ಇಂದು ಅಭ್ಯರ್ಥಿಗಳ ಹಣೆಬರಹ ನಿರ್ಧಾರ

09122020 Bellary Voters
Published on

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ಉಪವಿಭಾಗ ವ್ಯಾಪ್ತಿಯ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಡಿ.22 ರಂದು ನಡೆಯಲಿದ್ದು, ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. 89 ಗ್ರಾಮ ಪಂಚಾಯಿತಿಗಳ 1397 ಸ್ಥಾನಗಳಿಗೆ ಸ್ಪರ್ಧೆ ಮಾಡಿರುವ 3382 ಅಭ್ಯರ್ಥಿಗಳ ಹಣೆಬರಹವನ್ನು ಅಂದಾಜು 4 ಲಕ್ಷ 80 ಸಾವಿರ ಮತದಾರರು ನಿರ್ಧರಿಸಲಿದ್ದಾರೆ.

ಒಟ್ಟು 652 ಮತಗಟ್ಟೆಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಇದರಲ್ಲಿ 162 ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಬ್ಯಾಲೇಟ್ ಪೇಪರ್‌ನಲ್ಲಿ ಇಚ್ಛಿತ ಅಭ್ಯರ್ಥಿಯ ಮುಂದೆ ಇರುವ ಚಿಹ್ನೆಯ ಮೇಲೆ ರೈಟ್ ಮಾರ್ಕ್ ಹಾಕುವ ಮೂಲಕ ಮತದಾನ ನಡೆಯಲಿದೆ. ಚುನಾವಣೆಗೆ 720 ಮತಗಟ್ಟೆ ಅಧಿಕಾರಿ, 720 ಸಹಾಯಕ ಮತಗಟ್ಟೆ ಅಧಿಕಾರಿ, 1440 ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟು 3 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.

ಮತದಾನದ ಹಿನ್ನೆಲೆ ಸೋಮವಾರ ಬೆಳಗ್ಗೆ ಜಿಲ್ಲೆಯ 4 ತಾಲೂಕು ಕೇಂದ್ರಗಳ ಮಸ್ಟರಿಂಗ್ ಕೇಂದ್ರದಲ್ಲಿ ಚುನಾವಣೆ ಕರ್ತವ್ಯಕ್ಕೆ ನೇಮಕವಾಗಿದ್ದ ಸಿಬ್ಬಂದಿ ಮತದಾನದ ಸಲಕರಣೆಗಳನ್ನು ಪಡೆದು ನಿಗದಿತ ಮತಗಟ್ಟೆಗಳಿಗೆ ತೆರಳಿದರು. ಸಿಬ್ಬಂದಿಗೆ ಕುಡಿವ ನೀರಿನ ಕ್ಯಾನ್ ನೀಡಲಾಯಿತು. ಕೇಂದ್ರಗಳಲ್ಲಿ ಊಟ- ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಚುನಾವಣೆ ಸಿಬ್ಬಂದಿಗೆ ಮತಗಟ್ಟೆಗೆ ತೆರಳಲು 71 ಬಸ್, 51 ಮಿನಿ ಬಸ್, ಕ್ರೂಸರ್ ಸೇರಿ ಒಟ್ಟು 122 ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.

ಮತದಾನದ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಭದ್ರತೆ ಸಲುವಾಗಿ 1050 ಪೊಲೀಸ್ ಸಿಬ್ಬಂದಿ 24 ಪಿಎಸ್‌ಐ, 13 ಸಿಪಿಐ, ಮತ್ತು 400 ಕ್ಕೂ ಹೆಚ್ಚು ಹೋಮ್‌ಗಾರ್ಡ್ಸ್‌ಗಳನ್ನು ನೇಮಿಸಲಾಗಿದೆ. ಪ್ರತಿ ಮತಗಟ್ಟೆಗೆ ಒಬ್ಬ ಪಿಸಿ ಅಥವಾ ಹೋಮಗಾಡ್ಸ್‌ಸ್, ಸೂಕ್ಷ್ಮ ಮತಗಟ್ಟೆಗಳಿಗೆ ಒಬ್ಬ ಪಿಸಿ ಮತ್ತು ಒಬ್ಬ ಹೋಮ್ ಗಾಡ್ಸ್ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಒಬ್ಬ ಎಚ್‌ಸಿ ಒಬ್ಬ ಪಿಸಿಯನ್ನು ನಿಯೋಜಿಸಲಾಗಿದೆ.

ಜಮಖಂಡಿ ತಾಲೂಕಿಗೆ ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಕುಲ್ಲೋಳ್ಳಿ, ರಬಕವಿ-ಬನಹಟ್ಟಿ ತಾಲೂಕಿಗೆ ಪಿಯು ಉಪ ನಿರ್ದೇಶಕ ಶಶಿಧರ ಪೂಜಾರಿ, ಮುಧೋಳ ತಾಲೂಕಿಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ಜಮಖಂಡಿ ವಿಶೇಷ ಭೂ ಸ್ವಾಧೀನ ಅಧಿಕಾರಿ ಪ್ರಶಾಂತ ಹನಗಂಡಿ, ಬೀಳಗಿ ತಾಲೂಕಿಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ಮಲ್ಲಿಕಾರ್ಜುನ ಸಂಗ ಅವರನ್ನು ಚುನಾವಣೆ ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net