ಸಮಸ್ತ ನೇಕಾರ ಅಭಿವೃದ್ಧಿ ನಿಗಮ ಸ್ಥಾಪಿಸಿ

BKT 61
Published on

ಬಾಗಲಕೋಟೆ: ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ನೇಕಾರ ಸಮಾಜದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಮಸ್ತ ನೇಕಾರ ಅಭಿವೃದ್ಧಿ ನಿಗಮ ಸ್ಥಾಪಿಸುವುದು ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನೇಕಾರರು ನಗರದ ಜಿಲ್ಲಾಡಳಿತ ಭವನ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ನೇಕಾರರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಎಲ್.ಜಿ. ಹಾವನೂರ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ವರದಿಯಂತೆ ರಾಜ್ಯದಲ್ಲಿರುವ ಕುರುಹಿನಶೆಟ್ಟಿ, ಪದ್ಮಸಾಲಿ, ಸ್ವಕುಳಿಸಾಲಿ, ಹಟಗಾರ, ಬಣಗಾರ, ಶಿಂಪಿ, ಶಿವಸಿಂಪಿ, ಪಟ್ಟಸಾಲಿ, ಮಗ್ಗ, ಬಿಳಿ ಮಗ್ಗ, ಜಾಡ, ಕುರ್ಣಿ, ಕೋಷ್ಟಿ, ತೊಗಟಿವೀರ, ದೇವಾಂಗ ಸೇರಿ ನಾನಾ ಹೆಸರಿನಿಂದ ನೇಕಾರರು ಗುರುತಿಸಿಕೊಂಡಿದ್ದು, ಪ್ರವರ್ಗ 2 ಎ ದಲ್ಲಿ ಮೀಸಲಾತಿ ನೀಡಲಾಗಿದೆ. ಆದರೂ ಪ್ರಗತಿ ಹೊಂದಲು ಸಾಧ್ಯವಾಗಿಲ್ಲ. ಇದಕ್ಕೆ ಈವರೆಗೆ ಆಳ್ವಿಕೆ ನಡೆಸಿದ ಎಲ್ಲ ಸರ್ಕಾರಗಳು ಹೊಣೆಗಾರರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಸ್ತ ನೇಕಾರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮ, ಕರ್ನಾಟಕ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ, ಕಾವೇರಿ ಕೈಮಗ್ಗ ಅಭಿವೃದ್ಧಿ ನಿಗಮ, ರೇಷ್ಮೆ ನಿಗಮಕ್ಕೆ ನೇಕಾರ ಕ್ಷೇತ್ರದಲ್ಲಿ ದುಡಿದವರಿಗೆ ಅವಕಾಶ ನೀಡಬೇಕು. ನೇಕಾರರ ಉತ್ಪಾದಿಸುವ ಬಟ್ಟೆಗಳನ್ನು ನಿಗಮಗಳ ಮೂಲಕ ಖರೀದಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸರಳವಾಗಿ ಸಾಲ ಸೌಲಭ್ಯ ದೊರೆಯುವಂತಾಗಬೇಕು. ಕಚ್ಚಾ ವಸ್ತುಗಳಿಗೆ ತೆರಿಗೆ ವಿನಾಯಿತಿ ನೀಡಬೇಕು. ಶೂನ್ಯ ಬಡ್ಡಿದರಲ್ಲಿ ಸರ್ಕಾರ ಸಾಲ ವಿತರಣೆ ಮಾಡಬೇಕು. ಜಿಲ್ಲಾ ಕೇಂದ್ರ ನೇಕಾರ ಸಹಕಾರಿ ಬ್ಯಾಂಕ್ ಸ್ಥಾಪಿಸಬೇಕು. ನೇಕಾರರ ಮಕ್ಕಳ ಶಿಕ್ಷಣಕ್ಕಾಗಿ ಶಿಷ್ಯ ವೇತನ ನೀಡಬೇಕು. ನೇಕಾರ ಸಮುದಾಯಕ್ಕೆ ಶೇ.5 ಒಳ ಮೀಸಲಾತಿ ನೀಡಬೇಕು ಹೀಗೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ಹುಬ್ಬಳ್ಳಿಯ ವೀರಭಿಕ್ಷಾವರ್ತಿ ಮಠದ ಶಿವಶಂಕರ ಸ್ವಾಮೀಜಿ, ಗುಳೇದಗುಡ್ಡದ ಗುರುಸಿದ್ದೇಶ್ವರ ಮಠದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಘಣಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು. ನೇಕಾರ ಸಮುದಾಯ ಮುಖಂಂಡರಾದ ಡಾ.ಎಂ.ಎಸ್.ದಡ್ಡೇನವರ, ವಿ.ವಿ.ಶಿರಗನ್ನವರ, ಮಲ್ಲಿಕಾರ್ಜುನ ಹಂಡಿ, ಮುರಿಗೆಪ್ಪ ನಾರಾ, ಶ್ರೀನಿವಾಸ ಬಳ್ಳಾರಿ, ನಾಗರಾಜ ಕುಪ್ಪಸ್ತ, ಅನಿತಾ ಸರೋಧೆ ಇದ್ದರು.

ರಾಜ್ಯದಲ್ಲಿರುವ ನೇಕಾರರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ರಾಜ್ಯದ ಯಾವ ಸರ್ಕಾರಗಳು ನೇಕಾರರ ಬಗ್ಗೆ ಗಮನ ಹರಿಸಿಲ್ಲ. ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಇದೀಗ ಹೋರಾಟ ಆರಂಭ ಮಾಡಿದ್ದೇವೆ. ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದೇವೆ.
- ಶಿವಶಂಕರ ಸ್ವಾಮೀಜಿ ವೀರಭಿಕ್ಷಾವರ್ತಿ ಮಠ, ಹುಬ್ಬಳ್ಳಿ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net