

v
ಬಾಗಲಕೋಟೆ: ಆಮೆಗತಿಯಲ್ಲಿ ಸಾಗುತ್ತಿರುವ ಕೃಷ್ಣಾ ಮೇಲ್ದಂಡೆ ಯೋಜನೆಗೆ ರಾಜ್ಯ ಸರ್ಕಾರವು ವೇಗ ನೀಡಬೇಕು. ಕೆಬಿಜೆಎನ್‌ಎಲ್ ಕಚೇರಿ ಬಾಗಲಕೋಟೆ ಅಥವಾ ಆಲಮಟ್ಟಿಗೆ ಸ್ಥಳಾಂತರಮಾಡಬೇಕು. ಖಾಲಿ ಇರುವ ಹುದ್ದೆಗಳಿಗೆ ಶೀಘ್ರದಲ್ಲಿ ಅಧಿಕಾರಿ, ಸಿಬ್ಬಂದಿ ನೇಮಕ ಮಾಡಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಆಗ್ರಹಿಸಿದರು.
ದಶಕಗಳಿಂದ ನನೆಗುದಿಗೆ ಬಿದ್ದಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ ಪೂರ್ಣಗೊಳಿಸಬೇಕಿದೆ. ವಿರೋಧ ಪಕ್ಷದಲ್ಲಿದ್ದಾಗ ಹೋರಾಟ ಮಾಡುವ ಸಂದರ್ಭದಲ್ಲಿ ಬಿಜೆಪಿ ನಾಯಕರಾದ ಡಿಸಿಎಂ ಗೋವಿಂದ ಕಾರಜೋಳ, ಶಾಸಕ ವೀರಣ್ಣ ಚರಂತಿಮಠ ಸಾಕಷ್ಟು ಭರವಸೆ ನೀಡಿದ್ದರು. ಇದೀಗ ಅದರಿಂದ ನುಣುಚಿಕೊಳ್ಳಲು ಮುಂದಾಗುತ್ತಿರುವುದು ಸರಿಯಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೆಬಿಜೆಎನ್‌ಎಲ್ ಕಚೇರಿ ಬೆಂಗಳೂರಿನಲ್ಲಿ ಇದ್ದರೇ ಯಾವ ಪ್ರಯೋಜನವಿಲ್ಲ. ಕೆಲವು ಅಧಿಕಾರಿಗಳು ತಮ್ಮ ಸ್ವಾರ್ಥಕ್ಕೆ ಕಚೇರಿ ಸ್ಥಳಾಂತರ ಮಾಡಲು ಅಡೆತಡೆ ಉಂಟು ಮಾಡುತ್ತಿದ್ದಾರೆ. ಬೆಂಗಳೂರಿನಿಂದ ಈ ಭಾಗಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಅಂತಹ ಅಧಿಕಾರಿಗಳು, ಸಿಬ್ಬಂದಿ ವರ್ಗದವರನ್ನು ಅಮಾನತು ಮಾಡಬೇಕು. ಮುಖ್ಯವಾಗಿ ಯುಕೆಪಿಗೆ ಆಯುಕ್ತರು, ಭೂ ಸ್ವಾಧೀನ ಅಧಿಕಾರಿಗಳು, ಮಹಾವ್ಯವಸ್ಥಾಪಕರು, ಉಪ ಮಹಾವ್ಯವಸ್ಥಾಪಕರ ಹುದ್ದೆಗಳು ಖಾಲಿ ಇವೆ. ಇಷ್ಟೊಂದು ಜವಾಬ್ದಾರಿಯುತ ಸ್ಥಾನಗಳು ಖಾಲಿ ಇರುವಾಗ ಕೆಲಸ ಕಾರ್ಯ ನಡೆಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಹಿಂದೆ ನೀವು (ಬಿಜೆಪಿ) ವಿರೋಧ ಪಕ್ಷದಲ್ಲಿ ಇದ್ದಾಗ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ಜಮೀನು ಕಳೆದುಕೊಳ್ಳಲಿರುವ ರೈತರಿಗೆ ಪ್ರತಿ ಎಕರೆಗೆ ಒಣ ಬೇಸಾಯಕ್ಕೆ 30 ಲಕ್ಷ ರೂ., ನೀರಾವರಿಗೆ 40 ಲಕ್ಷ ರೂ. ವರಗೆ ಪರಿಹಾರ ನೀಡಬೇಕು ಎಂದು ಹೋರಾಟ ಮಾಡಿದ್ದೀರಿ. ಇದೀಗ ನೀವೇ ಅಧಿಕಾರದಲ್ಲಿ ಇದ್ದೀರಿ. ಆದರೇ ಉಪ ನೊಂದಣಾಧಿಕಾರಿ ನೋಂದಣಿ ಆಧಾರದ ಮೇಲೆ ಪರಿಹಾರ ನೀಡಲಾಗುವುದು ಎಂದು ಹೇಳುತ್ತಿರುವುದು ಸಲ್ಲ. ತಾವೇ ನೀಡಿದ ಭರವಸೆಯಂತೆ ಪರಿಹಾರ ನೀಡಿದಲ್ಲಿ ರೈತರ ಪರವಾಗಿ ದೊಡ್ಡ ಪ್ರಮಾಣದ ಕಾರ್ಯಕ್ರಮದ ಮೂಲಕ ಸನ್ಮಾನ ಮಾಡುತ್ತೇನೆ ಎಂದು ಸವಾಲು ಹಾಕಿದ ಅವರು, ಈ ಕುರಿತು ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು. ಮುಖಂಡರಾದ ಹಾಸಿಸಾಬ ದಂಡಿನ, ಎಸ್.ಎನ್. ರಾಂಪೂರ, ಅನೀಲ ದಡ್ಡಿ, ಚಂದ್ರಶೇಖರ ರಾಠೋಡ ಸುದ್ದಿಗೋಷ್ಠಿಯಲ್ಲಿ ಇದ್ದರು.
ಪ್ರಕರಣ ದಾಖಲು ನಿಶ್ಚಿತ
ಶಾಸಕ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲಿಸುವುದು ನಿಶ್ಚಿತ. ಇದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಅಲ್ಪಮಟ್ಟಿನ ಸಾಕ್ಷಾಧಾರಗಳು ದೊರೆತಿವೆ. ಇನ್ನು ಅಗತ್ಯವಾದ ದಾಖಲೆಗಳು ಸಂಗ್ರಹವಾದ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ನಂಜಯ್ಯನಮಠ ಹೇಳಿದರು.
ಕಳೆದ ವರ್ಷ ಕೆಬಿಜೆಎನ್‌ಎಲ್‌ಗೆ ಸಾವಿರ ಕೋಟಿ ರೂ. ಬಿಡುಗಡೆಯಾಗಿದೆ. ಅದರಲ್ಲಿ 600 ಕೋಟಿ ರೂ. ಮಾತ್ರ ಬಳಕೆಯಾಗಿದೆ. 400 ಕೋಟಿ ರೂ. ಖಜಾನೆಯಲ್ಲಿ ಉಳಿದಿದೆ. ಇದು ಬಿಜೆಪಿ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. 2013 ರಿಂದ 2018 ವರೆಗೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೃ.ಮೇ.ಯೋಜನೆಗೆ 26 ಸಾವಿರ ಕೋಟಿ ಅನುದಾನ ನೀಡಲಾಗಿತ್ತು.
- ಎಸ್.ಜಿ. ನಂಜಯ್ಯನಮಠ ಕಾಂಗ್ರೆಸ್ ಜಿಲ್ಲಾಧ್ಯಕ್ಷ