ಯತ್ನಾಳರನ್ನು ಶಾಸಕ ಸ್ಥಾನದಿಂದ ಉಚ್ಚಾಟಿಸಿ

BKT-21-6
Published on

ಬಾಗಲಕೋಟೆ: ಕನ್ನಡ ಭಾಷೆ, ಕನ್ನಡಪರ ಹೋರಾಟಗಾರರಿಗೆ ಅವಮಾನ ಮಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಶಾಸಕ ಸ್ಥಾನ ಹಾಗೂ ಬಿಜೆಪಿಯಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿ ಕರವೇ ಕಾರ್ಯಕರ್ತರು ನಗರದ ಜಿಲ್ಲಾಡಳಿತ ಭವನ ಮುಖ್ಯದ್ವಾರದ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರು, ಶಾಸಕ ಬಸನಗೌಡ ಪಾಟೀಲ ಯತ್ನಾಳರ ಪ್ರತಿಕೃತಿ ಮೆರವಣಿಗೆ ನಡೆಸಿ ದಹಿಸುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಡಳಿತ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಅಧ್ಯಕ್ಷ ರಮೇಶ ಬದ್ನೂರ ಮಾತನಾಡಿ, ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಡಿ.5 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದವು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿರುವ ಶಾಸಕ ಬಸನಗೌಡ ಪಾಟೀಲ ಅವರು ನಾವು ಮೊದಲು ಹಿಂದುಗಳು. ಆಮೇಲೆ ಕನ್ನಡಿಗರು. ಕನ್ನಡಪರ ಹೋರಾಟಗಾರರು ನಕಲಿ ಹೋರಾಟಗಾರರು. ರೋಲ್‌ಕಾಲ್ ಗಿರಾಕಿಗಳು ಎಂದು ಮಾಧ್ಯಮಗಳ ಎದುರು ಕನ್ನಡ ಭಾಷೆ, ಹೋರಾಟಗಾರರಿಗೆ ಅಪಮಾನ ಮಾಡಿದ್ದಾರೆ. ಇದರಿಂದ ಎಂಇಎಸ್ ಪುಂಡ, ಮಹಾರಾಷ್ಟ್ರದ ಏಜೆಂಟ್ ಎಂಬುದು ಸಾಬೀತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಬಸನಗೌಡ ಪಾಟೀಲ ಮಂತ್ರಿಗಿರಿ ಆಸೆಗಾಗಿ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ಹಾಗೂ ಸರ್ಕಾರ ಕನ್ನಡ ವಿರೋಧಿಯೇ? ನಿಮ್ಮ ಪಕ್ಷದ ಶಾಸಕರು ಕನ್ನಡ ವಿರೋಧಿ ಹೇಳಿಕೆ ನೀಡಿದರು ಯಾವುದೇ ಕ್ರಮ ಯಾಕೆ ತೆಗೆದುಕೊಂಡಿಲ್ಲ. ಕೂಡಲೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಶಾಸಕ ಸ್ಥಾನ ಹಾಗೂ ಪಕ್ಷದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಭಾಗ್ಯ ಬೆಟಗೇರಿ, ಬಸವರಾಜ ಧರ್ಮಂತಿ, ಮಲ್ಲು ಕಟ್ಟಿಮನಿ, ರವಿ ಶಿಂಧೆ, ಬಸವರಾಜ ಅಂಬಿಗೇರ, ವಿನೂತ ಮೇಲಿನಮನಿ, ಮಂಜು ಪವಾರ, ಸಂಗಮೇಶ ಅಂಬಿಗೇರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net