25 ಸಾವಿರ ಹೆಕ್ಟೇರ್ ಬೆಳೆ ಹಾನಿ

BKT 15-1
Published on

ಬಾಗಲಕೋಟೆ: ಅಕ್ಟೋಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ ಅಬ್ಬರಿಸಿದ ರಣಚಂಡಿ ಮಳೆಗೆ ಬಾಗಲಕೋಟೆ ಜಿಲ್ಲೆ ಅಪಾರ ನಷ್ಟಕ್ಕೆ ತುತ್ತಾಗಿದೆ. ರಕ್ಕಸ ಮಳೆ, ಪ್ರವಾಹ ಇಡೀ ಜಿಲ್ಲೆಯ ಬದುಕನ್ನು ಅಪೋಷನ್ ಮಾಡತೊಡಗಿದೆ.

ಐದು ದಿನ ಅಬ್ಬರಿಸಿದ ರಣಮಳೆಯಿಂದ ಜಿಲ್ಲೆಯಲ್ಲಿ ಮತ್ತೆ 25 ಸಾವಿರ ಹೆಕ್ಟೇರ್ ಪ್ರದೇಶದ ಕೃಷಿ, ತೋಟಗಾರಿಕೆ ಬೆಳೆಯನ್ನು ನುಂಗಿ ಹಾಕಿದೆ. ಇದರ ಜತೆಗೆ 2312 ಮನೆಗಳಿಗೆ ದಕ್ಕೆಯಾಗಿದ್ದು, ಆ ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿದೆ.

ಮಲಪ್ರಭಾ ನದಿ ಅಬ್ಬರದಿಂದ ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದ ಸೇತುವೆಯಲ್ಲಿ ಕೊಚ್ಚಿ ಹೋಗಿದ್ದ ಗದಗ ಜಿಲ್ಲೆಯ ವ್ಯಕ್ತಿ ಮೃತಪಟ್ಟರೆ ಇತ್ತ ಮಳೆ ಆರ್ಭಟದಿಂದ ದನ-ಕರು, ಆಡು-ಕುರಿ ಸೇರಿ 15 ಪ್ರಾಣಿಗಳು ಬಲಿಯಾಗಿವೆ.
ಇಷ್ಟೆಲ್ಲ ರಾದ್ಧಾಂತ ಮಾಡಿ ಜನರನ್ನು ಕಣ್ಣೀರಲ್ಲಿ ಕೈತೊಳೆಯಲು ಹಚ್ಚಿದ ವರುಣನ ಅಬ್ಬರ ಗುರುವಾರ ತಗ್ಗಿತು ಎನ್ನುವಷ್ಟರಲ್ಲಿ ಇದೀಗ ಜಿಲ್ಲೆಯಲ್ಲಿ ಇರುವ ಕೃಷ್ಣಾ ಮತ್ತು ಘಟಪ್ರಭಾ ನದಿಗಳು ಅಬ್ಬರಿಸಲು ಸಜ್ಜಾಗಿವೆ.

ನದಿಗಳಲ್ಲಿ ನೀರಿನ ಹರಿವು ಹೆಚ್ಚಿದ್ದು, ಇದರಿಂದ ಈಗಾಗಲೇ ಅನೇಕ ಸೇತುವೆಗಳು ಮುಳುಗಿದ್ದು, ಕೆಲ ಗ್ರಾಮಗಳ ಸಂಪರ್ಕ ಬಂದ್ ಆಗಿವೆ. ಘಟಪ್ರಭಾ ನದಿಯಲ್ಲಿ ಅಬ್ಬರದಿಂದಾಗಿ ಈಗಾಗಲೇ ಮುಧೋಳ ತಾಲೂಕಿನ ಮಿರ್ಜಿ, ಚನಾಳ, ಜಾಲಿಬೇರ, ಜಂಬಗಿ ಕೆಡಿ, ಕಸಬಾ ಜಂಬಗಿ, ಮುಧೋಳ, ಜೀರಗಾಳ, ಆಲಗುಂಡಿ ಸೇತುವೆಗಳು ಮುಳುಗಿವೆ. ಮಾಚಕನೂರು ಹೊಳೆಬಸವೇಶ್ವರ ದೇವಸ್ಥಾನ ಜಲಾವೃತವಾಗಿದ್ದರೆ ಮಾಚಕನೂರು ಸೇತುವೆ ಇನ್ನು ಮುಳುಗಿಲ್ಲ. ಅಲ್ಲಿ ಸಂಪರ್ಕಕ್ಕೆ ಯಾವುದೇ ತೊಂದರೆ ಆಗಿಲ್ಲ.

ಕೃಷ್ಣಾ ನದಿಗೆ ಒಂದು ಲಕ್ಷ ಕ್ಯೂಸೆಕ್ ನೀರು

ಇನ್ನು ಕೃಷ್ಣಾ ನದಿಯಲ್ಲೂ ನೀರಿನ ಒಳಹರಿವು ಹೆಚ್ಚಾಗಿದೆ. ಕೋಯ್ನದಿಂದ ಬಂದ 40 ಸಾವಿರ ಕ್ಯೂಸೆಕ್ ಸೇರಿ ಬೆಳಗಾವಿ ಜಿಲ್ಲೆಯ ಹಳ್ಳಕೊಳ್ಳಗಳು, ಜಿಲ್ಲೆಯ ಕೃಷ್ಣಾ ತೀರದಲ್ಲಿ ಸುರಿಯುತ್ತಿರುವ ಮಳೆ ನೀರು ಸೇರಿಕೊಂಡು ಅಂದಾಜು ಒಂದು ಲಕ್ಷ ಕ್ಯೂಸೆಕ್ ನೀರು ಹಿಪ್ಪರಗಿ ಜಲಾಶಯದಿಂದ ಹರಿದು ಬರುತ್ತಿದೆ. ನದಿ ನೀರು ಹೆಚ್ಚಳ ಹಾಗೂ ಮೇಲೆ ಮಳೆ ಆಗುತ್ತಿರುವ ಪರಿಣಾಮ ತುಬಚಿ, ಶೂರ್ಪಾಲಿ ಸಂಪರ್ಕದ ಎಚ್.ಡಿ. ದೇವೇಗೌಡ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ರಸ್ತೆಯ ಮೇಲೆ ನಾಲ್ಕೈದು ಅಡಿ ನೀರು ಹರಿಯುತ್ತಿದ್ದು, ಸಂಪರ್ಕ ಬಂದ್ ಆಗಿದೆ. ಮುತ್ತೂರ ನಡುಗಡ್ಡೆಗೆ ನೀರು ಆವರಿಸಿದೆ. ಮತ್ತೊಂದೆಡೆ ತುಬಚಿ ಹಾಗೂ ಅಥಣಿ ತಾಲೂಕಿನ ಝಿಂಜರವಾಡ ಸಂಪರ್ಕ ರಸ್ತೆಯೂ ಬಂದ್ ಆಗಿದೆ. ನೀರಿನ ಒಳಹರಿವು 2.50 ಲಕ್ಷ ದಾಟಿದಲ್ಲಿ ಮತ್ತೆ ನದಿ ಪಾತ್ರಗಳ ಗ್ರಾಮಗಳು ಪ್ರವಾಹಕ್ಕೆ ಸಿಲುಕುವ ಅಪಾಯ ಇದೆ.

ಮುಂದುವರೆದ ಅವಾಂತರಗಳು
ಜಿಲ್ಲೆಯಲ್ಲಿ ಐದು ದಿನ ಧೋ ಅಂತ ಸುರಿದಿದ್ದ ಮಳೆರಾಯ ಗುರುವಾರ ಬಹುತೇಕ ಕಡೆಗೆ ಬಿಡುವು ನೀಡಿದ್ದು, ಜನರು ಸಮಾಧಾನದ ನಿಟ್ಟುಸಿರುವ ಬಿಡುವಂತೆ ಮಾಡಿದೆ. ಆದರೆ, ಈ ಐದು ದಿನ ಬಿದ್ದ ಮಳೆಯಿಂದಾಗಿ ಇನ್ನು ಗ್ರಾಮೀಣ ಪ್ರದೇಶದಲ್ಲಿ ಮನೆಗಳು ಸೋರುವುದು, ಗೋಡೆಗಳು ಕುಸಿಯುವುದು, ನೀರಿನ ಸೆಲೆಗಳು ಕೀಳುವುದು ಮುಂದುವರಿದಿದೆ. ಜಲಾವೃತ ಆಗಿರುವ ಬೆಳೆಗಳು ಪರಿಸ್ಥಿತಿ ಹಾಗೆಯೇ ಇದೆ.

ತುಬಚಿಯಿಂದ ಕಾಡಗಿ ಕ್ರಾಸ್ ಪ್ರಮುಖ ರಸ್ತೆಗೆ ಹಳ್ಳದ ನೀರು ಬಂತು ಸಂಚಾರಕ್ಕೆ ತೊಂದರೆ ಆಗಿದ್ದು, ಅಪಾಯಮಟ್ಟದಲ್ಲಿ ಹರಿಯುತ್ತಿದೆ. ಧಾರಾಕಾರ ಮಳೆಯಿಂದಾಗಿ ದನಕರುಗಳಿಗೆ ಮೇವಿನ ಸಮಸ್ಯೆ ಉಂಟಾಗಿದೆ. ಜಮೀನುಗಳಿಗೆ ಹೋಗಲು ತೊಂದರೆ ಆಗಿದೆ. ತುಂಬಿ ನದಿಯಿಂದ ನಿಂತಿರುವ ನೀರಲ್ಲಿ ಜನರು ಎದ್ದುಬಿದ್ದು ದನಕರುಗಳಿಗೆ ಮೇವು ತರುವಂತಾಗಿದೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net