ಗುರುಮಹಾಂತ ಶ್ರೀಗಳಿಗೆ ಸಂಯಮ ಪ್ರಶಸ್ತಿ ಪ್ರದಾನ

BKT 19-2
Published on

ಬಾಗಲಕೋಟೆ: ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯಿಂದ ಕೊಡಮಾಡುವ 2019-20ನೇ ಸಾಲಿನ ರಾಜ್ಯ ಸಂಯಮ ಪ್ರಶಸ್ತಿಯನ್ನು ಇಳಕಲ್ಲಿನ ವಿಜಯ ಮಹಾಂತೇಶ್ವರ ಮಹಾ ಸಂಸ್ಥಾನ ಮಠದ ಗುರು ಮಹಾಂತ ಸ್ವಾಮೀಜಿ ಅವರಿಗೆ ನೀಡಿ ಗೌರವಿಸಲಾಯಿತು.

ನಗರದ ಬಿವಿವಿ ಸಂಘದ ನೂತನ ಭವನದಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಅವರು ಶ್ರೀಗಳಿಗೆ ಪ್ರಶಸ್ತಿ ಫಲಕ ಹಾಗೂ 1 ಲಕ್ಷ ರೂ. ನಗದು ಪ್ರದಾನ ಮಾಡಿ ಸರ್ಕಾರದ ಪರವಾಗಿ ಸನ್ಮಾನಿಸಿದರು. ಬಸವತತ್ವವನ್ನು ಸಮರ್ಪಿಸಿಕೊಂಡು ನಡೆ, ನುಡಿ ಒಂದಾಗಿಸಿ, ದುಶ್ಚಟಗಳಿಂದ ಮುಕ್ತ ಸದೃಢ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವುದು ಗುರುಮಹಾಂತ ಶ್ರೀಗಳು ತಮಗೆ ದೊರೆತ 1 ಲಕ್ಷ ರೂ. ವನ್ನು ಇಳಕಲ್ಲಿನ ಆಯುರ್ವೇದ ಆಸ್ಪತ್ರೆಯಲ್ಲಿರುವ ವ್ಯಸನ ಮುಕ್ತ ಕೇಂದ್ರಕ್ಕೆ ನೀಡುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದರು.

ಕೋವಿಡ್ ಹಿನ್ನಲೆಯಲ್ಲಿ ಸರಳವಾಗಿ ಹಾಗೂ ಬಸವ ತತ್ವದಡಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿದ್ದು ಗಮನ ಸೆಳೆಯಿತು. ಬೆಳಗಾವಿ ಜಿಲ್ಲೆಯ ನಿಡಸೋಸಿ ಮಠದ ಜಗದ್ಗುರು ಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು.ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ಬಸಜ್ಞಾನ ಗುರುಕುಲದ ಶರಣ ಈಶ್ವರ ಮಂಟೂರ, ಶಿರೂರ ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ, ಗುಳೇದಗುಡ್ಡದ ಗುರುಬಸವ ದೇವರು, ಲಿಂಗಸೂರಿನ ಸಿದ್ದಲಿಂಗ ಸ್ವಾಮೀಜಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಹಣಮಂತ ಕೊಟಬಾಗಿ, ಕಾರ್ಯದರ್ಶಿ ಎಸ್. ಶಂಕ್ರಪ್ಪ ಸೇರಿದಂತೆ ಇತರರು ಇದ್ದರು.

ಮಠಗಳು ತಮ್ಮ ಜೋಳಿಗೆಗಳಿಗೆ ಅನೇಕ ದಾನಗಳನ್ನು ಕೇಳುತ್ತವೆ. ಆದರೇ ದುಶ್ಚಟಗಳನ್ನು ಜೋಳಿಗೆ ಒಳಗ ಹಾಕರೀ ಅಂತ ಕೇಳಿದ ಏಕೈಕ ಮಠವಿದ್ದರೇ ಇಳಕಲ್ಲ ಮಹಾಂತ ಮಠ. 12 ನೇ ಶತಮಾನದಿಂದಲೇ ಶರಣರು ವ್ಯಸನ ಮುಕ್ತ ಉತ್ತಮ ಹಾಗೂ ಸಮ ಸಮಾಜ ನಿರ್ಮಾಣಕ್ಕೆ ಹೋರಾಟ ಆರಂಭಿಸಿದರು. 9 ಶತಮಾನವಾದರು ಗುರಿ ಮುಟ್ಟಲು ಸಾಧ್ಯವಾಗಿಲ್ಲ. ದುಶ್ಚಟಗಳಿಗೆ ಜನ ದಾಸರಾಗುತ್ತಲೆ ಸಾಗಿದ್ದಾರೆ. ಈ ಹೋರಾಟದ ತೇರು ನಿರಂತರವಾಗಿ ಸಾಗಬೇಕು. ನಾನು ಕಳೆದ 25 ವರ್ಷಗಳ ರಾಜಕೀಯದಲ್ಲಿ ಬಾರ್, ಬ್ರಾಂಡಿ ಮಳಿಗೆ ಸ್ಥಾಪಿಸಲು ಪತ್ರ ನೀಡಿಲ್ಲ. ಮುಂದೆಯು ನೀಡುವದಿಲ್ಲ.
- ಗೋವಿಂದ ಕಾರಜೋಳ, ಡಿಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net