ಜೆಡಿಎಸ್‌ಗೆ ಸಾಮೂಹಿಕ ರಾಜೀನಾಮೆ ಘೋಷಣೆ

JDS 28
Published on

ಬಾಗಲಕೋಟೆ: ಜಿಲ್ಲೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಜೆಡಿಎಸ್‌ನಲ್ಲಿ ಅಸಮಾಧಾನದ ಹೊಗೆ ಸ್ಫೋಟಗೊಂಡಿದ್ದು, ಪಕ್ಷದ ವಿವಿಧ ಮುಂಚೂಣಿ ಘಟಕದ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ರವಿ ಹುಣಶ್ಯಾಳ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಭುವನೇಶ್ವರ ಹಾದಿಮನಿ, ರೈತ ಘಟಕದ ಜಿಲ್ಲಾಧ್ಯಕ್ಷ ಶಂಕರಪ್ಪ ಜೀರಗಾಳ ಸೇರಿ ಇತರರು ರಾಜೀನಾಮೆ ಕುರಿತು ಸ್ಪಷ್ಟಪಡಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ ಹಾಗೂ ವರಿಷ್ಠರಾದ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಯ ಬಗ್ಗೆ ನಿರ್ಲಕ್ಷೃ ಧೋರಣೆ ಅನುಸರಿಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಪಕ್ಷದ ಸದಸ್ಯತ್ವ, ಪದಾಧಿಕಾರಿಗಳ ಹುದ್ದೆಗೆ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ರವಿ ಹುಣಶ್ಯಾಳ ಮಾತನಾಡಿ, ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ನಾನು ಅಲ್ಲಿನ ಕೆಲವು ವ್ಯವಸ್ಥೆ ಬೇಸತ್ತು ಹೊರ ಬಂದು ಜೆಡಿಎಸ್ ಪಕ್ಷ ಸೇರ್ಪಡೆಯಾದೆ. ನಂತರ ಜಿಲ್ಲಾಧ್ಯಕ್ಷನಾಗಿ 5 ವರ್ಷ ಜಿಲ್ಲೆಯಲ್ಲಿ ಪಕ್ಷ ಕಟ್ಟಿ ಬೆಳೆಸಿದೆ. ವರಿಷ್ಠರ ನಿರ್ಧಾರಕ್ಕೆ ತಲೆ ಬಾಗಿ ಎರಡು ಸಾರಿ ಲೋಕಸಭೆಗೆ ಸ್ಪರ್ಧೆ ಮಾಡಿದೆ. ಸದ್ಯದ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಪ್ರೊ.ಬಸವರಾಜ ಕೊಣ್ಣೂರ, ಎಸ್.ಆರ್.ನವಲಿಹಿರೇಮಠ ಸೇರಿ ಅನೇಕ ನಾಯಕರನ್ನು ಕರೆ ತಂದೆ. ಇದರಿಂದ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಅತಿ ಹೆಚ್ಚು ಮತ ಪಡೆದುಕೊಂಡಿದೆ. ಆದರೆ, ರಾಜ್ಯ ನಾಯಕರು ಬಾಗಲಕೋಟೆ ಸೇರಿ ಉತ್ತರ ಕರ್ನಾಟಕ ಬಗ್ಗೆ ನಿರ್ಲಕ್ಷೃ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೀಳಗಿ ತಾಲೂಕು ಅಧ್ಯಕ್ಷ ರಾಮನಗೌಡ ಜಕ್ಕನಗೌಡರ ಮಾತನಾಡಿ, ಈಚೆಗಿನ ಕೆಲವೊಂದು ಬೆಳವಣಿಗೆಗಳು ತೀವ್ರ ಬೇಸರ ತರಿಸಿವೆ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇವೆ ಎಂದರು.

ಜಿಲ್ಲಾ ಉಪಾಧ್ಯಕ್ಷರಾದ ಎ.ಆರ್.ಬಸನಾಳ, ಗುರುನಾಥ ಸಂಘರಡ್ಡಿ, ಮುಧೋಳ ತಾಲೂಕು ಅಧ್ಯಕ್ಷ ಶಂಕರ ನಾಯಕ, ಮುಖಂಡರಾದ ಮಲ್ಲು ಹೊಸಕೋಟಿ, ಪ್ರಭಾಕರ ಶೆಟ್ಟರ, ಶಂಕರ ಹಲಗಲಿ ಇತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net