

ಬಾಗಲಕೋಟೆ: ಕುರಬ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ಬಾಗಲಕೋಟೆಯಲ್ಲಿ ನಡೆದ ಕುರುಬರ ಸಮಾವೇಶದಲ್ಲಿ ಸಮಾಜದ ಕಾಳಜಿ ಇಲ್ಲ. ಸಮುದಾಕ್ಕಿಂತ ಬಿಜೆಪಿ ಮುಖಂಡರ ವೈಯಕ್ತಿಕ ಹಕ್ಕೋತ್ತಾಯವಾಗಿದೆ ಎಂದು ಸಂಗೊಳ್ಳಿ ರಾಯಣ್ಣ ಸ್ಮಾರಕ, ಪ್ರಾಧಿಕಾರ ರಚನೆ ಹೋರಾಟ ಸಮಿತಿ ಅಧ್ಯಕ್ಷ ಅರವಿಂದ ದಳವಾಯಿ ಹೇಳಿದರು.
ಸಮಾವೇಶದಲ್ಲಿ ಕೇವಲ ಬಿಜೆಪಿ ಮುಖಂಡರು ಇದ್ದರು. ಜೆಡಿಎಸ್,ಕಾಂಗ್ರೆಸ್ ನಾಯಕರು ಇರಲಿಲ್ಲ. ಇದರಲ್ಲಿ ಕೆ.ಎಸ್.ಈಶ್ವರಪ್ಪ ಮತ್ತು ಅವರ ಪುತ್ರ ಕಾಂತೇಶ ಅವರ ರಾಜಕೀಯ ಹಿತಾಸಕ್ತಿ ಅಡಗಿದೆ. ಶಾಸಕ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ವಿಧಾನ ಪರಿಷತ್ತ ಸದಸ್ಯರಾಗಿ ಆಯ್ಕೆಗೊಂಡ ನಾಯಕರ ಮಂತ್ರಿ ಮಾಡುವ ಇರಾದೇ ಹೊಂದಿರುವ ವಿಷಯ ಸಮಾವೇಶದಲ್ಲಿ ಬಹಿರಂಗಗೊಂಡಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಾವೇಶ ಕುರಿತು ನೆಪ ಮಾತ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗಿದೆ. ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಬೇಕು ಎನ್ನುವುದು ಇದರ ದುರುದ್ದೇಶವಾಗಿದೆ. ಎಚ್.ವಿಶ್ವನಾಥ, ಎಂ.ಟಿ.ಬಿ. ನಾಗರಾಜ, ಕೆ.ಎಸ್.ಈಶ್ವರಪ್ಪ ಮೀಸಲಾತಿ ಕುರಿತು ಸದನಲ್ಲಿ, ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ ಮಾಡುವ ಬಗ್ಗೆ ಉಲ್ಲೇಖಿಸಲಿಲ್ಲ. ಅಲ್ಲದೆ ತಿಂಥಣಿ ಶಾಖಾಮಠದ ಸಿದ್ದರಾಮಾನಂದ ಪುರಿ ಸ್ವಾಮೀಜಿ ಅವರನ್ನು ವೇದಿಕೆ ಮೇಲೆ ಸಚಿವ ಈಶ್ವರಪ್ಪ ಏಕ ವಚನದಲ್ಲಿ ಮಾಡಿದನ್ನು ನೋಡಿದರೇ ಸಮಾಜ ಬಗ್ಗೆ ನೈಜ ಕಾಳಜಿ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದರು.
ಬಿಜೆಪಿಯಲ್ಲಿರುವ ಕುರುಬ ಸಮಾಜದ ನಾಯಕರು ತಮ್ಮ ಭಾಷಣದೂದ್ದಕ್ಕೂ ಪಾದಯಾತ್ರೆ, ಬೀದಿ ಚಳುವಳಿ ಬಗ್ಗೆ ಮಾತನಾಡಿದರೇ ಹೊರತು ಸಂವಿಧಾನಿಕ ಕರ್ತವ್ಯಗಳ ಬಗ್ಗೆ ಚಕಾರ ಎತ್ತಲಿಲ್ಲ.ವಾಸ್ಥವದಲ್ಲಿ ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ಸಿಗಬೇಕು ಎನ್ನುವ ಬೇಡಿಕೆ 50 ವರ್ಷಗಳಿಂದ ಇದೆ. ಇದನ್ನು ಗಮನಿಸಿ ಸಿದ್ದರಾಮಯ್ಯ ತಮ್ಮ ಅಧಿಕಾರ ಅವಧಿಯಲ್ಲಿ ಬೀದರ, ಕಲಬುರ್ಗಿ, ಯಾದಗಿರಿ ಜಿಲ್ಲೆಯ ಕುರುಬ ಜನಾಂಗವನ್ನು ಎಸ್ಟಿ ಮೀಸಲಾತಿಗೆ ಸೇರ್ಪಡೆಗೊಳಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು. 2014 ರಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರು ಸಹ ಇದು ಅಂಗೀಕಾರವಾಗಿಲ್ಲ. ಈ ಬಗ್ಗೆ ಒತ್ತು ನೀಡದ ಸಚಿವ ಈಶ್ವರಪ್ಪ ಮತ್ತು ಇತರರು ಈಗ ಸುಖಾಸುಮ್ಮನೇ ಸಿದ್ದರಾಮಯ್ಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ಇನ್ನು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಸಿದ್ದರಾಮಯ್ಯ ಒತ್ತು ನೀಡಿದ್ದರಿಂದ ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡುವ ಕುರಿತು ಕುಲ ಶಾಸ್ತ್ರ ಅಧ್ಯಯನ ಸಮಿತಿ ರಚಿಸಲಾಯಿತು, ಇಂದಿಗೂ ಅಧ್ಯಯನ ನಡೆಯುತ್ತಿದೆ. ಸಿದ್ದರಾಮಯ್ಯ ಕುರುಬ ಹಾಗೂ ಅಹಿಂದ ವರ್ಗಗಳ ಅಗ್ರಗಣ್ಯ ನಾಯಕ. ಇದನ್ನು ಸಹಿಸಿಕೊಳ್ಳಲಾಗದೇ ಬಿಜೆಪಿ ಮತ್ತು ಆರ್.ಎಸ್.ಎಸ್. ಕುತಂತ್ರ ಮಾಡಿ ಸಿದ್ದರಾಮಯ್ಯ, ಕಾಂಗ್ರೆಸ್‌ನಿಂದ ಕುರುಬ ಸಮಾಜವ ದೂರ ಮಾಡಲು ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಿದರು.
ಕುರುಬ ಸಮಾಜವು ಭಂಡಾರ, ವಿಭೂತಿ, ಶೈವ ಸಂಸ್ಕೃತಿ ಹೊಂದಿದೆ. ಈಶ್ವರಪ್ಪ ಮೂಲಕ ಕೇಸರಿಮಯ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಕುರುಬ ಸಮಾಜ ಬಾಂಧವರು ಜಾಗೃತಿ ವಹಿಸಬೇಕು. ಬಿಜೆಪಿಯಲ್ಲಿರುವ ನಾಯಕರಿಗೆ ನಿಜವಾಗಿ ಸಮಾಜದ ಕಾಳಜಿ ಇದ್ದರೇ ಡಿ.7 ರಿಂದ ನಡೆಯುವ ವಿಧಾಣ ಮಂಡಲ ಅಧಿವೇಶನ ಹಕ್ಕೋತ್ತಾಯ ಮಾಡಬೇಕು. ಕೇಂದ್ರಕ್ಕೆ ಮೀಸಲಾತಿ ಶಿಫಾರಸ್ಸು ಕಳುಹಿಸುವುದರ ಜತೆಗೆ ಅಂಗೀಕಾರ ಕೂಡಾ ಮಾಡಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಯಲ್ಲಪ್ಪ ಹೆಗಡೆ, ಎಂ.ಆರ್.ಬಾಳೆಕುಂದ್ರಿ, ಬಸವರಾಜ ಧ್ಯಾಮಣ್ಣವರ, ಕೃಷ್ಣಾ ಮುಧೋಳ ಸುದ್ದಿಗೋಷ್ಠಿಯಲ್ಲಿ ಇದ್ದರು.
EndFragment