

ಬಾಗಲಕೋಟೆ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಭೂ ಸ್ವಾಧೀನ ಸುಧಾರಣ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕರ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿಯಲ್ಲಿ ಸೋಮವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.
ಬಾಗಲಕೋಟೆ ನಗರ, ಮುಧೋಳ, ರಬಕವಿ-ಬನಹಟ್ಟಿ, ಬೀಳಗಿ, ಬಾದಾಮಿ, ಇಳಕಲ್ಲ, ಹುನಗುಂದ, ತೇರದಾಳ, ಲೋಕಾಪುರ, ಮಹಾಲಿಂಗಪುರ ಸೇರಿದಂತೆ ನಾನಾ ಭಾಗದಲ್ಲಿ ರೈತ ಸಂಘ-ಹಸಿರು ಸೇನೆ, ಕರವೇ, ಜಯ ಕರ್ನಾಟಕ ಸಂಘಟನೆ, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ನೇತೃತ್ವದಲ್ಲಿ ಹೆದ್ದಾರಿ ತಡೆ, ರಸ್ತೆ ತಡೆ, ಎತ್ತಿನ ಬಂಡಿ ಮೆರವಣಿಗೆ ನಡೆದವು. ಕೋಟೆನಾಡಿನ ನಾನಾ ಭಾಗದಲ್ಲಿ ಕೇವಲ ಪ್ರತಿಭಟನೆಗೆ ಮಾತ್ರ ಸಿಮೀತವಾಯಿತು. ಪ್ರತಿಭಟನೆ ವೇಳೆ ಹೋರಾಟಗಾರರು ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಾಂಗ್ರೆಸ್, ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇನ್ನು ಬಂದ್‌ನಿಂದ ಜನ ಜೀವನದ ಮೇಲೆ ಯಾವುದೇ ವ್ಯತ್ಯಯ ಉಂಟಾಗಲಿಲ್ಲ. ವ್ಯಾಪಾರ, ವಹಿವಾಟು, ಸಂತೆ, ಮಾರುಕಟ್ಟೆಗಳು ಆರಂಭಗೊಂಡವು. ಖಾಸಗಿ ವಾಹನಗಳ ಸಂಚಾರ ಎಂದಿನಂತೆ ಇತ್ತು. ಆದರೇ ಮುಂಜಾಗೃತೆ ಕ್ರಮವಾಗಿ ಸಾರಿಗೆ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಬಂದ್ ಕಾವು ಪಡೆಯದ ಪರಿಣಾಮ ಮಧ್ಯಾಹ್ನದ ನಂತರ್ ಬಸ್‌ಗಳು ಸಂಚಾರ ಆರಂಭಗೊಂಡಿತು. ಬಾಗಲಕೋಟೆ ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಜಿಲ್ಲೆಯ ಬಸ್ ನಿಲ್ದಾಣಗಳು ಪ್ರಯಾಣಿಕರು ಇಲ್ಲದೆ ಬೀಕೋ ಎನ್ನುತ್ತಿದ್ದವು. ನಿಲ್ದಾಣದಲ್ಲಿ ಬಸ್‌ಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬಂದಿತು. ಬಸ್ ಸಂಚಾರ ಇಲ್ಲದ ಪರಿಣಾಮ ಪ್ರಯಾಣಿಕರು ಪರದಾಡಿದ ಘಟನೆ ನಡೆಯಿತು. ಹಾಲು, ಪತ್ರಿಕೆ, ಆಸ್ಪತ್ರೆ, ಸರ್ಕಾರಿ ಕಚೇರಿಗಳು, ಬ್ಯಾಂಕ್, ಹೋಟೆಲ್, ರೈಲು ಸಂಚಾರ, ಟಂ.ಟಂ, ಅಟೋ, ಟ್ಯಾಕ್ಸಿ ಸೇವೆ ದೊರೆಯಿತು. ಬಾಗಲಕೋಟೆಯಲ್ಲಿ ಮಾಜಿ ಸಚಿವ ಎಚ್.ವೈ.ಮೇಟಿ, ಹುನಗುಂದ ಪಟ್ಟಣದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸೇರಿದಂತೆ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಒಟ್ಟಾರೆ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಮಧ್ಯಾಹ್ನದ ಹೊತ್ತಿಗೆ ಜನ ಜೀವನ ಯಥಾಸ್ಥಿತಿಗೆ ಮರಳಿತು.
ಎತ್ತಿ ಬಂಡಿಯಲ್ಲಿ ಮೆರವಣಿಗೆ
ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ ನಗರದಲ್ಲಿ ಕರವೇ, ಜಯ ಕರ್ನಾಟಕ, ರೈತ ಸಂಘ-ಹಸಿರು ಸೇನೆ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಜಂಟಿಯಾಗಿ ಪ್ರತಿಭಟನೆ ನಡೆಸಿದವು. ಬೆಳಗ್ಗೆ 8 ಗಂಟೆಗೆ ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಆರ್.ಡಿ.ಬಾಬು(ಜ್ಯೂ.ಉಪೇಂದ್ರ) ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕ ಹಾಗೂ ಕಾಂಗ್ರೆಸ್ -ಜೆಡಿಎಸ್ ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಉಪಹಾರ ಸೇವಿಸಿ ವಿನೂತವಾಗಿ ಪ್ರತಿಭಟನೆ ನಡೆಸಿದರು. ಬೀದಿ ನಾಟಕ, ಅಣುಕ ಪ್ರದರ್ಶನ ಸರ್ಕಾರದ ಗಮನ ಸೆಳೆಯಲಾಯಿತು.
ಅಲ್ಲದೆ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಮಾಜಿ ಸಚಿವ ಎಚ್.ವೈ.ಮೇಟಿ ನೇತೃತ್ವದಲ್ಲಿ ಹೋರಾಟಗಾರರು ಎಂ.ಜಿ ರಸ್ತೆ, ವಲ್ಲಭಾಯಿ ವೃತ್ತ, ತರಕಾರಿ ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸಿದರು. ಈ ವೇಳೆ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಪ್ರತಿಭಟನಾಕಾರರು ಮನವಿ ಮಾಡಿದರು. ಟೈಯರ್‌ಗೆ ಬೆಂಕಿ ಹಚ್ಚಲು ಮುಂದಾದರು ಪೊಲೀಸರು ಅವಕಾಶ ನೀಡಲಿಲ್ಲ. ಶಾಂತಿಯುತ ಪ್ರತಿಭಟನೆಗೆ ಬಂದ್‌ಗೆ ಬೆಂಬಲ ನೀಡಲಾಯಿತು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶಿವಾನಂದ ಉದುಪುಡಿ, ಕಾಂಗ್ರೆಸ್ ಜಿಲ್ಲಾ ವಕ್ತಾರ ನಾಗರಾಜ ಹದ್ಲಿ, ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾ ಕಾರ್ಯಧ್ಯಕ್ಷ ಗಿರೀಶ ಅಂಕಲಗಿ, ನಗರ ಘಟಕದ ಅಧ್ಯಕ್ಷ ಚನ್ನವೀರ ಅಂಗಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎನ್.ರಾಂಪೂರ, ಮುಖಂಡರಾದ ಹಾಜಿಸಾಬ ದಂಡಿ, ಮಂಜುನಾಥ ವಾಸ್ನದ, ಮುತ್ತು ಜೋಳದ, ಕರವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಧರ್ಮಂತಿ, ನಗರ ಘಟಕದ ಅಧ್ಯಕ್ಷ ಬಸವರಾಜ ಅಂಬಿಗೇರ, ಡಿಎಸ್‌ಎಸ್ ಅಂಬೇಡ್ಕರ್ ವಾದ ಸಂಘಟನೆ ಜಿಲ್ಲಾ ಸಂಚಾಲಕ ಯುವರಾಜ ಬಂಡಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣು ಹುರಕಡ್ಲಿ, ತಾಲೂಕಾ ಅಧ್ಯಕ್ಷ ಸಲಿಂ ಮೋಮಿನ ಪ್ರತಿಭಟನೆಯಲ್ಲಿ ಇದ್ದರು.
ರಸ್ತೆ ಹಾಗೂ ಹೆದ್ದಾರಿ ತಡೆ
ಭೂಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ವಿರೋಧಿಸಿ ಜಿಲ್ಲೆಯಲ್ಲಿ ವಿವಿಧೆಡೆ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ 50 ಹಾಗೂ 218 ರಲ್ಲಿ ಪ್ರತಿಭಟನೆ ನಡೆಸಲಾಯಿತು. ಇಳಕಲ್ಲ ನಗರದ ಸಮೀಪದ ಸೊಲ್ಲಾಪುರ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 50 ತಡೆ ನಡೆಸಿ ರಾಜ್ಯ ರೈತಸಂಘ,ಜನಜಾಗೃತಿ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಕಾಯ್ದೆ ಹಿಂಪಡೆಯುವಂತೆ ಮುಖಂಡರು ಒತ್ತಾಯಿಸಿದರು. ರಸ್ತೆ ತಡೆ ಹಿನ್ನೆಲೆ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಎರಡು ಕಿಮೀ ವರೆಗೂ ವಾಹನಗಳು ನಿಂತಿದ್ದವು. ಜಿಲ್ಲೆಯಲ್ಲಿ ಕರವೆ, ಜಯಕರ್ನಾಟಕ ಸಂಘಟನೆ ಸೇರಿದಂತೆ ವಿವಿಧ ಕನ್ನಡಪರ, ದಲಿತ, ರೈತಸಂಘಟನೆಗಳು ಸೇರಿ 13 ಸಂಘಟನೆಗಳಿಂದ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದವು.
EndFragment