

ಬಾಗಲಕೋಟೆ: ಮಹಾಶಿವರಾತ್ರಿ ಸಂಭ್ರಮಕ್ಕೆ ಕೋಟೆನಾಡು ಸಜ್ಜುಗೊಂಡಿದೆ. ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಪ್ರಮುಖ ಶಿವಾಲಯಗಳಲ್ಲಿ ಶುಕ್ರವಾರ (ಫೆ. 21) ವಿಶೇಷ ಪೂಜೆ, ಆರಾಧಾನೆ ನೆರವೇರಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಐತಿಹಾಸಿಕ ದೇವಾಲಯಗಳಾದ ಮಹಾಕೋಟೇಶ್ವರ, ಕೂಡಲಸಂಗಮ, ಚಿಕ್ಕ ಸಂಗಮ, ಶಿವಯೋಗಮಂದಿರ ಸೇರಿ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಶಿವನಿಗೆ ವಿಶೇಷ ಪೂಜೆ, ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ. ಉಪವಾಸ ವೃತ ಆಚರಣೆ ಮಾಡಿ ಶಿವನನ್ನು ಪೂಜಿಸಲಾಗುತ್ತದೆ. ಬಿಲ್ವ ಪತ್ರೆ ಸಮರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಲಾಗುತ್ತದೆ.ಸತ್ಯ ಶಿವಂ ಸುಂದರಂ ದೇವಸ್ಥಾನ
ಕಲಾದಗಿ ರಸ್ತೆಯ ಮುಚಖಂಡಿ ಕ್ರಾಸ್ ಸಮೀಪದಲ್ಲಿರುವ ಸತ್ಯಂ ಶಿವಂ ಸುಂದರಂ ಶಿವಾಲಯದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಶಿವರಾತ್ರಿ ದಿನ ದೇವಾಲಯಕ್ಕೆ ಜನ ಸಾಗರವೇ ಹರಿದು ಬರುತ್ತದೆ. ಸಂಜೆ ಅದ್ದೂರಿಯಾಗಿ ಜಾತ್ರೆ ಜರುಗಲಿದೆ.
ಬೆಳಗ್ಗೆ ಅಭಿಷೇಕ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ನೆರವೇರಲಿವೆ. ರಾತ್ರಿ ಶಿವರಾತ್ರಿ ಜಾಗರಣೆ, ಶಿವನ ನಾಮ ಸ್ಮರಣೆ ಮಾಡಲಾಗುತ್ತದೆ. ಫೆ. 22ರಂದು ರಂದು ಬೆಳಗ್ಗೆ ವಿಶೇಷ ಪೂಜೆ ನಂತರ ಶಿವರಾತ್ರಿ ಸಂಪನ್ನವಾಗಲಿದೆ.
ಸೌರಾಷ್ಟ್ರ ಸೋಮಲಿಂಗೇಶ್ವರ ಮಂದಿರ
ನವನಗರದ ಸೆಕ್ಟರ್ 25ರಲ್ಲಿರುವ ಸೌರಾಷ್ಟ್ರ ಸೋಮಲಿಂಗೇಶ್ವರ ಶಿವಾಲಯದಲ್ಲಿ ಬೆಳಗ್ಗೆಯಿಂದ ವಿವಿಧ ಪೂಜೆ ಜರುಗಲಿವೆ. ವಿವಿಧ ಮಠಾಧೀಶರು, ಪಂಡಿತರ ನೇತೃತ್ವದಲ್ಲಿ ಪೂಜಾ ಕೈಂಕರ್ಯ, ಮಹಾರುದ್ರಾಭಿಷೇಕ ನಡೆಯಲಿವೆ.
ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯ
ಹಳೇ ನಗರದ ಎಂ.ಜಿ. ರಸ್ತೆಯಲ್ಲಿ ಶಿವನ ಸ್ವರೂಪಿಯಾದ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯದಲ್ಲಿ ವಿಶೇಷ ಪೂಜೆ ಜರುಗಲಿದೆ. ರಾತ್ರಿ ಜಾಗರಣೆ, ಬೆಳಗ್ಗೆ ರುದ್ರಾಭಿಷೇಕದ ನಂತರ ಬುತ್ತಿ ಪೂಜೆ ನಡೆಯಲಿದೆ.
ಆನಂದೇಶ್ವರ ದೇವರು
ಹಳೇ ನಗರದ ಅಸಂಖ್ಯಾತ ಭಕ್ತರು ಆರಾಧ್ಯ ದೈವ ಟೀಕಿನಮಠ ಹತ್ತಿರ ಇರುವ ವಿಷ್ಣು ಆನಂದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಂತ್ರ ಘೋಷಗಳು ಮೊಳಗಲಿವೆ.
ಕೇದಾರೇಶ್ವರ ದೇಗುಲ
ಹಳೇ ಬಾಗಲಕೋಟೆ ಕಿಲ್ಲಾ ಗಲ್ಲಿಯಲ್ಲಿರುವ ಕೇದಾರೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ರುದ್ರಾಭೀಷೇಕ, ರುದ್ರ ಪಠಣ, ಶಿವ ಜಾಗರಣೆ ನಡೆಯಲಿದೆ. ಭಕ್ತರು ನಿರಾಹಾರ ವೃತ ಆಚರಿಸಲಿದ್ದಾರೆ.
EndFragment