ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಶಾಸಕ ಚರಂತಿಮಠ

BKT 4-1
Published on

ಬಾಗಲಕೋಟೆ: ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಸ್ಥಳ ಹಾಗೂ ಇನ್ನೂ ಆಗಬೇಕಾದ ಕಾಮಗಾರಿ ಕುರಿತು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಶಾಸಕ ವೀರಣ್ಣ ಚರಂತಿಮಠವರು ಭಾನುವಾರ ಸಂಚರಿಸಿ ಪರಿಶೀಲಿಸಿದರು.

ನವನಗರದ ಕಲಾಭವನಕ್ಕೆ ಭೇಟಿ ನೀಡಿದ ಶಾಸಕರು ಅಲ್ಲಿಯ ಅವ್ಯವಸ್ಥೆ ಕಂಡು ಅಲ್ಲಿಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು, ಅಲ್ಲಿಯ ಕಸವನ್ನು ತಕ್ಷಣ ಇದನ್ನು ಸ್ವಚ್ಛಗೊಳಿಸಲು ಸೂಚಿಸಿದರು. ಇದಲ್ಲದೇ ಕಲಾಭವನದ ಸಂಕೀರ್ಣದಲ್ಲಿ ಹಳೇ ಬಾಗಲಕೋಟೆ ನಗರದಲ್ಲಿದ್ದ ಗ್ರಂಥಾಲಯ ಕಟ್ಟಡದ ಮಾದರಿಯಲ್ಲೇ ಇಲ್ಲಿಯೂ ಗ್ರಂಥಾಲಯ ನಿರ್ಮಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸ್ಟೋರಂ ನಿರ್ಮಾಣ : ತಹಸೀಲ್ದಾರ ಹಾಗೂ ಉಪವಿಭಾಗಾಧಿಕಾರಿಗಳ ಕಾರ್ಯಾಲಯಕ್ಕೆ ಸಂಬಂಧಿಸಿದಂತೆ ನೂತನ ರೆಕಾರ್ಡ್ ರೂಂ ನಿರ್ಮಾಣ ಮಾಡಲು ನೀಲನಕ್ಷೆ ತಯಾರಿಸಲು ಸ್ಥಳದಲ್ಲೇ ಇದ್ದ ತಹಸೀಲ್ದಾರ ಗುರುಸಿದ್ದಯ್ಯ ಹಿರೇಮಠಗೆ ತಿಳಿಸಿದರು. ಅಲ್ಲದೆ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ನಡೆಯುತ್ತಿರುವ ಈಜುಕೊಳದ ದುರಸ್ಥಿ ಕಾಮಗಾರಿಗಳನ್ನು ಪರಿಶೀಲಿಸಿ, ನಂತರ ಕ್ರೀಡಾ ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿ ಕೈಗೊಂಡಿರುವ ವಿವಿಧ ದುರಸ್ಥಿ ಕಾಮಗಾರಿಗಳನ್ನು ಪರಿಶೀಲಿಸಿ ಕಾಮಗಾರಿ ಗುಣಮಟ್ಟದ್ದಾಗಿರಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಒ ಟಿ.ಭೂಬಾಲನ, ಪಿ.ಆರ್.ಇಡಿ ಇಇ ಕೊಟಗಿ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎನ್.ವೈ.ಕುಂದರಗಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪ್ರಶಾಂತ ಗಿಡ್ಡದಾನಪ್ಪಗೋಳ, ಸಹಾಯಕ ಕಾರ್ಯ ನಿರ್ವಾಹಕ ಕೊಟಗಿ, ಸೇರಿದಂತೆ ಇತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net