

ಬಾಗಲಕೋಟೆ: ಕಿಸಾನ್ ಸಮ್ಮಾನ್, ತ್ರಿವಳಿ ತಲಾಖ್‌ಗೆ ಮುಕ್ತಿ, ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ, ಮಕ್ಕಳ ಮೇಲಿನ ಲೈಂಗಿಕ ಕಿರುಕುಳ, ದೌರ್ಜನ್ಯಕ್ಕೆ ಮರಣದಂಡನೆ ಶಿಕ್ಷೆ, ಸಿಎಎ, ಎನ್‌ಆರ್‌ಸಿ ಕಾಯ್ದೆ ಜಾರಿ, ಮಹಾಮಾರಿ ಕರೊನಾ ಸಂಕಷ್ಟದಲ್ಲಿ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ, ವಿದೇಶಾಂಗ ನೀತಿಯಲ್ಲಿ ಚಾಣಾಕ್ಷ ನಡೆ, ಪ್ರಪಂಚದ ಹಿರಿಯಣ್ಣ ಆಗುತ್ತಿರುವ ಭಾರತ…ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೋದಿಯೇ ಸಾಟಿ.
ಬಾಗಲಕೋಟೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ವರ್ಷದ ಸಾಧನೆಯ ಪಟ್ಟಿಯನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹರವಿದರು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ ವಿಚಾರದೊಂದಿಗೆ ಮೋದಿ ಅವರ ಸರ್ಕಾರ ಆಡಳಿತ ನಡೆಸುತ್ತಿದೆ. ಮಹಿಳಾ ಸಮಾನತೆ ವಿಚಾರದಲ್ಲಿ 12ನೇ ಶತಮಾನದಲ್ಲಿ ಬಸವಣ್ಣನ ತತ್ವಗಳನ್ನು ಚಾಚು ತಪ್ಪದೇ ಮೋದಿ ಅವರು ಪಾಲಿಸುತ್ತಿದ್ದಾರೆ ಎಂದು ಬಣ್ಣಿಸಿದರು.
ರೈತರು ದೇಶದ ಬೆನ್ನೆಲುಬು ಎಂದು ಹಿಂದಿನ ಸರ್ಕಾರಗಳು ಹೇಳುತ್ತಲೇ ಬಂದಿದ್ದವು ವಿನಾ ಅದು ಅನುಷ್ಠಾನಕ್ಕೆ ಬಂದಿರಲಿಲ್ಲ. ಮೋದಿ ಸರ್ಕಾರ ರೈತರನ್ನು ಆರ್ಥಿಕವಾಗಿ ಬಲಪಡಿಸಲು ಕಿಸಾನ್ ಸಮ್ಮಾನ್ ಜಾರಿ ಮಾಡಿತು. ಕೇಂದ್ರದ ಆರು ಸಾವಿರ ರೂ. ಜತೆಗೆ ರಾಜ್ಯ ಸರ್ಕಾರ ನಾಲ್ಕು ಸೇರಿ ವಾರ್ಷಿಕ ಹತ್ತು ಸಾವಿರ ರೂ. ರೈತರ ಖಾತೆಗೆ ಜಮಾ ಮಾಡುತ್ತಿದ್ದೇವೆ. ಒಂದು ಎರಡು ಅಂತ ಅಲ್ಲ. ಮೋದಿ ಅವರ ಅನೇಕ ಯೋಜನೆಗಳು ಜನರನ್ನು ತಲುಪಿವೆ ಎಂದು ಹೇಳಿದರು.
ಲಾಕ್‌ಡೌನ್ ಸಂಕಷ್ಟ ನಿವಾರಣೆಗೆ ಕೇಂದ್ರ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನಲ್ಲಿ ಏನೂ ಇಲ್ಲ ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯ ಅವರದ್ದು ಮೊಸರಲ್ಲಿ ಕಲ್ಲು, ಬೆಣ್ಣೆಯಲ್ಲಿ ಕೂದಲು ಹುಡುಕುವ ಕೆಲಸ ಎಂದು ಲೇವಡಿ ಮಾಡಿದರು. ಈ ರೀತಿ ಮಾತನಾಡುವುದನ್ನು ಬಿಡಬೇಕು. ಒಳ್ಳೆಯದು ಮಾಡಿದಾಗ ಅದನ್ನು ಸ್ಮರಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಅವಧಿ ಮುಕ್ತಾಯವಾಗಿರುವ ಗ್ರಾಪಂಗಳಿಗೆ ಕರೊನಾ ನೆಪದಲ್ಲಿ ಚುನಾವಣೆ ನಡೆಸದೆ ಸರ್ಕಾರವೇ ತಮಗೆ ಬೇಕಾದವರನ್ನು ತಾತ್ಕಾಲಿಕವಾಗಿ ನೇಮಕ ಮಾಡುತ್ತದೆ ಎನ್ನುವ ಟೀಕೆಗಳಿಗೆ ಉತ್ತರಿಸಿದ ಡಿಸಿಎಂ, ಸದಸ್ಯರನ್ನು ನೇಮಕ ಮಾಡುತ್ತೇವೆ ಎಂದು ನಾವೆಲ್ಲಿ ಹೇಳಿದ್ದೇವೆ? ಈ ಕಾಂಗ್ರೆಸ್ಸಿಗರಿಗೆ ಮಾಡಲು ಬೇರೆ ಕೆಲಸ ಇಲ್ಲ. ಹೀಗಾಗಿ ಕೋರ್ಟ್‌ಗೆ ಹೋಗ್ತೇವಿ ಅಂತಿದ್ದಾರೆ. ಅವರು ಕೋರ್ಟ್‌ಗೆ ಹೋಗುವ ಅವಕಾಶವೇ ಇಲ್ಲ. ಸರ್ಕಾರ ನಿರ್ಣಯ ತೆಗೆದುಕೊಂಡ ಬಳಿಕ ಈ ಬಗ್ಗೆ ವಿಪಕ್ಷಗಳು ಪ್ರತಿಕ್ರಿಯಿಸಬೇಕು. ಕಾಂಗ್ರೆಸ್ಸಿಗರು ಹಗಲು ಕನಸು ಕಾಣುತ್ತ ಏನೇನೋ ಬಡಬಡಿಸಿದರೆ ನಾವೇನು ಮಾಡೋಕಾಗುತ್ತೆ ಎಂದು ಚುಚ್ಚಿದರು. ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ, ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕ ಪಿ.ಎಚ್.ಪೂಜಾರ ಸುದ್ದಿಗೋಷ್ಠಿಯಲ್ಲಿ ಇದ್ದರು.
ಮೌನಕ್ಕೆ ಜಾರಿ, ಬಳಿಕ ವಚನ ಹೇಳಿದ ಡಿಸಿಎಂ
ಶಾಸಕ ಉಮೇಶ ಕತ್ತಿ ಅವರ ಮನೆಯಲ್ಲಿ ಸಭೆ ಸೇರಿದ್ದ ಶಾಸಕರ ವಿಚಾರ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆ, ಜಿಲ್ಲೆಯ ಇಬ್ಬರು ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾದ ಯಾವುದೇ ಪ್ರಶ್ನೆಗಳಿಗೆ ಡಿಸಿಎಂ ಗೋವಿಂದ ಕಾರಜೋಳ ತುಟಿನಗೆ ಬೀರಿ ಮೌನಕ್ಕೆ ಜಾರಿದರು.
ಸಭೆಯ ಸುತ್ತವೇ ಮತ್ತೆ ಮತ್ತೆ ಪ್ರಶ್ನೆಗಳು ತೂರಿ ಬಂದರೂ ನಾನು ಕಾಂಟ್ರೊವರ್ಸಿ ಮನುಷ್ಯ ಅಲ್ಲ ಕೈಬಿಡಿ ಎಂದು ನಸುನಕ್ಕರು. ಭಕ್ತಿ ಇಲ್ಲದ ಬಡವ ನಾನಯ್ಯ… ಎನ್ನುವ ಬಸವಣ್ಣನ ವಚನವನ್ನು ಸೂಕ್ಷ್ಮವಾಗಿ ಹೇಳಿದ ಡಿಸಿಎಂ ಗೋವಿಂದ ಕಾರಜೋಳ, ಯಡಿಯೂರಪ್ಪ ಅವರ ಸರ್ಕಾರ ಸುಭದ್ರವಾಗಿರುತ್ತದೆ. ಬಿಎಸ್‌ವೈ ನಮ್ಮ ನಾಯಕರು, ಮುಂದಿನ ಮೂರು ವರ್ಷಗಳ ಕಾಲ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ವಿಶ್ವಾಸದಿಂದ ಹೇಳಿದರು.
ಸಾಂಸ್ಥಿಕ ಕ್ವಾರಂಟೈನ್ ತೆಗೆಯಲ್ಲ
ಹೊರ ರಾಜ್ಯದಿಂದ ಬಂದವರಿಗೆ ಈ ಮೊದಲಿದ್ದ 14 ದಿನಗಳ ಬದಲಿಗೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಕ್ವಾರಂಟೈನ್ ರದ್ದುಪಡಿಸಲಾಗುವುದು. ಅನೇಕ ಕೂಲಿ ಕಾರ್ಮಿಕರು 14 ದಿನಗಳು ಇದ್ದರೆ ತೊಂದರೆ ಆಗುತ್ತದೆ. ಈಗ ಕೃಷಿ ಚಟುವಟಿಕೆ ಆರಂಭವಾಗಿವೆ ಎನ್ನುವ ಮನವಿ ಹಿನ್ನೆಲೆಯಲ್ಲಿ ಏಳು ದಿನಗಳಿಗೆ ಇಳಿಸಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಗುಳೇ ಹೋಗುವವರ ಸಂಖ್ಯೆ ಕಡಿಮೆ ಇದೆ. ಕೆಲವರು ಹೋದರೂ ಹೆಚ್ಚಾಗಿ ಗೋವಾ, ಮಂಗಳೂರಗೆ ಹೋಗುತ್ತಾರೆ. ಮಹಾರಾಷ್ಟ್ರಕ್ಕೆ ಹೋಗುವವರು ಕಡಿಮೆ. ಹೀಗಾಗಿ ನಮ್ಮಲ್ಲಿ ಹೊರರಾಜ್ಯದಿಂದ ಬಂದವರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಲ್ಲ ಎಂದರು.
ಇದಕ್ಕೆ ಶಾಸಕ ವೀರಣ್ಣ ಚರಂತಿಮಠ ಸಹ ಧ್ವನಿಗೂಡಿಸಿ, ಮಹಾರಾಷ್ಟ್ರದಿಂದ ಬಂದವರು ಹೆಚ್ಚಾಗಿ ಸೊಲ್ಲಾಪುರ ಭಾಗದಿಂದ ಬಂದಿದ್ದಾರೆ. ಅಲ್ಲಿ ಸೋಂಕು ಅಷ್ಟೊಂದು ಇಲ್ಲ. ನಮ್ಮಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ ಇದ್ದವರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗಿ ಮನೆಗಳಿಗೆ ಹೋಗುತ್ತಿದ್ದಾರೆ ಎಂದರು.
ಬಾಗಲಕೋಟೆ ಜಿಲ್ಲೆಯಲ್ಲಿ ಗಂಟಲು ದ್ರವ ಪರೀಕ್ಷೆ ಕಡಿಮೆ ಮಾಡಿಲ್ಲ. ಮಾಡುತ್ತಲೇ ಇದ್ದಾರೆ. ಇನ್ನು ಕೆಲವರ ವರದಿ ಬರುವುದು ಬಾಕಿ ಇದೆ. ಕಾರ್ಮಿಕರಿಗೆ ಉದ್ಯೋಗದ ದೃಷ್ಟಿಯಿಂದ ಅವರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಇಲ್ಲ ಎನ್ನುವುದು ಖಾತ್ರಿ ಆದ ಬಳಿಕ ಏಳು ದಿನಗಳ ಸಾಂಸ್ಥಿಕ ಕ್ವಾರಂಟೈನ್ ಹಾಗೂ ಏಳು ದಿನ ಮನೆಯಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ.
-ಗೋವಿಂದ ಕಾರಜೋಳ ಉಪಮುಖ್ಯಮಂತ್ರಿಗಳು
StartFragment
EndFragment