ಮಂದಗತಿಯಲ್ಲಿ ಸಾಗಿದ ಕಾಮಗಾರಿ ನನೆಗುದಿಗೆ ಬಿದ್ದ ಬಾಗಲಕೋಟೆ & ಕುಡಚಿ ರೆಲ್ವೆ ಯೋಜನೆ

Bagalkot & Kudachi Railway Project stalled due to slow progress
Published on

ಜಮಖಂಡಿ;ಶತಮಾನದ ಮಹಾರಾಜರ ಕಾಲದಿಂದಲೂ ಬೇಡಿಕೆಯ ಬಾಗಲಕೋಟೆ ಕುಡಚಿ ರೆಲ್ವೆ ಯೋಜನೆ 2017 ರಲ್ಲೇ ಪೂರ್ಣವಾಗಬೇಕಿತ್ತು ಜನಪ್ರತಿನಿಧಿಗಳ, ಅಧಿಕಾರಿಗಳ ರ್ನಿಲಕ್ಷದಿಂದ ಇನ್ನೂವರೆಗೂ ಪೂರ್ಣವಾಗುತ್ತಿಲ್ಲ ಎಂದು ರೈಲ್ವೆ ಹೋರಾಟ ಸಮಿತಿ ಅಧ್ಯ ಕುತ್ಬುದ್ದಿನ್​ ಖಾಜಿ ಬೇಸರ ವ್ಯಕ್ತಪಡಿಸಿದರು.

ನಗರದ ಕಾನಿಪ ಸಂದ ಪತ್ರಿಕಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬಾಗಲಕೋಟೆಯಿಂದ ಲೋಕಾಪುರವರೆಗೆ ಪೂರ್ಣವಾಗಿದೆ, ಲೋಕಾಪುರದಿಂದ ಯಾದವಾಡವರೆಗೆ ಯಾದವಾಡದಿಂದ ಮುಧೋಳವರೆಗೆ ಯೋಜನೆ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಆದರೆ ಮುಧೋಳದಿಂದ ಜಮಖಂಡಿವರೆಗೆ ಇನ್ನೂವರೆಗೂ ಕಾಮಗಾರಿ ಪ್ರಾರಂಭವಾಗಿಲ್ಲ, ಭೂಸ್ವಾಧಿನದಿಂದ ಬಿಟ್ಟುಹೋಗಿರುವ 10 ರಿಂದ 15 ಎಕರೆ ಪ್ರದೇಶದ ರೈತರುಗಳಿಗೆ ಪರಿಹಾರ ನೀಡಿ ಇತ್ಯರ್ಥ ಪಡಿಸಬೇಕಿದೆ. ಅದನ್ನು ಜನಪ್ರತಿನಿಧಿಗಳು ಕೂಡಲೇ ಮಾಡಿಸಬೇಕು ಎಂದು ಆಗ್ರಹಿಸಿದರು.

ಜಮಖಂಡಿಯಿಂದ ಕುಡಚಿವರೆಗೆ ರೈಲ್ವೆ ಟ್ರಾಕ್​ ಅಳವಡಿಸುವ ಜಾಗೆಯನ್ನು ಸ್ವಚ್ಛಗೊಳಿಸಲು 6.5 ಕೋಟಿ ರೂ. ಟೆಂಡರ್​ ಕರೆದಿದ್ದಾರೆ, 74 ಎಕರೆ ಪ್ರದೇಶದ ರೈತರು ಹೊಸ ಕಾಯ್ದೆಯ ಪರಿಹಾರ ಹಣ ನೀಡುವಂತೆ ಹೈಕೋರ್ಟ್​ ಮೊರೆ ಹೋಗಿದ್ದಾರೆ. ಹೊಸ ಕಾಯ್ದೆಯ ಪರಿಹಾರ ಧನ ನೀಡಲು ಸರ್ಕಾರ ಒಪ್ಪಿಕೊಂಡಿದೆ ಆದರೆ ನ್ಯಾಯಾಲಯದಲ್ಲಿನ ಅರ್ಜಿ ಇತ್ಯರ್ಥವಾಗಬೇಕಿದೆ ಎಂದರು.

ಜನಪ್ರತಿನಿಧಿಗಳು ತಮ್ಮ ಐಷಾರಾಮಿ ಜೀವನ ನಡೆಸಲು ಎಲ್ಲ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತೀರಿ, ಆದರೆ ಜನಸಾಮಾನ್ಯರಿಗೆ ಉಪಯೋಗವಾಗುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮೀನಮೇಷವೇಕೆ ಎಂದರು.

ಈ ಭಾಗದ ಕನಸಿನ ಯೋಜನೆಯನ್ನು ಇಲ್ಲಿನ ಜನಪ್ರತಿನಿಧಿಗಳು ಮುತುವರ್ಜಿವಹಿಸಿ ಕಾಮಗಾರಿ ತ್ವರಿತಗತಿಯಲ್ಲಿ ಮುಕ್ತಾಯಗಿಳಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಡ ತರಬೇಕು. ಇದೆ ರೀತಿ ಮುಂದುವರಿದರೆ ಉಗ್ರ ಹೋರಾಟ ಮಾಡಲು ಮುಂದಾಗಬೇಕಾಗುವುದು ಎಂದು ಎಚ್ಚರಿಸಿದರು.

ರೈತ ಹೊರಾಟಗಾರ ಸುಭಾಸ ಶಿರಬೂರ, ಡಾ. ರವಿ ಜಮಖಂಡಿ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಮುಸ್ತಾಕ್​ ಝೆಂಡೆ, ಅಬುಬಕರ ಕುಡಚಿ, ಕಾಡಪ್ಪ ಹೊಸಮನಿ, ಮೈನುದ್ದೀನ್​ ಖಾಜಿ ಇದ್ದರು.

ಜಮಖಂಡಿ ನಗರದ ಕಾನಿಪ ಸಂದ ಪತ್ರಿಕಾ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ರೈಲ್ವೆ ಹೋರಾಟ ಸಮಿತಿ ರಾಜ್ಯ ಅಧ್ಯ ಕುತ್ಬುದ್ದಿನ್​ ಖಾಜಿ ಮಾತನಾಡಿದರು. ಸುಭಾಸ ಶಿರಬೂರ, ಡಾ. ರವಿ ಜಮಖಂಡಿ, ಅಬುಬಕರ ಕುಡಚಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net