ಅತ್ಯಾಚಾರ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Protest
Published on

ಬಾಗಲಕೋಟೆ: ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ಖಂಡಿಸಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಹಾಗೂ ಮಹಿಳಾ ಘಟಕದ ನೇತೃತ್ವದಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ಕಾರ್ಯಕರ್ತರು, ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಕಾರ್ಯಕರ್ತರು, ಮುಖಂಡರು ರಾಜ್ಯ, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನೈತಿಕ ಹೊಣೆ ಹೊತ್ತು ಗೃಹ ಸಚಿವ ಅರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಮಾತನಾಡಿ, ರಾಜ್ಯದಲ್ಲಿ ಹೆಣ್ಣುಮಕ್ಕಳು ಸುರಕ್ಷಿತವಾಗಿಲ್ಲ ಎನ್ನುವುದಕ್ಕೆ ಮೈಸೂರಿನಲ್ಲಿ ನಡೆದಿರುವ ಅತ್ಯಾಚಾರ ಘಟನೆ ಸಾಕ್ಷಿ. ಬಿಜೆಪಿ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಘಟನೆ ನಡೆದು ಎರಡ್ಮೂರು ದಿನ ಕಳೆದರು ದುಷ್ಕರ್ಮಿಗಳನ್ನು ಬಂಧಿಸಲಿಲ್ಲ. ಗೃಹ ಸಚಿವ ಅರಗ ಜ್ಞಾನೇಂದ್ರ ಬೇಜವಾಬ್ದಾರಿಯಿಂದ ಹೇಳಿಕೆ ನೀಡುತ್ತಿದ್ದಾರೆ. ಕೂಡಲೇ ಅವರ ರಾಜೀನಾಮೆ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ನೈತಿಕ ಹೊಣೆ ಹೊತ್ತು ಅಧಿಕಾರ ಬಿಟ್ಟು ಬಿಜೆಪಿ ಮನೆಗೆ ಹೋಗಬೇಕು ಎಂದ ತೀವ್ರ ವಾಗ್ದಾಳಿ ನಡೆಸಿದರು.

ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಅತ್ಯಾಚಾರಿಗಳಿಗೆ ಅರಬ್, ದುಬೈ ಮಾದರಿ ಕಠಿಣ ಶಿಕ್ಷೆ ನೀಡಬೇಕು. ಕಾನೂನುಗಳನ್ನು ಕಠಿಣವಾಗಿ ರೂಪಿಸಬೇಕು. ಇಲ್ಲವಾದಲ್ಲಿ ಬಿಜೆಪಿ ಸರ್ಕಾರ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಕೆ ನೀಡಿದರು.

ಜಿಲ್ಲಾ ವಕ್ತಾರ ನಾಗರಾಜ ಹದ್ಲಿ ಮಾತನಾಡಿ, ರಾಜ್ಯದಲ್ಲಿ ಅತ್ಯಾಚಾರ ನಡೆದಾಗ ಈ ಹಿಂದೆ ಹಿಂದುಪರ ಸಂಘಟನೆ, ಎಬಿವಿಪಿ ಕಾರ್ಯಕರ್ತರು ಬೀದಿಗೆ ಇಳಿದು ಹೋರಾಟ ಮಾಡುತ್ತಿದ್ದರು. ಮೈಸೂರಿನಲ್ಲಿ ನಡೆದ ಘಟನೆ ಬಗ್ಗೆ ಯಾರೊಬ್ಬರು ತುಟಿಕ್, ಪಿಟಿಕ್ ಎನ್ನುತ್ತಿಲ್ಲ. ಅಪರಾಧ ಪ್ರಕರಣಗಳಲ್ಲಿಯೂ ಕೋಮು ದ್ವೇಷ ಬಿತ್ತುವ ಈ ಸಂಘಟನೆಗಳು ಇಂದು ಮಾಯವಾಗಿವೆ ಎಂದು ಟೀಕಿಸಿದರು.

ಮಾಜಿ ಸಚಿವ ಎಚ್.ವೈ.ಮೇಟಿ, ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಮುಖಂಡ ಕಾಶೀನಾಥ ಹುಡೇದ, ರಾಜು ಮನ್ನಿಕೇರಿ, ಹನುಮಂತ ರಾಂಕುಂಪಿ, ರೇಣುಕಾ ನ್ಯಾಮಲಗೌಡ, ಲಕ್ಷ್ಮೀ ಚೌಹ್ವಾನ, ಸಿದ್ದು ದೇವಗೋಳ, ವಿಜಯ ಕಮತಗಿ, ಮುತ್ತು ಜೋಳದ, ಮಲ್ಲು ಶಿರೂರ, ಸಿದ್ದಣ್ಣ ಗೋಡಿ, ಬಲರಾಮ ಪವಾರ, ಎಸ್.ಎನ್.ರಾಂಪೂರ, ಹಾಜಿಸಾಬ ದಂಡಿನ ಇತರರಿದ್ದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮಹಿಳೆಯರು ಭಯ ಭೀತಿಯಿಂದ ಓಡಾಡುವಂತಾಗಿದೆ. ಇದಕ್ಕೆ ಬಿಜೆಪಿ ಸರ್ಕಾರ ನೇರವಾಗಿ ಹೊಣೆಯಾಗಿದೆ. ಬೆಲೆ ಏರಿಕೆ ತಗ್ಗಿಸಲು ವಿಫಲವಾಗಿರುವ ಬಿಜೆಪಿಯವರು ಮಹಿಳೆಯರ ಸುರಕ್ಷಿತೆಗಾಗಿ ಆದ್ಯತೆ ನೀಡಬೇಕು. ಗೃಹ ಸಚಿವರ ರಾಜೀನಾಮೆ ಪಡೆಯಬೇಕು.
- ರಕ್ಷಿತಾ ಭರತಕುಮಾರ ಈಟಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net