಲ. ಸ್ವಾತಂತ್ರೃ ನಂತದಲ್ಲಿ ಯಾವ ಸರ್ಕಾರಗಳು ನೀಡದಷ್ಟು ಪರಿಹಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ನೀಡಿದೆ. ಈ ಬಗ್ಗೆ ಸಂಪೂರ್ಣ ದಾಖಲಾತಿಯೊಂದಿಗೆ ರಾಜ್ಯ ಜನತೆ ಮುಂದೆ ಇಡುತ್ತೇನೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಾರಜೋಳ
ಸಭೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ವಿವಿಧ ಇಲಾಖೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕಳೆದ ಸಾರಿ ನಾನು, ಸಚಿವ ವಿ.ಸೋಮಣ್ಣ ಮುಧೋಳ ತಾಲೂಕಿನಲ್ಲಿ ಹಾನಿಯಾದ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವು. ಪರಿಹಾರದ ಪಟ್ಟಿಯಲ್ಲಿ ಆ ಮನೆಯೇ ಇರಲಿಲ್ಲ. ದಲ್ಲಾಳಿಗಳೊಂದಿಗೆ ಸಿಬ್ಬಂದಿ ಶಾಮೀಲು ಆಗಿ ಪರಿಹಾರ ಪಟ್ಟಿಯಲ್ಲಿ ಹೆಸರು ಬದಲಾಯಿಸುವ ಪ್ರಕರಣ ಬೆಳಕಿಗೆ ಬಂದಿತು. ಈ ಸಂಬಂಧ ಮೂರು ಜನ ಸಿಬ್ಬಂದಿಯನ್ನು ಈಗಾಗಲೇ ಅಮಾನತು ಮಾಡಲಾಗಿದೆ. 15 ದಿನಗಳ ನಂತರ ಪರಿಶೀಲನೆ ನಡೆಸುತ್ತೇನೆ. ಇಂತಹ ಲೋಪದೋಷ ಕಂಡು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿಯನ್ನು ಅಮಾನತು ಮಾಡಲಾಗುವುದು. ಅಲ್ಲದೆ, ಕ್ರಿಮಿನಲ್ ಪ್ರಕರಣ ದಾಖಲಿಸಿ ತಪ್ಪಿತಸ್ಥರಿಂದ ಪರಿಹಾರ ಮೊತ್ತದ ಹಣ ವಸೂಲಿ ಮಾಡಲಾಗುವುದು ಎಂದು ಡಿಸಿಎಂ ಗೋವಿಂದ ಕಾರಜೋಳ ಎಚ್ಚರಿಕೆ ನೀಡಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net