

ಬಾಗಲಕೋಟೆ: ಬಣ್ಣದೋಕುಳಿ ಆಡುವ ಹಬ್ಬಕ್ಕೆ ಕೆಲ ದಿನಗಳು ಬಾಕಿಯಿದ್ದು, ಜಿಲ್ಲೆಯಲ್ಲಿ ಶಿವರಾತ್ರಿ ಅಮಾವಾಸ್ಯೆ ದಿನದಿಂದ ರಂಗಿನ ಹಬ್ಬದ ಗುಂಗು ಶುರುವಾಗಿದೆ! ಅಮಾವಾಸ್ಯೆ ಮರುದಿನ ಆಗಸದಲ್ಲಿ ಚಂದ್ರ ಕಾಣಿಸಿಕೊಳ್ಳುತ್ತಿದ್ದಂತೆ ಹೋಳಿ ಹಬ್ಬದ ಆಚರಣೆಗೆ ಚಾಲನೆ ನೀಡಲಾಗಿದ್ದು, ಬಾಗಲಕೋಟೆ ನಗರದ ಬೀದಿ ಬೀದಿಗಳಲ್ಲಿ ಹಲಗೆ ಬಾರಿಸುವುದು ಜೋರಾಗಿದೆ. 15 ದಿನಗಳ ಕಾಲ ವಿಶಿಷ್ಟವಾಗಿ ಬಾರಿಸುವ ಹಲಗೆ ಗುಂಗು ಜನರ ಕರ್ಣಪಟಲದಲ್ಲಿ ರಿಂಗಣಿಸುತ್ತಿದೆ.
ಹೋಳಿ ಹುಣ್ಣಿಮೆ ಸಂದರ್ಭದಲ್ಲಿ ಉಳಿದೆಲ್ಲ ಕಡೆಗಳಿಗಿಂತ ಕೋಟೆನಗರಿಯಲ್ಲಿ ಹಲಗೆ ಸದ್ದು ಹೆಚ್ಚು. ಪುಟಾಣಿಗಳಿಂದ ಹಿಡಿದು ಯುವಕರು ಬಗೆಬಗೆ ಶೈಲಿಯಲ್ಲಿ ಹಲಗೆ ಬಾರಿಸುತ್ತ ಜನರನ್ನು ಆಕರ್ಷಿಸುತ್ತಾರೆ. ಬಾಗಲಕೋಟೆ ಅಷ್ಟೇ ಅಲ್ಲದೆ ಬೀಳಗಿ, ಮುಧೋಳ, ಜಮಖಂಡಿ, ಬಾದಾಮಿ, ಹುನಗುಂದ, ಇಳಕಲ್ಲ, ರಬಕವಿ ಬನಹಟ್ಟಿ ಸೇರಿ ಜಿಲ್ಲೆಯಲ್ಲಿ ಈಗಾಗಲೇ ಹಲಗೆ ನಾದ ಪ್ರತಿಧ್ವನಿಸುತ್ತಿದೆ. ಸಂಜೆಯಾದರೆ ಸಾಕು, ಮಕ್ಕಳ ಕೈ-ಬಾಯಿಗೆ ಬಿಡುವಿಲ್ಲದ ಕೆಲಸ! ಪುಟಾಣಿಗಳು ಕಾಮಣ್ಣನನ್ನು ಬೈಯುತ್ತ, ಬಾಯಿ ಬಡಿದುಕೊಳ್ಳುತ್ತ ಹಲಗೆ ನಾದಕ್ಕೆ ಕುಣಿದು ಕುಪ್ಪಳಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ವ್ಯಾಪಾರ ಜೋರು !
ಇನ್ನು ಹೋಳಿ ಹುಣ್ಣಿಮೆ ಅಂಗವಾಗಿ ಯುವಕರು, ಮಕ್ಕಳು ಸೇರಿದಂತೆ ಎಲ್ಲರೂ ಹಲಗೆ ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ರಸ್ತೆ ಬದಿಯಲ್ಲಿ ಹಲಗೆ ಮಾರಾಟವೂ ಜೋರಾಗಿದ್ದು, ಈ ದಿನಗಳಲ್ಲಿ ಹಲಗೆ ವ್ಯಾಪಾರಿಗಳಿಗೆ ಭರ್ತಿ ವ್ಯಾಪಾರ. ಬಾಗಲಕೋಟೆಯಲ್ಲಿ ಈಗಾಗಲೇ ರಂಗಿನ ಹಬ್ಬದ ಅಲೆಯಲ್ಲಿ ಜನರು ತೇಲುತ್ತಿದ್ದಾರೆ. ಈ ಸಂಭ್ರಮವನ್ನು ಮತ್ತಷ್ಟು ಇಮ್ಮಡಿಗೊಳಿಸಲು ಕುಲಕಸುಬಾದ ಹಲಗೆ ತಯಾರಿಯಲ್ಲಿ ಹಿಂದು ಡೊಹರ್ ಜನಾಂಗ ತಲ್ಲೀನವಾಗಿದೆ. ಬಾಗಲಕೋಟೆ ನಗರ ಸೇರಿ ರಬಕವಿ-ಬನಹಟ್ಟಿ, ಜಮಖಂಡಿ, ರಾಂಪುರ, ತೇರದಾಳ ಮತ್ತಿತರ ಕಡೆ ಹಲಗೆಗಳನ್ನು ಸಿದ್ಧಗೊಳಿಸಲಾಗುತ್ತದೆ. ಈ ಹೋಳಿ ಹಬ್ಬ ಹಲಗೆ ವ್ಯಾಪಾರಿಗಳಿಗೆ ಸೀಸನ್‌ವಿದ್ದಂತೆ. 15 ದಿನಗಳಲ್ಲಿ ಪ್ರತಿಯೊಬ್ಬ ವ್ಯಾಪಾರಿ ಅಂದಾಜು 90 ರಿಂದ 1ಲಕ್ಷ ರೂ. ವರೆಗೆ ವ್ಯಾಪಾರ ಮಾಡುತ್ತಾರೆ.
150 ರಿಂದ 1500 ವರೆಗೂ ಹಲಗೆ ಬೆಲೆ
ಹಲಗೆಯನ್ನು ತಯಾರಿಸಲು ರಾಯಚೂರು ಹಾಗೂ ಬೇರೆ ಕಡೆಗಳಿಂದ ಚರ್ಮ ಖರೀದಿಸಲಾಗುತ್ತದೆ. ಅಂದಾಜು 120ಕ್ಕೂ ಹೆಚ್ಚು ಕರುಗಳ ಎಮ್ಮೆ ಚರ್ಮ ತಂದು ಹಲಗೆ ತಯಾರಿಸಲಾಗುತ್ತದೆ. ಫೈಬರ್ ಹಲಗೆಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಇದರಿಂದ ಚರ್ಮದ ಹಲಗೆ ವ್ಯಾಪಾರಕ್ಕೆ ಸ್ವಲ್ಪ ಅಡ್ಡಿಯಾಗಿದೆ. ಆದರೆ ಬಾಗಲಕೋಟೆಯಲ್ಲಿ ನಾದಕ್ಕೆ ಮಾರು ಹೋಗುವ ಜನರು ಚರ್ಮದ ಹಲಗೆಯನ್ನು ಮುಗಿಬಿದ್ದು ಕೊಂಡುಕೊಳ್ಳುತ್ತಾರೆ. ಒಂದು ಹಲಗೆ ತಯಾರಿಸಲು 10 ರಿಂದ 15 ದಿನ ಬೇಕು. 150 ರಿಂದ 1500 ರೂ.ವರೆಗೆ ಹಲಗೆ ಬೆಲೆ ಇದೆ. ಪ್ರತಿದಿನ 10ಕ್ಕಿಂತಲೂ ಹೆಚ್ಚು ಹಲಗೆ ಸಿದ್ಧಪಡಿಸುತ್ತೇವೆ. ಎಲ್ಲವೂ ಮಾರಾಟವಾಗುತ್ತವೆ ಎನ್ನುತ್ತಾರೆ ಬಾಗಲಕೋಟೆಯ ಹಲಗೆ ತಯಾರಕ ಹಾಗೂ ವ್ಯಾಪಾರಿಗಳು.
ಹೋಳಿ ಹಬ್ಬವೇ ನಮ್ಮ ಜೀವನಕ್ಕೆ ದೊಡ್ಡ ಆಧಾರ. ಬೇರೆ ದಿನಗಳಲ್ಲಿ ಮಕ್ಕಳು ಪೇಂಟಿಂಗ್ ಹಾಗೂ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಓಕುಳಿ ಬಂತೆಂದರೆ ವ್ಯಾಪಾರ ಜೋರಾಗಿ ಲಾಭನೂ ಬರುತ್ತದೆ. ಉಳಿದ ದಿನ ಲುಕ್ಸಾನ ಆಗುತ್ತದೆ. ಫೈಬರ್ ಹಲಗೆ ಬದಲು ಹಲವರು ಚರ್ಮದ ಹಲಿಗೆಗಳನ್ನು ಖರೀದಿ ಮಾಡುತ್ತಾರೆ.
ಯಲ್ಲಪ್ಪ ನಾರಾಯಣಕರ, ಹಲಗೆ ತಯಾರಕರು, ವ್ಯಾಪಾರಸ್ಥರು ಬಾಗಲಕೋಟೆ
ನಾಲ್ಕನೇ ದಿನಕ್ಕೆ ಪರವಾನಗಿ ನಿರಾಕರಣೆ
ಬಾಗಲಕೋಟೆ ನಗರದಲ್ಲಿ ಹೋಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತದೆ. ಈ ಸಾರಿ ಮಾ.9 ರಂದು ಬೆಳಗ್ಗೆ 5 ಗಂಟೆಗೆ ಕಿಲ್ಲಾದಲ್ಲಿ ಕಾಮದಹನ ಮೂಲಕ ಹೋಳಿ ಆಚರಣೆಗೆ ಚಾಲನೆ ನೀಡಲಾಗುತ್ತದೆ. ಮಾ.10 ರಂದು ಕಿಲ್ಲಾ, ಮಾ.11 ರಂದು ಜೈನಪೇಟ, ಹಳಪೇಟ, ವೆಂಕಟಪೇಟ ಮಾ.12 ರಂದು ಹೊಸಪೇಟೆಯ ಬಣ್ಣದಾಟ ನಡೆಯಲಿದೆ. ನವನಗರ ಹಾಗೂ ವಿದ್ಯಾಗಿರಿ ಭಾಗದಲ್ಲಿ ನಾಲ್ಕನೇ ದಿನ ಬಣ್ಣದಾಟ ನಡೆಸಲು ಸಾರ್ವಜನಿಕರು ಒತ್ತಾಯಿಸಿದ್ದರು. ಹೋಳಿ ಆಚರಣಾ ಸಮಿತಿ ಅಧ್ಯಕ್ಷ ಕಳಕಪ್ಪ ಬಾದವಾಡಗಿ, ಪ್ರಧಾನ ಕಾರ್ಯದರ್ಶಿ ಮಹಾಬಳೇಶ್ವರ ಗುಡಗುಂಟಿ ನೇತೃತ್ವದಲ್ಲಿ ಸಮಿತಿ ಮುಖಂಡರು ವಿಶೇಷ ಸಭೆ ಸೇರಿ ಚರ್ಚಿಸಿ ಒಂದು ದಿನ ವಿಸ್ತರಣೆಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದ್ದರು. ಆದರೆ, ಪೊಲೀಸ್ ಇಲಾಖೆ ಪರವಾನಗಿ ನೀಡಲು ನಿರಾಕರಣೆ ಮಾಡಿದೆ.
ಮೂರು ದಿನಕ್ಕೆ ಸೀಮಿತ
ಬಾಗಲಕೋಟೆ ಹೋಳಿ ಉತ್ಸವ ನಾಲ್ಕನೇ ದಿನದವರೆಗೆ ವಿಸ್ತರಿಸುವ ಬಗ್ಗೆ ಜಿಲ್ಲಾಡಳಿತ ಜತೆ ಚರ್ಚೆ ಮಾಡಲಾಗುವುದು. ನಗರ ಸಂಪೂರ್ಣವಾಗಿ ಮುಳುಗಡೆಯಾಗಿ ಹೊಸದಾಗಿ ನಿರ್ಮಾಣವಾಗುವ ಬಡಾವಣೆಗಳಲ್ಲಿ ಒಂದು ದಿನ ಬಣ್ಣದಾಟ ವಿಸ್ತರಣೆ ಮಾಡುವುದು ಲೇಸು ಎಂದು ಆಚರಣಾ ಸಮಿತಿ ಮುಖಂಡರಿಗೆ ಮನವರಿಕೆ ಮಾಡಲಾಗಿದೆ. ಪ್ರಸಕ್ತ ವರ್ಷ ಮೂರು ದಿನ ಮಾತ್ರ ಬಣ್ಣದಾಟ ನಡೆಯಲಿದೆ.
ಲೋಕೇಶ ಜಗಲಾಸರ್ಜಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ