

ಬಾಗಲಕೋಟೆ : ಕುರುಬ ಸಮಾಜವನ್ನು ಎಸ್ಟಿ ಮೀಸಲಾತಿಗೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ಬಾಗಲಕೋಟೆ ನಗರದಲ್ಲಿ ನ.29 ರಂದು ಕುರುಬ ಸಮಾಜದ ಬೃಹತ್ ಸಮಾಜವೇಶ ಹಮ್ಮಿಕೊಳ್ಳಲಾಗಿದೆ ಎಂದು ಕುರುಬರ ಎಸ್ಟಿ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಲ್.ಶಾಂತಗಿರಿ ತಿಳಿಸಿದರು.
ಬೆಳಗಾವಿ ವಿಭಾಗ ಮಟ್ಟದ ಸಮಾವೇಶ ಇದಾಗಿದ್ದು, ವಿಜಯಪುರ, ಬಾಗಲಕೋಟೆ, ಚಿಕ್ಕೋಡಿ, ಧಾರವಾಡ, ಗದಗ, ಹುಬ್ಬಳ್ಳಿ ಬೆಳಗಾವಿ ಸೇರಿ ವಿವಿಧ ಭಾಗಗಳಿಂದ ಲಕ್ಷಾಂತರ ಜನ ಸಮಾಜ ಬಾಂಧವರು ಆಗಮಿಸಲಿದ್ದಾರೆ. ಸಮಾವೇಶಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 11 ಗಂಟೆಗೆ ಸಮಾವೇಶ ಆರಂಭಗೊಳ್ಳಲಿದ್ದು, ಸಮಾಜದ ಪೀಠಾಧಿಪತಿಗಳಾದ ಕನಕ ಗುರುಪೀಠ ಕಾಗಿನೆಲೆಯ ನಿರಂಜನಾನಂದಪುರಿ ಸ್ವಾಮೀಜಿ, ಸಿದ್ದರಾಮಾನಂದ ಪುರಿ ಸ್ವಾಮೀಜಿ, ಈಶ್ವರಾನಂದ ಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಮಾಜದ ಮುಖಂಡರಾದ ಸಚಿವ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯರಾದ ಎಚ್.ವಿಶ್ವನಾಥ, ಎಚ್.ಎಂ.ರೇವಣ್ಣ, ಎಂ.ಟಿ.ಬಿ.ನಾಗರಾಜ, ಆರ್.ಶಂಕರ, ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕೆ.ಎಂ.ವಿರೂಪಾಕ್ಷಪ್ಪ ಸೇರಿ ಮತ್ತಿತರ ನಾಯಕರು ಆಗಮಿಸಲಿದ್ದಾರೆ ಎಂದರು.
ಹೋರಾಟ ಸಮಿತಿ ಮುಖಂಡ ಕಾಶಿನಾಥ ಹುಡೇದ ಮಾತನಾಡಿ, ಸಮಾವೇಶಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಸನ, ಊಟ, ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಎಸ್ಟಿ ಹೋರಾಟಕ್ಕೆ ಬಾದಾಮಿ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ನೈತಿಕ ಬೆಂಬಲವಿದೆ. ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಈ ಬಗ್ಗೆ ಸುಖಾಸುಮ್ಮನೇ ಸುಳ್ಳು ವದಂತಿಗಳನ್ನು ಹಬ್ಬಿಸಬಾರದು ಎಂದು ತಿಳಿಸಿದರು.
ಮುಖಂಡರಾದ ಡಿ.ಬಿ. ಸಿದ್ದಾಪುರ, ಶಶಿ ಉದಗಟ್ಟಿ, ಸಂಗಣ್ಣ ಹಂಡಿ, ಮಲ್ಲು ವಡಿಗೇರ, ರವಿ ಒಡ್ಡೂಡಿಗೆ, ಶಿವು ಹನುಮಕ್ಕನವರ, ಮುತ್ತು ಕುರುಬರ ಸುದ್ದಿಗೋಷ್ಠಿಯಲ್ಲಿ ಇದ್ದರು.
ಮೂವರಿಗೆ ಸಚಿವ ಸ್ಥಾನ ಕೊಡಿ
ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಸಚಿವ ಸಂಪುಟ ವಿಸ್ತರಣೆ ವೇಳೆ ಕುರುಬ ಸಮಾಜದ ಮೂರು ಜನರಿಗೆ ಸಚಿವ ಸ್ಥಾನ ನೀಡಬೇಕು. ಈಗಾಗಲೇ ಶ್ರೀಗಳ ನೇತೃತ್ವದಲ್ಲಿ ಸಮಾಜದ ನಿಯೋಗ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಮಾಡಿದೆ ಎಂದು ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ದೊಡಯ್ಯ ಆನೆಕಲ್ಲ ತಿಳಿಸಿದರು.
ಕುರುಬ ಸಮಾಜದ ಲಕ್ಷಾಂತರ ಕುಟುಂಬಗಳು ಗುಡ್ಡಗಾಡು ಪ್ರದೇಶದಲ್ಲಿ ವಾಸ ಮಾಡುತ್ತವೆ. ಇಂದಿಗೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಪ್ರಗತಿ ಸಾಧಿಸಿಲ್ಲ. ಕುರುಬ ಸಮಾಜ ಹಿಂದುಳಿದಿದೆ. ಹೀಗಾಗಿ ಕುರುಬ ಸಮುದಾಯ ಎಸ್ಟಿಗೆ ಸೇರ್ಪಡೆಗೊಳಿಸಬೇಕು.
ಎಂ.ಎಲ್. ಶಾಂತಗಿರಿ, ಕುರುಬರ ಎಸ್ಟಿ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ