ನಾಡದ್ರೋಹಿ ಸಂಘಟನೆ ನಿಷೇಧಿಸಿ

BKT 202
Published on

ಬಾಗಲಕೋಟೆ: ಗಡಿ ಹಾಗೂ ಭಾಷೆ ವಿಷಯದಲ್ಲಿ ಪುಂಡಾಟಿಕೆ ಮಾಡುತ್ತಿರುವ ನಾಡದ್ರೋಹಿ ಎಂ.ಇ.ಎಸ್ ಹಾಗೂ ಶಿವಸೇನೆ ಸಂಘಟನೆ ನಿಷೇಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ನಗರದ ಬಸವೇಶ್ವರ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತಕ್ಕೆ ಆಗಮಿಸಿದ ಕರವೇ ಕಾರ್ಯಕರ್ತರು ಎಂಇಎಸ್, ಶಿವಸೇನೆ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪ್ರತಿಕೃತಿ ದಹಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

ಕಳೆದ ಎರಡು ಮೂರು ದಿನಗಳಿಂದ ಎಂಇಎಸ್, ಶಿವಸೇನೆ ಸಂಘಟನೆ ಕಾರ್ಯಕರ್ತರು ಬೆಳಗಾವಿ ಹಾಗೂ ಮಹರಾಷ್ಟ್ರದ ಗಡಿ ಭಾಗದ ಜಿಲ್ಲೆಗಳಲ್ಲಿ ಪುಂಡಾಟಿಕೆ ಮೆರೆಯುತ್ತಿದ್ದಾರೆ. ಕನ್ನಡ ನಾಡು, ನುಡಿಗೆ ಧಕ್ಕೆ ತರುತ್ತಿದ್ದಾರೆ. ಸ್ವಾತಂತ್ರೃ ಸೇನಾನಿಗಳಿಗೆ ಅಪಮಾನ ಮಾಡಿ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಅವಮಾನ ಮಾಡಿದ್ದಾರೆ. ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೆ ಹೋದಲ್ಲಿ ಕರವೇ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ. ಎಂಇಎಸ್, ಶಿವಸೇನೆ ಸಂಘಟನೆ ರಾಜ್ಯದಲ್ಲಿ ನಿಷೇಧಿಸಬೇಕು. ಪುಂಡಪೋಕರಿಗಳನ್ನು ಹತ್ತಿಕ್ಕಲು ಪೊಲೀಸ್ ಇಲಾಖೆಗೆ ಪೂರ್ಣ ಪ್ರಮಾಣದ ಅಧಿಕಾರ ನೀಡಬೇಕು ಎಂದು ಒತ್ತಾಯಿಸಿದರು.

ಕರವೇ ಮುಖಂಡರಾದ ಪ್ರಶಾಂತ ಭಾವಿಕಟ್ಟಿ, ಚೇತನ ದೊಡ್ಡಮನಿ, ಶಂಕತ ಮುತ್ತಲಗೇರಿ, ಸಂತೋಷ ಚಿನಿವಾಲ, ಸಿದ್ದರಾಮೇಶ್ವರ ಹಾಸನ, ನವೀನ ಕಪಾಲಿ, ಸುನೀಲ ಪವಾರ, ಸಿದ್ದು ಪೂಜಾರಿ, ಭರತ ಶಿರೂರ ಇತರರು ಇದ್ದರು.

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net