ಶಿಕ್ಷಕರ ದಿನ ಸರಳ ಆಚರಣೆಗೆ ನಿರ್ಧಾರ

dr sarvaplli_new
Published on

ಬಾಗಲಕೋಟೆ: ಕೋವಿಡ್ ಹಿನ್ನೆಲೆಯಲ್ಲಿ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗುವ ಶಿಕ್ಷಕರ ದಿನವನ್ನು ಸುರಕ್ಷಿತ ಕ್ರಮಗಳೊಂದಿಗೆ ಸರಳವಾಗಿ ಆಚರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ನಗರದ ಬಿ.ಆರ್.ಸಿ. ಕೇಂದ್ರದಲ್ಲಿ ಡಿಡಿಪಿಐ ಶ್ರೀಶೈಲ ಬಿರಾದಾರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಹಂತದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.

ಕರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ಹಾಗೂ ಸುರಕ್ಷಾ ದೃಷ್ಟಿಯಿಂದ ಸರ್ಕಾರದ ಮಾರ್ಗಸೂಚಿ ಅನುಸಾರ ಕಾರ್ಯಕ್ರಮವನ್ನು ಅತ್ಯಂತ ಸರಳವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು, ಜಿಪಂ ಅಧ್ಯಕ್ಷರು, ಜಿಪಂ ಸಿಇಒ ಸೇರಿ ಜನಪ್ರತಿನಿಧಿಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು. ಸಮಾರಂಭದ ಎಲ್ಲ ಹಂತಗಳಲ್ಲಿಯೂ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸುವುದು, ಪ್ರವೇಶ ದ್ವಾರದಲ್ಲಿಯೇ ಥರ್ಮಲ್ ಸ್ಕ್ರೀನಿಂಗ್‌ಗೆ ಒಳಗಾಗುವುದು, ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ. ಒಟ್ಟಾರೆ ಅಗತ್ಯವಾದ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

ಬಿಇಒ ಪಿ.ಬಿ.ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ, ಕ್ಷೇತ್ರ ಸಮನ್ವಾಧಿಕಾರಿ ಎಚ್.ಕೆ. ಗುಡೂರ, ಜಿಲ್ಲಾ ನೋಡಲ್ ಅಧಿಕಾರಿ ಡಿ.ಎಂ.ಯಾವಗಲ್ಲ, ತಾಲೂಕು ನೋಡಲ್ ಅಧಿಕಾರಿ ಡಾ.ಎಸ್.ಬಿ.ಹುಲ್ಯಾಳ, ಅಕ್ಷರ ದಾಸೋಹ ಅಧಿಕಾರಿ ಎ.ಎ.ರಾಮತೀರ್ಥ, ಪ್ರಾ.ಶಾ.ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಪಿ.ಬಾಗೇನವರ, ಎಸ್ಸ್ಸಿ, ಎಸ್ಟಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಲ್.ಸಿ.ಯಂಕಂಚಿ ಸೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net