

ಬಾಗಲಕೋಟೆ: ನಗರದಲ್ಲಿ ಹಂದಿ, ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಹಲವು ಭಾಗದಲ್ಲಿ ಸ್ವಚ್ಛತೆ ಇಲ್ಲ. ಬೀದಿ ದೀಪಗಳು ಬಂದ್ ಆಗಿವೆ. ತೆರಿಗೆ ಸಂಗ್ರಹ ಸೇರಿದಂತೆ ನಗರಸಭೆಯ ಪ್ರತಿಯೊಂದು ದಾಖಲೆ ಡಿಜಲೀಕರಣ ಮಾಡಿ. ತೆರಿಗೆ ಯಾವ ಯಾವ ಮೂಲಗಳಿಂದ ಸಂಗ್ರಹಿಸುತ್ತೀರಿ. ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿ.!
ನವನಗರದಲ್ಲಿ ನಗರಸಭೆ ಕಾರ್ಯಾಲಯದಲ್ಲಿ ನಗರಸಭೆ 2021 ಸಾಲಿನ ಬಜೆಟ್ ಪೂರ್ವ ಭಾವಿ ಸಭೆಯಲ್ಲಿ ಸಾರ್ವಜನಿಕರು, ವರ್ತಕರು, ಮುಳಗಡೆ ಹೋರಾಟ ಸಮಿತಿ ಮುಖಂಡರು ಪ್ರಶ್ನೆಗಳ ಸುರಿಮಳೆಗೈದರು. ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಆಯುಕ್ತ ವಿ.ಮುನಿಶಾಮಪ್ಪ ಸಮರ್ಪಕವಾಗಿ ಉತ್ತರ ನೀಡಲಾಗದೇ ತಡಬಡಾಯಿಸಿದರು.
ಬಾಗಲಕೋಟೆ ನಡುಗಡ್ಡೆ ಹೋರಾಟ ಸಮಿತಿ ಮುಖಂಡ ಅರವಿಂದ ಮುಚಖಂಡಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಡಿಜಲೀಕರಣಕ್ಕೆ ಒತ್ತು ನೀಡುತ್ತಿದ್ದಾರೆ. ಬಾಗಲಕೋಟೆ ನಗರಸಭೆಯು ಡಿಜಲೀಕರದತ್ತ ಒಂದು ಹೆಜ್ಜೆಯು ಮುಂದೆ ಇಡುತ್ತಿಲ್ಲ. ನಗರಸಭೆ ಯಾವ ದಾಖಲೆಗಳು ಡಿಜಿಟಲ್ ರೂಪದಲ್ಲಿ ಇಲ್ಲ. ಸಾರ್ವಜನಿಕರ ಸಮಸ್ಯೆ ಆಲಿಸಲು ಫೇಸ್‌ಬುಕ್, ಟ್ವಿಟರ್ ಖಾತೆ ಹೊಂದಿಲ್ಲ. ಪ್ರತಿಯೊಂದಕ್ಕೆ ಖುದ್ದು ನಗರಭೆ ಸಾರ್ವಜನಿಕರು ಬರಬೇಕು ಎಂದರೇ ಹೇಗೆ. ಡಿಜಿಲೀಕರಣ ಮಾಡದ ಪರಿಣಾಮ ಆಡಳಿತದಲ್ಲಿ ಪಾರದರ್ಶಕತೆ ಕಾಣುತ್ತಿಲ್ಲ. ಇನ್ನು ತೆರಿಗೆ ಸಂಗ್ರಹಕ್ಕೆ ನಗರಸಭೆಯು ಯಾವ ಆದಾಯ ಮೂಲ ಆಧರಿಸಿದೆ. ಹಂದಿ, ಬಿಡಾಡಿ ದನಗಳ ಕಾಟ ಅಧಿಕವಾಗಿದ್ದು, ಯಾವ ರೀತಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಬಾಗಲಕೋಟೆ ಸೂಷಿಯಲ್ ವರ್ಕರ್ಸ್ ಸದಸ್ಯ ಶ್ರೀಧರ ದಾಸ ಮಾತನಾಡಿ, ಸಾರ್ವಜನಿಕರು ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ. ನಗರಸಭೆಯಿಂದ ಕಸ ಸಂಗ್ರಹಣೆಗಾಗಿ ವಾಹನಗಳನ್ನು ಮಾತ್ರ ನಿಯುಕ್ತಿಗೊಳಿಸಿದೆ. ದೊಡ್ಡದಾದ ಕಸದ ಸಂಗ್ರಹಣ ಡಬ್ಬಿ ಇಟ್ಟಿಲ್ಲ ಎಂದು ದೂರಿದರು.
ಬಾಗಲಕೋಟೆ ಕಿರಾಣಿ ಮರ್ಚಂಟ್ ಅಸೋಷಿಯನ್ಸ್ ಅಧ್ಯಕ್ಷ ನಾಗರಾಜ ಕುಪ್ಪಸ್ತ ಮಾತನಾಡಿ, ಹಳೇ ಬಾಗಲಕೋಟೆ ಕಿರಾಣಿ ಮಾರುಕಟ್ಟೆ ಬಹಳ ಇಕ್ಕಟ್ಟಿನಲ್ಲಿ ಸಿಲುಕಿದೆ. ನವನಗರದಲ್ಲಿ ಎಲ್ಲ ಮಳಿಗಳಿಗೆ ನಿವೇಶನ ನೀಡಲಾಗಿದೆ. ಆದರೇ ಅಲ್ಲಿ ವ್ಯಾಪಾರಕ್ಕೆ ಹೊಡೆತ ಬೀಳುತ್ತದೆ. ವ್ಯಾಪಾರಸ್ಥರ ಮನವಿ ಮೇರೆಗೆ ನವನಗರದ ಯೂನಿಟ್-3 ಯಲ್ಲಿ ಒಂದೇ ಸೂರಿನಡಿ ಮಾರುಕಟ್ಟೆ ನಿರ್ಮಿಸುವ ಬಗ್ಗೆ ತಿಳಿಸಲಾಗಿತ್ತು. ಶಾಸಕ ವೀರಣ್ಣ ಚರಂತಿಮಠ ಕೂಡಾ ಒಪ್ಪಿದ್ದರು. ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಬಗ್ಗೆ ನಗರಸಭೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ, ನಗರಸಭೆ ಸದಸ್ಯರಾದ ರವಿ ಧಾಮಜಿ, ಶ್ರೀನಿವಾಸ ಸಜ್ಜನ, ಶಶಿಕಲಾ ಮಜ್ಜಗಿ, ರತ್ನಾ ಕೆರೂರ, ಸ್ಮೀತಾ ಪವಾರ, ಚನ್ನವೀರ ಅಂಗಡಿ, ಸವಿತಾ ಲೆಂಕೆನ್ನವರ,ಹೀರಾಲಾಲ್.ಗೌಡಾ, ಸೇರಿದಂತೆ ನಗರಸಭೆ ಸದಸ್ಯರು,ಸಾರ್ವಜನಿಕರು, ವ್ಯಾಪಾರಸ್ಥರು ಭಾಗವಹಿಸಿದ್ದರು.
ನಗರಸಭೆ ಆಯುಕ್ತ ವಿ.ಮುನಿಶಾಮಪ್ಪ ಮಾತನಾಡಿ, ಇಂದು ಕುಂದು ಕೊರತೆ ಸಭೆ ಅಲ್ಲ. ಬಜೆಟ್ ಸಿದ್ಧಪಡಿಸಲು ಸಲಹೆ, ಸೂಚನೆ ಪಡೆಯುವುದಕ್ಕಾಗಿ ಕರೆ ಸಭೆಯಾಗಿದೆ. ಡಿಜಲೀಕರಣಕ್ಕಿಂತ ನಗರಸಭೆ ಸದಸ್ಯರ ಮೂಲಕವೇ ಸಮಸ್ಯೆ ಆಲಿಸಿ ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ಬಿಡಾಡಿ ದನಗಳು, ಹಂದಿಗಳ ಕಾರ್ಯಚರಣೆ ಆರಂಭವಾಗಿದ್ದು, ಹಂತ ಹಂತವಾಗಿ ಮಾಡಲಾಗುವುದು. ಸಿಬ್ಬಂದಿ ಕೊರತೆ ನಿಗಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ನಗರಸಭೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಹಾಗೂ ಸಾರ್ವಜನಿಕರ ಶೌಚಗೃಹ ಸ್ವಚ್ಚತೆಗೆ ಒತ್ತು ನೀಡಲಾಗುವುದು. ನಗರಸಭೆ ತೆರಿಗೆ ಸಂಗ್ರಹ ಗುರಿ ಮುಟ್ಟಲು ಮುಲಾಜ ಇಲ್ಲದೇ ಕ್ರಮ ತೆಗೆದುಕೊಳ್ಳಲಾಗಿದೆ. ಬಜೆಟ್‌ನಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ಹಳೇ ಬಾಗಲಕೋಟೆ ನಗರದಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿರುತ್ತದೆ. ಸಾರ್ವಜನಿಕ ಶೌಚಗೃಹ ಸ್ಥಿತಿ ಅಯೋಮಯವಾಗಿದೆ. ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕು.
- ದೀಪಕ ಹಂಚಾಟೆ ಬಾಗಲಕೋಟೆ ನಗರ ನಿವಾಸಿ