ಮೀಸಲಾತಿ ಹೋರಾಟಕ್ಕೆ ಸರ್ಕಾರ ಸ್ಪಂದಿಸಲಿ

BKT 23
Published on

ಬಾಗಲಕೋಟೆ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹಾಗೂ ಲಿಂಗಾಯತ ಬಡ ಸಮಾಜಗಳಿಗೆ ಕೇಂದ್ರದಲ್ಲಿ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಜಿಲ್ಲಾಡಳಿತ ಭವನ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಸಮಾಜದ ಮುಖಂಡರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಕೃಷಿಯನ್ನೇ ಕುಲ ಕಸುಬನ್ನಾಗಿಸಿಕೊಂಡು ಜೀವನ ನಡೆಸುತ್ತಿರುವ ಲಿಂಗಾಯತ ಪಂಚಮಸಾಲಿ ಸಮಾಜ ಆರ್ಥಿಕ, ಶೈಕ್ಷೃಣಿಕ ಹಾಗೂ ಔದ್ಯೋಗಿಕವಾಗಿ ತೀರ ಹಿಂದುಳಿದಿದೆ. ಹೀಗಾಗಿ ರಾಜ್ಯದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕು. ಕಳೆದ ಹಲವು ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದರೂ ಸ್ಪಂದನೆ ಮಾಡದಿರುವುದು ದುರಂತ ಸಂಗತಿ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಸಮಾಜದ ಜಗದ್ಗುರು ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೆಂಗಳೂರು ವರೆಗೆ ಪಾದಯಾತ್ರೆ ಮಾಡಿದರು. 10 ಲಕ್ಷ ಜನ ಸೇರಿ ಬೃಹತ್ ಸಮಾವೇಶ ನಡೆಸಿ ಮೀಸಲಾತಿಗಾಗಿ ಹೋರಾಟ ಮಾಡಲಾಯಿತು. ಇಂದಿಗೂ ಬೆಂಗಳೂರಿನಲ್ಲಿ ಧರಣಿ ನಡೆಯುತ್ತಿದೆ. ಸರ್ಕಾರ ಸೂಕ್ತ ರೀತಿಯಿಂದ ಸ್ಪಂದಿಸಿಲ್ಲ. ಈ ಬಗ್ಗೆ ರಾಜ್ಯಪಾಲ ವಜುಭಾಯಿ ವಾಲಾ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷೃ ಧರೆಪ್ಪ ಸಾಂಗ್ಲೀಕರ, ಮುಖಂಡರಾದ ಸಿದ್ದಣ್ಣ ಹಂಪನಗೌಡರ, ಎಸ್.ಪಿ. ದಾನಪ್ಪಗೋಳ, ಎನ್.ಜಿ. ಕೋಟಿ, ಬಸವರಾಜ ಶಿರೂರ, ಮಂಜುನಾಥ ಪುರುತಗೇರಿ, ಚನ್ನವೀರ ಅಂಗಡಿ, ವೀರಣ್ಣ ಕಲಬುರ್ಗಿ, ವಿಜಯ ಮುಳ್ಳೂರ, ಸಚಿನ್ ಲೆಕ್ಕದ, ಪರಶುರಾಮ ಮುಳಗುಂದ, ಎಸ್.ಎನ್. ರಾಂಪುರ, ಅಶೋಕ ಧನ್ನೂರ, ಸಿದ್ದು ಬೊಮ್ಮಸಾಗರ ಉಪಸ್ಥಿತರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net