19ಕ್ಕೆ ಮೆಗಾ ಇ-ಲೋಕ ಅದಾಲತ್

BKT NEWS 1-3
Published on

ಬಾಗಲಕೋಟೆ: ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಸೆ.19 ರಂದು ಬಾಗಲಕೋಟೆ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಮೆಗಾ ಇ-ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕಲ್ಪನಾ ಕುಲಕರ್ಣಿ ಹೇಳಿದರು.

ದೇಶದಲ್ಲಿ ಪ್ರಥಮ ಬಾರಿಗೆ ರಾಜ್ಯದಲ್ಲಿ ಇ-ಲೋಕ ಅದಾಲತ್ ನಡೆಯುತ್ತಿದೆ. ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡುವ ಪ್ರಕ್ರಿಯೆಯನ್ನು ತಂತ್ರಾಂಶದ ಮೂಲಕ ವಕೀಲರ ಸಮ್ಮುಖದಲ್ಲಿ ಇಲ್ಲವೇ ತಾವೇ ಸ್ವತಃ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಪ್ರಕರಣಗಳ ನೋಂದಣಿಗೆ ಸೆ.18 ಕೊನೆಯ ದಿನವಾಗಿರುತ್ತದೆ. ಜಿಲ್ಲೆಯ ಜನ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ನ್ಯಾಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಈಗಾಗಲೇ ಇತ್ಯರ್ಥವಾಗದ ಒಟ್ಟು 42097 ಪ್ರಕರಣಗಳಿವೆ. ಇದರಲ್ಲಿ 24245 ಸಿವಿಲ್ ಪ್ರಕರಣಗಳು ಹಾಗೂ 17852 ಕ್ರಿಮಿನಲ್ ಪ್ರಕರಣಗಳಿದ್ದು, ಇವುಗಳನ್ನು ಮೆಗಾ ಇ-ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 1815 ಪ್ರಕರಣಗಳನ್ನು ರಾಜಿಗಾಗಿ ಗುರುತಿಸಲಾಗಿದೆ ಎಂದು ತಿಳಿಸಿದರು.

ಮೆಗಾ ಇ-ಲೋಕ ಅದಾಲತ್‌ನಲ್ಲಿ ಮೋಟಾರು ವಾಹನ ಅಪಘಾತ ಪ್ರಕರಣಗಳು, ವಿಮಾ ಕಂಪನಿಗಳ ಪ್ರಕರಣಗಳು, ಕೌಟುಂಬಿಕ ಪ್ರಕರಣಗಳು, ಕಾರ್ಮಿಕ ಸಂಬಂಧಿತ ವಿವಾದ, ಬ್ಯಾಂಕ್ ವಿಷಯಗಳು, ಚೆಕ್ ಬೌನ್ಸ್, ಹಣ ವಸೂಲಾತಿ ಪ್ರಕರಣಗಳು, ಕ್ರಿಮಿನಲ್ ಅಪರಾಧಗಳು, ಎಂ.ಎ.ಸಿ.ಟಿ. ಪ್ರಕರಣಗಳು, ಭೂಸ್ವಾಧೀನ, ವಿದ್ಯುತ್, ಎಂ.ಎಂ.ಡಿ.ಆರ್. ಕಾಯ್ದೆ, ಸಿವ್ಹಿಲ್ ಪ್ರಕರಣಗಳು. ಜನನ ಮತ್ತು ಮರಣ ನೋಂದಣಿ, ಪಿಸಿ ಪ್ರಕರಣಗಳು ಸೇರಿ ಇನ್ನಿತರ ವಿಷಯಗಳಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಕಕ್ಷಿದಾರರು ಹಾಗೂ ವಕೀಲರು ನ್ಯಾಯಾಲಯಕ್ಕೆ ಹಾಜರಾಗದೆ ಸಂಧಾನಕಾರರು, ಪಕ್ಷಗಾರರು ಹಾಗೂ ವಕೀಲರನ್ನು ವಿಡಿಯೋ ಸಂವಾದದ ಮೂಲಕ ಸಂಪರ್ಕಿಸಿ ಸಂಧಾನ ನಡೆಸಲಾಗುತ್ತಿದೆ. ವಾಸ ಮಾಡುವ ಸ್ಥಳ, ಮನೆ, ವಕೀಲರ ಕಚೇರಿಯಲ್ಲಿ ವಿಡಿಯೋ ಸಂವಾದದ ಮೂಲಕ ಇ-ಮೆಗಾ ಅದಾಲತ್‌ನಲ್ಲಿ ಭಾಗವಹಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ಆದ ಕಾರಣ ಪಕ್ಷಗಾರರು ಈ ಕೂಡಲೇ ವಕೀಲರನು ಸಂಪರ್ಕಿಸಿ ಅದಾಲತ್‌ನ ಪ್ರಯೋಜನ ಪಡೆಯಬಹುದಾಗಿದೆ ಎಂದು ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಹೇಮಲತಾ ಹುಲ್ಲೂರ ಉಪಸ್ಥಿತರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net