ಬಾಗಲಕೋಟೆಯಲ್ಲಿ ಶ್ರೀ ಮಹಾದೇವ ತಾತನವರ ಪುಣ್ಯಸ್ಮರಣೋತ್ಸವ 21ರಂದು

mahadev tatha
Published on

ಬಾಗಲಕೋಟೆ: ನಗರದ ಶಿವಾನುಭವ ಮಂಟಪ ಚರಂತಿಮಠದಲ್ಲಿ ಜ. 21ರಂದು ಸಂಜೆ 6 ಗಂಟೆಗೆ ಮಹಾತಪಸ್ವಿ, ಲೀಲಾಮೂರ್ತಿ ಶ್ರೀ ಸದ್ಗುರು ಅಲ್ಲೀಪುರ ಮಹಾದೇವ ತಾತನವರ 37ನೇ ವರ್ಷದ ಪುಣ್ಯಸ್ಮರಣೋತ್ಸವ ಆಯೋಜಿಸಲಾಗಿದೆ. ಬಾಗಲಕೋಟೆ ಚರಂತಿಮಠದ ಶ್ರೀ ಪ್ರಭುಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನರಗುಂದ ವಿರಕ್ತಮಠದ ಶ್ರೀ ಶಿವಕುಮಾರ ಸ್ವಾಮೀಜಿ ಸಮ್ಮುಖ ವಹಿಸುವರು. ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಉಪನ್ಯಾಸಕಿ ಚೈತನ್ಯದೇವಿ ಗುದ್ನಯ್ಯನವರಮಠ, ವಿಶೇಷ ಆಮಂತ್ರಿತರಾಗಿ ರುದ್ರಬಳಗದ ಅಧ್ಯಕ್ಷೆ ಗಿರಿಜಕ್ಕಾ ಶೆಟ್ಟರ ಆಗವಹಿಸುವರು ಎಂದು ಭಾರತಿ ಎಂಟರಪ್ರೖೆಸಸ್ ಮಾಲೀಕ ಸಿದ್ಧಲಿಂಗಪ್ಪ ಹೊಸಕೇರಿ ತಿಳಿಸಿದ್ದಾರೆ.

ರುದ್ರಾಭಿಷೇಕ: ಪುಣ್ಯಸ್ಮರಣೆ ನಿಮಿತ್ತ 21ರಂದು ಬೆಳಗ್ಗೆ 7 ಗಂಟೆಗೆ ಶ್ರೀ ಮಹಾದೇವ ತಾತನವರ ರಜತ ಮೂರ್ತಿಗೆ ಮಹಾರುದ್ರಾಭಿಷೇಕ ನಡೆಯಲಿದೆ.

ತಾತನವರ ಚರಿತ್ರೆ: ಮೈಸೂರು ಸಮೀಪದ ಬಂಟ್ವಾಳದ ಮರಯ್ಯಸ್ವಾಮಿ-ಮಹದೇವಮ್ಮನವರ ಗರ್ಭಸಂಜಾತರಾಗಿ ಮಹಾದೇವ ತಾತನವರು ಜನಿಸಿದರು. ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂತಂತೆ ಮಹಾದೇವ ತಾತ 8ನೇ ವಯಸ್ಸಿನಲ್ಲಿಯೇ ಜಪ, ತಪ ಮೊದಲಾದ ಸಿದ್ಧಿಗಳನ್ನು ಸಾಧಿಸಿದರು. ಶಿವಗಂಗೆ, ಸಿದ್ಧಗಂಗೆ, ದತ್ತಗಿರಿ, ಬಾಳೆಹೊನ್ನೂರು ಹೀಗೆ ವಿವಿಧೆಡೆ ತೆರಳಿ ಜ್ಞಾನಾರ್ಜನೆ ಮಾಡಿದರು. ನಂತರ ಕಾಶಿ ಕ್ಷೇತ್ರಕ್ಕೆ ತೆರಳಿ ಅಲ್ಲಿ ಗಂಗಾನದಿಯಲ್ಲಿ ಒಂಟಿ ಗಾಲಿನಲ್ಲಿ ನಿಂತು ತಪಸ್ಸು ಆಚರಿಸಿದರು. ಆಗ ಗಂಗಾದೇವಿ ಪ್ರತ್ಯಕ್ಷಳಾಗಿ ಅಮೃತ ಕಲಶ ಕೊಟ್ಟಿದ್ದನ್ನು ಪಾನ ಮಾಡಿದ ಮೃತ್ಯುಂಜಯ ಸ್ವರೂಪರು ಮಹಾದೇವ ತಾತನವರು.

ಮಹಾತ್ಮರನ್ನು ನೆನೆಯುವುದೇ ಮಹಾಮುಕ್ತಿ. ಇಂತಹ ಮುಕ್ತಿಮಂಟಪದಲ್ಲಿ ಮಹಾತ್ಮರಾಗಿ ಸದಾಕಾಲ ನೆನೆದವರ ಮನದಲ್ಲಿ ನೆಲೆನಿಲ್ಲುವ ಶಿವಯೋಗಿಗಳು ಮಹಾದೇವ ತಾತನವರು. ಮೈಸೂರು ಮಹಾರಾಜರ ಗುರುಗಳಾಗಿದ್ದ ಇವರು ಶಿವಯೋಗಿ ಸಾಮ್ರಾಟರು. ಇವರ ಚರಿತ್ರೆ ಸಾರಿ ಹೇಳುವ ಐತಿಹಾಸಿಕ ಸತ್ಯಸಂಗತಿಗಳು ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಇಂದಿಗೂ ಇವೆ. ತಾತನವರು ಯೋಗಾನಂದದಲ್ಲಿದ್ದಾಗ ಸಾಕ್ಷಾತ್ ಲಕ್ಷ್ಮೀದೇವಿ ಬಂದು ಪಾರಿಜಾತ ಪುಷ್ಪ ಕೊಡುತ್ತಿದ್ದಳು ಎಂಬ ಬಗ್ಗೆ ಹಿರಿಯರು ಈಗಲೂ ಹೇಳುತ್ತಾರೆ.

ಆಗಿನ ಬ್ರಿಟಿಷ್ ಗವರ್ನರ್ ಮದ್ರಾಸಿನ ಬ್ಯಾಲ್ಡನೈ ಎಂಬುವವರು ತಾತನವರ ಪರಮ ಭಕ್ತರಾಗಿದ್ದರು. ಅವರ ಪತ್ನಿ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಯಾವ ವೈದ್ಯರಿಂದಲೂ ಹೊಟ್ಟೆ ನೋವನ್ನು ಗುಣಪಡಿಸಲು ಆಗಿರಲಿಲ್ಲ. ಆಗ ದಂಪತಿ ತಾತನವರ ಮೊರೆ ಹೋದರು. ತಾತನವರು ಕ್ಷಣ ಮಾತ್ರದಲ್ಲಿ ಬ್ರಿಟಿಷ್ ಅಧಿಕಾರಿ ಪತ್ನಿಯ ಹೊಟ್ಟೆ ನೋವನ್ನು ಗುಣಪಡಿಸಿದರು. ಮುಂದೆ ತಾತನವರ ಸದಿಚ್ಛೆಯಂತೆ ಬಳ್ಳಾರಿಯ ಮಿಲಿಟರಿ ರೆಜಿಮೆಂಟ್​ನ ಜಾಗವನ್ನು ಗವರ್ನರ್ ಬ್ಯಾಲ್ಡನೈ ಶ್ರೀಮಠಕ್ಕೆ ದಾನವಾಗಿ ನೀಡಿದ್ದಾರೆ. ಅದೇ ಸ್ಥಳದಲ್ಲಿ ಸ್ಥಾಪನೆಗೊಂಡದ್ದೇ ಈಗಿನ ಅಲ್ಲೀಪುರದ ಜ್ಞಾನಪೀಠ ಮಠ.

ತಾತನವರು ಹೀಗೆ ವಿವಿಧೆಡೆ ಒಟ್ಟು 9 ಮಠಗಳನ್ನು ಸ್ಥಾಪಿಸಿದ್ದಾರೆ. ಧಾರವಾಡದ ಶಾಲ್ಮಲಾ ನದಿ ಉಗಮಸ್ಥಾನದಲ್ಲಿ ಕೈಲಾಸಮಠ, ಆಂಧ್ರಪ್ರದೇಶದ ನಗರೂರುಮಠ, ಬಳ್ಳಾರಿ ಸಮೀಪ ಅಲ್ಲೀಪುರದ ಜ್ಞಾನ ರಂಭಾಪುರಿ ಕ್ಷೇತ್ರ, ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ಸಮೀಪ ಹಂಪಸಾಗರ ಮಠ, ಮಂತ್ರಾಲಯ ಸಮೀಪ ಆದವಾನಿ ಮಠ, ಹಗರಿಬೊಮ್ಮನಹಳ್ಳಿ ಬಳಿ ನಂದಿಪುರಮಠ, ಹೊಳಗುಂದಿ ಮಠ, ಕತ್ತೆಬೆನ್ನೂರ ಬಳಿ ಅಲ್ಲಮಪ್ರಭುದೇವರ ಮಠ, ಮೈಸೂರು ಜಿಲ್ಲೆ ಸಂಗಮಕ್ಷೇತ್ರದ ಕೈಲಾಸ ಮಠವನ್ನು ನಿರ್ವಿುಸಿದ್ದಾರೆ.

ಸಂಗಮಕ್ಷೇತ್ರ ಐಕ್ಯಸ್ಥಳ: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪವಿರುವ ಕಪಿಲಾ, ಭೃಗು ನದಿಗಳ ದಡದ ಸಂಗಮ ಕ್ಷೇತ್ರದಲ್ಲಿ ಒಂದು ಮಠ ಸ್ಥಾಪಿಸಿದ್ದಾರೆ. ಅದೇ ಮಠದಲ್ಲಿ 1987ರ ಡಿ. 30ರ ವೈಕುಂಠ ಏಕಾದಶಿಯಂದು ಶಿವಯೋಗಿ ಸಾಮ್ರಾಟರು ಶಿವಯೋಗದಲ್ಲಿಯೇ ಸಮಾಧಿ ಹೊಂದಿದರು. ಈ ಪವಿತ್ರ ಸ್ಥಳವೇ ತಾತನವರ ಐಕ್ಯ ಸ್ಥಳವಾಗಿದೆ. ಕತ್ತಲೆಯಿಂದ ಬೆಳಕಿನೆಡೆಗೆ, ಜನಸಾಮಾನ್ಯರಲ್ಲಿ ಸಾಮಾನ್ಯರಾಗಿ ಮನುಕುಲ ಉದ್ಧಾರ ಮಾಡಿದ ತಾತನವರು ನಿಜವಾಗಿಯೂ ಪುಣ್ಯದ ಹಣ್ಣಾಗಿದ್ದರು. ಈ ಅಮೃತ ಫಲವನ್ನು ಕಾಣುವುದೇ ನಿಜವಾದ ಕೈವಲ್ಯವಾಗಿದೆ.</p><p>ಜ್ಯೋತಿಷ್ಯ ಪ್ರವೀಣ ಭಾಸ್ಕರಾಚಾರ್ಯರು ಹೇಳುವಂತೆ ವೈಕುಂಠ ಏಕಾದಶಿ ತಿಥಿಯೆಂದೇ ನಿರ್ವಾಣ ಹೊಂದಿದವರು ವಿಷ್ಣುಲೋಕ, ಬ್ರಹ್ಮಲೋಕ, ಶಿವಲೋಕದಲ್ಲಿ ಸದಾಕಾಲವೂ ಶಾಶ್ವತವಾಗಿರುತ್ತಾರೆ. ಇಂಥ ಮಹಾತ್ಮರನ್ನು ನೆನೆಯುವುದೇ ಘನಮುಕ್ತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net