ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

BKT 111
Published on

ಬಾಗಲಕೋಟೆ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರ, ರಾಜ್ಯ ಸರ್ಕಾರ ವಿರುದ್ಧ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದಿಂದ ನಗರದ ಕಾಲೇಜು ರಸ್ತೆ ಬಳಿಯ ಪೆಟ್ರೋಲ್ ಬಂಕ್ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ಮುಖಂಡರು, ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೋವಿಡ್ ನಿರ್ವಹಣೆಯಲ್ಲಿ ಹಾಗೂ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಎಸ್.ಆರ್.ಪಾಟೀಲ ಮಾತನಾಡಿ, ಕೋವಿಡ್ ಸೋಂಕು ದೊಡ್ಡಮಟ್ಟದಲ್ಲಿ ಸಂಕಷ್ಟ ತಂದೊಡ್ಡಿದೆ. ಈ ವೇಳೆಯಲ್ಲಿ ಪೆಟ್ರೋಲ್, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬಡವರು, ಕಾರ್ಮಿಕರು, ಸಾಮಾನ್ಯ ವರ್ಗದ ಜನರಿಗೆ ದಿಕ್ಕು ತೋಚದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮನಮೋಹನ್ ಸಿಂಗ್ ಅಧಿಕಾರದಲ್ಲಿದ್ದಾಗ ಪೆಟ್ರೋಲ್, ಅಡುಗೆ ಅನಿಲ ಬೆಲೆ ಒಂದು ರೂ. ಏರಿಕೆ ಮಾಡಿದರೂ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದರು. ಈಗ ಅಧಿಕಾರದಲ್ಲಿ ಇದ್ದಾರೆ. ಆದರೆ ಬೆಲೆ ಏರಿಕೆ ಬಗ್ಗೆ ತುಟಿಕ್, ಪಿಟಕ್ ಅನ್ನುತ್ತಿಲ್ಲ. ದೇಶದಲ್ಲಿ ನರೇಂದ್ರ ಮೋದಿ, ಅಮಿತ್ ಷಾ, ಅಂಬಾನಿ, ಅದಾನಿ ನಾಲ್ಕು ಜನ ಆಡಳಿತ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಡಿಸಿಎಂ ಗೋವಿಂದ ಕಾರಜೋಳ ಮುತ್ಸದ್ದಿ ರಾಜಕಾರಣಿ. ಕಾಂಗ್ರೆಸ್ ಪಕ್ಷದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರಕ್ಕೆ ಬರಬೇಕು ಎನ್ನುವ ಆಶಯ ಇಲ್ಲ. ನೀವೇ(ಬಿಜೆಪಿ) ಅಧಿಕಾರದಲ್ಲಿ ಇರೀ. ಆದರೀಗ ಜನರಿಗೆ ಒಳ್ಳೆಯ ಆಡಳಿತ ನೀಡಿ ಎಂದು ತಿರುಗೇಟು ನೀಡಿದರು.

2013 ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಮೂವರು ಸಿಎಂ ಆದರು. ನಂತರ ಅಧಿಕಾರ ಕಳೆದುಕೊಂಡ ಬಿಜೆಪಿಗೆ ವಿಪಕ್ಷ ಸ್ಥಾನ ಕೂಡ ಸಿಗಲಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಜನ ಕಿತ್ತೊಗೆಯಲಿದ್ದಾರೆ. ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ ಎಂದು ಹೇಳಿದರು.

ಜಿಲ್ಲಾ ಘಟಕ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಾಜಿ ಸಚಿವ ಎಚ್.ವೈ.ಮೇಟಿ, ಮಾಜಿ ಶಾಸಕ ಜೆ.ಟಿ.ಪಾಟೀಲ, ಮುಖಂಡರಾದ ಆನಂದ ಜಿಗಜಿನ್ನಿ, ನಿಂಗನಗೌಡ ಪಾಟೀಲ, ನಾಗರಾಜ ಹದ್ಲಿ, ಹಾಜಿಸಾಬ ದಂಡಿನ, ಎಸ್.ಎನ್.ರಾಂಪೂರ, ಚನ್ನವೀರ ಅಂಗಡಿ, ಹನುಮಂತ ರಾಕುಂಪಿ, ಹನುಮಂತ ಗೋರವರ, ವಿರೇಶ ಹುಂಡೇಕಾರ, ರಕ್ಷಿತಾ ಈಟಿ, ರೇಣುಕಾ ನ್ಯಾಮಗೌಡ ಇತರರು ಇದ್ದರು.

ಮೋದಿ ವಿರುದ್ಧ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ ಅವರೇ ಎಲ್ಲ ಸಮಯದಲ್ಲಿ ಎಲ್ಲರನ್ನು ಮೋಸಗೊಳಿಸಲು ಸಾಧ್ಯವಿಲ್ಲ. ದೇಶದ 140 ಕೋಟಿ ಜನ ನಿಮ್ಮನ್ನು ಪ್ರಶ್ನಿಸುವಂತಾಗಿದೆ. ಕೋವಿಡ್ ಪರಿಣಾಮ ಸಾವಿರಾರು ಜನ ಜೀವ ಕಳೆದುಕೊಂಡಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಆಕ್ಸಿಜನ್, ವೆಂಟಿಲೇಟರ್, ವ್ಯಾಕ್ಸಿನ್ ಒದಗಿಸಲು ಸಾಧ್ಯವಾಗಲಿಲ್ಲ. ಜನ ಅಚ್ಛೇ ದಿನ ಬೇಡ, ಕಾಂಗ್ರೆಸ್ ಪಕ್ಷ ಕೊಟ್ಟ ಉತ್ತಮ ದಿನ ಕೊಡಿ ಅಂತಾ ಕೇಳುತ್ತಿದ್ದಾರೆ. ಮೋದಿ ಚಹಾ ಮಾರುತ್ತಿದ್ದರು ಎನ್ನುವ ಬಗ್ಗೆ ಗೊತ್ತಿಲ್ಲ. ಆದರೆ, ದೇಶ ಮಾರಾಟ ಮಾಡುತ್ತಿರುವುದು ಸತ್ಯ. ಅಂಬಾನಿ, ಅದಾನಿ ಅಂತಹ ಉದ್ಯಮಿಗಳು ದೇಶವನ್ನು ಆಳುತ್ತಿದ್ದಾರೆ ಎಂದು ಎಸ್.ಆರ್.ಪಾಟೀಲ ವಾಗ್ದಾಳಿ ನಡೆಸಿದರು.

ಕೋವಿಡ್ ಜನ ಜೀವನಕ್ಕೆ ದೊಡ್ಡ ಮಟ್ಟದಲ್ಲಿ ಹೊಡೆತ ನೀಡಿದೆ. ಇಂತಹ ಸಂಕಷ್ಟ ಸಂದರ್ಭದಲ್ಲಿ ಬೆಲೆ ಏರಿಕೆಯಿಂದ ತೀವ್ರವಾಗಿ ಆಘಾತವಾಗಿದೆ. ಬಿಜೆಪಿ ಸರ್ಕಾರಕ್ಕೆ ಜನ ಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ. ಪೆಟ್ರೋಲ್, ಗೊಬ್ಬರ, ಅಗತ್ಯ ವಸ್ತುಗಳ ಬೆಲೆ ಕೇಳಿಯೇ ಸುಸ್ತು ಹೊಡೆಯುವಂತಾಗಿದೆ.
- ಎಚ್.ವೈ.ಮೇಟಿ ಮಾಜಿ ಸಚಿವ

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net