

ಬಾಗಲಕೋಟೆ: ಜಿಲ್ಲೆಯ ಪ್ರತಿಯೊಂದು ತಾಲೂಕುವಾರು ವಿವಿಧ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಸಂಪೂರ್ಣ ಮಾಹಿತಿಯನ್ನು ಕ್ರೋಡೀಕರಿಸಿ ನಿಖರ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ನಡೆದ ಕೆರೆಗಳ ಅಳತೆ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ನಿರ್ದೇಶನ ನೀಡಿದಂತೆ ಕೆರೆಗಳ ಒಟ್ಟು ಮಾಹಿತಿ, ಕೆರೆಯ ಒತ್ತುವರಿ, ಸ್ವರೂಪ ಕಳೆದುಕೊಂಡಿರುವ ಕೆರೆಗಳ ಮಾಹಿತಿ ಹಾಗೂ ಮಲಿನಗೊಂಡ ಕೆರೆಗಳ ಬಗ್ಗೆ ಮಾಹಿತಿ ನೀಡಲು ಸೂಚಿಸಲಾಗಿತ್ತು. ಆದರೆ, ಇದುವರೆಗೂ ನಿಖರವಾದ ಮಾಹಿತಿ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ನಿಗದಿತ ನಮೂನೆಗಳ ಪ್ರಕಾರ ಮಾಹಿತಿ ಸಲ್ಲಿಸಲು ಆಯಾ ತಾಲೂಕು ತಹಸೀಲ್ದಾರರಿಗೆ ಸೂಚಿಸಿದರು.
ಈಗಾಗಲೇ ಕೆರೆಗಳ ಕಾರ್ಯಪಡೆ ರಚನೆ, ಕೈಗೊಂಡ ಕ್ರಮಗಳ ಬಗ್ಗೆ ಸಭೆಗಳು ನಡೆದಿವೆ. ಆದರೂ ಸಹಿತ ಸರಿಯಾದ ಮಾಹಿತಿ ನೀಡಿರುವುದಿಲ್ಲ. ಉಚ್ಚ ನ್ಯಾಯಾಲಯಕ್ಕೆ ಕೆರೆಗಳ ಮಾಹಿತಿ ಸಲ್ಲಿಸಬೇಕಾಗಿರುವುದರಿಂದ ಕೂಡಲೇ ಪ್ರತಿ ತಾಲೂಕು ಮಟ್ಟದಲ್ಲಿ ಸಭೆಗಳನ್ನು ಮಾಡಿ ತಮ್ಮ ವ್ಯಾಪ್ತಿಯಲ್ಲಿ ಬರುವ ಇಲಾಖಾವಾರು ಕೆರೆಗಳ ಮಾಹಿತಿ, ಕೆರೆಗಳ ಅಳತೆ, ಒತ್ತುವರಿ ಗುರುತಿಸಿದ ಬಗ್ಗೆ ತೆರವು, ತಂತಿಬೇಲಿ, ನಾಮಫಲಕ ಅಳವಡಿಸ ಬಗ್ಗೆ ಛಾಯಾಚಿತ್ರಗಳ ಸಮೇತ ಮಾಹಿತಿಯನ್ನು ಒಂದು ವಾರದೊಳಗೆ ಸಲ್ಲಿಸಬೇಕು. ನಂತರ ಆಯಾ ಉಪವಿಭಾಗಾಧಿಕಾರಿಗಳು ಪರಿಶೀಲನೆ ಮಾಡಿ ಅಂತಿಮವಾಗಿ ಕೆರೆಗಳ ವರದಿ ಸಲ್ಲಿಸಲು ನಿರ್ದೇಶನ ನೀಡಿದರು.
ಸಭೆಗೆ ಬರುವಾಗ ಸಂಬಂಧಿಸಿದ ವಿಷಯಗಳ ಬಗ್ಗೆ ಹೋಮ್‌ವರ್ಕ್ ಮಾಡಿಕೊಂಡು ಬರಬೇಕು. ಕೇಳಿದ ಪ್ರಶ್ನೆಗೆ ಉತ್ತರ ನೀಡಲು ಸಜ್ಜಾಗಿರಬೇಕು. ಮಾಹಿತಿ ಇಲ್ಲದೆ ಸಭೆಗೆ ಹಾಜರಾಗುವಂತಿಲ್ಲವೆಂದು ಕಟ್ಟುನಿಟ್ಟಿನ ಎಚ್ಚರಿಕೆೆ ನೀಡಿದರು. ಅಲ್ಲದೆ, ಅನುಮತಿ ಇಲ್ಲದೆ ಸಭೆಗೆ ಹಾಜರಾಗದ ಹುನಗುಂದ ತಹಸೀಲ್ದಾರರಿಗೆ ಶೋಕಾಸ್ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಒಟ್ಟು 270 ಕೆರೆಗಳ ಪೈಕಿ ಬಾಗಲಕೋಟೆ ತಾಲೂಕಿನಲ್ಲಿ 37, ಬಾದಾಮಿ 76, ಹುನಗುಂದ 31, ಜಮಖಂಡಿ 57, ಮುಧೋಳ 40, ಬೀಳಗಿ 29 ಕೆರೆಗಳಿವೆ. ಅದರಲ್ಲಿ ಸಣ್ಣ ನೀರಾವರಿ ಇಲಾಖೆಗೆ 68 ಕೆರೆಗಳು, ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ 104, ತಾಲೂಕು ಪಂಚಾಯಿತಿಗೆ 35, ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ 3, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ 20, ಪುರಸಭೆಗೆ ವ್ಯಾಪ್ತಿಗೆ 3, ನಗರಸಭೆ 6, ಅರಣ್ಯ ಇಲಾಖೆ 11, ಕಂದಾಯ ಇಲಾಖೆಗೆ 17, ಜಿಎಲ್‌ಬಿಸಿ 1, ಯುಕೆಪಿ ವ್ಯಾಪಿಯಲ್ಲಿ 2 ಕೆರೆಗಳಿರುವುದಾಗಿ ಭೂ ದಾಖಲೆ ಉಪನಿರ್ದೇಶಕರು ತಿಳಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಟಿ.ಭೂಬಾಲನ್, ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ ಸೇರಿ ಆಯಾ ತಾಲೂಕಿನ ತಹಸೀಲ್ದಾರರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
11.39 ಎಕರೆ ಸರ್ವೇ ಬಾಕಿ
ಜಿಲ್ಲೆಯಲ್ಲಿ ಒಟ್ಟಾರೆಯಾಗಿ 270 ಕೆರೆಗಳಿದ್ದು, ಈ ಪೈಕಿ 268 ಕೆರೆಗಳ ಸರ್ವೇ ಮಾಡಲಾಗಿದೆ. ಒತ್ತುವರಿಯಾಗಿದ್ದು 86 ಕೆರೆಗಳು, ಇದರಲ್ಲಿ 20 ಒತ್ತುವರಿ ಕೆರೆಗಳನ್ನು ತೆರವುಗೊಳಿಸಲಾಗಿದೆ. 66 ಕೆರೆಗಳು ಮಾತ್ರ ಬಾಕಿ ಉಳಿದಿವೆ. ಒತ್ತುವರಿ ಮುಕ್ತವಿರುವ ಕೆರೆಗಳು 182 ಇವೆ. ಜಿಲ್ಲೆಯಲ್ಲಿರುವ 270 ಕೆರೆಗಳು ಒಟ್ಟು 5538.04 ಎಕರೆ ವಿಸ್ತೀರ್ಣ ಹೊಂದಿದ್ದು, ಈ ಪೈಕಿ 5526.05 ಎಕರೆ ಮಾತ್ರ ಅಳತೆ ಮಾಡಲಾಗಿದ್ದು, ಇನ್ನು 11.39 ಎಕರೆ ಅಳತೆಗೆ ಬಾಕಿ ಇರುವುದಾಗಿ ಭೂ ದಾಖಲೆಗಳ ಉಪ ನಿರ್ದೇಶಕ ಮಹಾಂತೇಶ ಮುಳಗುಂದ ಸಭೆಗೆ ತಿಳಿಸಿದರು.
EndFragment