

ಬಾಗಲಕೋಟೆ: ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿ ಹಾಗೂ ಅಂಕಲಗಿ ಗ್ರಾಮದ ದೇವದಾಸಿ ಮಹಿಳೆಯರ ಕಾಲೋನಿಗಳಿಗೆ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶಶಿಕಲಾ ಟೆಂಗಳಿ ಮಂಗಳವಾರ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು.
ಕಲಾದಗಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿರುವ ಬನಮ್ಮದೇವಿ ಸಭಾಭವನದಲ್ಲಿ ಮಹಿಳಾ ನಿಗಮದಿಂದ ಚೇತನ, ಉದ್ಯೋಗಿನಿ ಯೋಜನೆಯಡಿ ಸೌಲಭ್ಯ ಪಡೆದು ಸ್ವಂತ ಉದ್ಯೋಗ ಕೈಗೊಂಡು ಸ್ವಾಲಂಬನೆ ಜೀವನ ನಡೆಸುತ್ತಿರುವ ಬಗ್ಗೆ ಲಾನುಭವಿಗಳಿಂದ ಮಾಹಿತಿ ಪಡೆದುಕೊಂಡರು.
ಈ ವೇಳೆ ನಿಗಮದಿಂದ ಸಹಾಯಧನ ಪಡೆದು ಹಣ್ಣಿನ ವ್ಯಾಪಾರ, ಕಿರಾಣಿ ವ್ಯಾಪಾರ, ತಂತಿ ಬಲೆ ಹೆಣೆಯುವ ಸ್ವಯಂ ಉದ್ಯೋಗ ಮಾಡುತ್ತಿರುವುದಾಗಿ ಫಲಾನುಭವಿಗಳು ತಿಳಿಸಿದರು. ಅಲ್ಲದೆ ನಿಗಮದಿಂದ ದೊರೆಯುವ 20 ಸಾವಿರ ಸಹಾಯಧನ ಸಾಕಾಗುತ್ತಿಲ್ಲ. ಇನ್ನು ಹೆಚ್ಚಿನ ಸಹಾಯಧನ ನೀಡಿದಲ್ಲಿ ಹೆಚ್ಚಿನ ಸಂಪಾದನೆ ಮಾಡಲು -ಮಕ್ಕಳಿಗೆ ಶಿಕ್ಷಣ ಕಲಿಸಲು ಅನುಕೂಲವಾಗುತ್ತದೆ. ನಮಗೆ ಸ್ವಂತ ನಿವೇಶನ, ಮನೆ ಇಲ್ಲ. ಜಮೀನು ಇಲ್ಲವೆ ಎಂದು ಸಮಸ್ಯೆಗಳ ಸರಮಾಲೆಯನ್ನು ಬಿಚ್ಚಿಟ್ಟರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಪಂ ಸಿಇಒ ಗಂಗೂಬಾಯಿ ಮಾನಕರ ಕಲಾದಗಿ ಗ್ರಾಮವು ಮುಳಗಡೆ ಪ್ರದೇಶವಾಗಿದೆ. ಗ್ರಾಮಕ್ಕೆ ಸಮೀಪವಿರುವ ಜಮೀನು ಇದ್ದರೇ ತಿಳಿಸಿದಲ್ಲಿ ಸರ್ಕಾರದಿಂದ ಖರೀದಿಸಿ ಮನೆಗಳನ್ನು ನಿರ್ಮಿಸಲಾಗುವುದು ಎಂದರು.
ನಂತರ ಅಂಕಲಗಿ ಗ್ರಾಮದ ದೇವದಾಸಿ ಮಹಿಳೆಯರ ಕಾಲೋನಿಗೆ ಭೇಟಿ ನೀಡಿ ದೇವದಾಸಿ ಮಹಿಳೆಯರ ಸಮಸ್ಯೆ ಆಲಿಸಿದ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟಂಗಳಿ ಅವರು ಮಾತನಾಡಿ, ದೇವದಾಸಿ ಮಹಿಳೆಯರಿಗೆ ನೀಡುವ ಮಾಶಾಸನ ಹೆಚ್ಚಳ ಕುರಿತಂತೆ ಈಗಾಗಲೇ ಚರ್ಚೆ ನಡೆಸಲಾಗಿದೆ. ನಿಮ್ಮ ಸಮಸ್ಯೆಗಳನ್ನು ಆಲಿಸುವ ಉದ್ದೇಶದಿಂದ ಸಲುವಾಗಿ ಸ್ವತಃ ನಿಮ್ಮನ್ನು ಭೇಟಿ ಮಾಡಲು ಬಂದಿದ್ದೇವೆ ಎಂದರು.
ಭೇಟಿ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ, ದೇವದಾಸಿ ಪುನರ್ ವಸತಿ ನಿಗಮದ ಅಧಿಕಾರಿ ಕೆ.ಕೆ.ದೇಸಾಯಿ, ಕಲಾದಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದ್ರಾಕ್ಷಾಯಿಣಿ ಹಿರೇಮಠ, ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ದ್ರಾಕ್ಷಾಯಿಣಿ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.
ದೇವದಾಸಿ ಮಹಿಳೆಯರು ಎಮ್ಮೆ ಸಾಗಾಣಿಕೆ, ಕೋಳಿ ಸಾಗಾಣಿಕೆಗೆ ದೊಡ್ಡಿಗಳನ್ನು ನಿರ್ಮಿಸಲು ಜಾಗ ತೋರಿಸಿದರೆ ಸಾಕು ನರೇಗಾ ಯೋಜನೆಯಡಿ ನಿರ್ಮಿಸಿಕೊಡಲಾಗುತ್ತದೆ. ಜಮೀನು ಇಲ್ಲದವರಿಗೆ ಭೂ ಒಡೆತನ ಯೋಜನೆಯಡಿ 15 ಲಕ್ಷ ರೂ.ಗಳಲ್ಲಿ ಜಮೀನು ಖರೀದಿ ಮಾಡಿಕೊಡಲಾಗುವುದು. 15 ಲಕ್ಷದಲ್ಲಿ 7.50 ಲಕ್ಷ ರೂ. ಸರಕಾರ ನೀಡಿದರೆ, ಉಳಿದ 7.50 ಲಕ್ಷ ರೂ.ಗಳನ್ನು ಬ್ಯಾಂಕ್ ಲೋನ್ ಮೂಲಕ ಕೊಡಿಸಲಾಗುವುದು.
- ಗಂಗೂಬಾಯಿ ಮಾನಕರ ಜಿಪಂ ಸಿಇಒ