ತೋಟಗಾರಿಕೆ ಕ್ಷೇತ್ರೋತ್ಸವಕ್ಕೆ ಕಾರಜೋಳ ಚಾಲನೆ

BKT NEWS 13-1
Published on

ಬಾಗಲಕೋಟೆ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡ ತೋಟಗಾರಿಕಾ ಬೆಳೆಗಳ ಕ್ಷೇತ್ರೋತ್ಸವಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸೋಮವಾರ ಚಾಲನೆ ನೀಡಿದರು.

ವಾರ್ಷಿಕ ಮತ್ತು ಬಹು ವಾರ್ಷಿಕ ಪುಷ್ಪಗಳ ಪ್ರಾತ್ಯಕ್ಷಿಕೆ, ತರಕಾರಿ ಬೆಳೆಗಳ ಕ್ಷೇತ್ರ ಪ್ರಾತ್ಯಕ್ಷಿಕೆ, ತೋಟಗಾರಿಕೆ ಜೈವಿಕ ತಂತ್ರಜ್ಞಾನ ಕೇಂದ್ರ, ತೋಟಗಾರಿಕೆ ಆಧಾರಿತ ಸಮಗ್ರ ಕೃಷಿ ಪದ್ದತಿ ಮಾದರಿ ತಾಕು, ಮಾವಿನ ತಳಿ ಮತ್ತು ಸಂಸ್ಕರಣ ತಳಿ, ಹಣ್ಣಿನ ಬೆಳೆಗಳ ತಾಯಿಗಿಡಗಳ ತಾಕು, ಸೀತಾಲ ಹಣ್ಣಿನ ತಳಿಗಳು ಮತ್ತು ಸಂಕರಣ ತಳಿಗಳ ಪ್ರಾತ್ಯಕ್ಷಿಕೆ, ದ್ರಾಕ್ಷಿ ಬೆಳೆಗಳ ಅಧ್ಯಯನ, ಗುಣಮಟ್ಟದ ಬೀಜ ಸಂಸ್ಕರಣಾ ಮತ್ತು ಪರೀಕ್ಷಾ ಕೇಂದ್ರ, ಜೈವಿಕ ರೋಗಾಣು ನಿಯಂತ್ರಕ ಉತ್ಪಾದನಾ ಘಟಕ ಹಾಗೂ ತೋಟಗಾರಿಕೆ ಬೆಳೆ ಆಧಾರಿತ ಸಮಗ್ರ ಕೃಷಿ ಪದ್ದತಿಗಳ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿದರು.

ಇನ್ನು ಒಳಾಂಗಣ ಪ್ರದರ್ಶನದಲ್ಲಿ ವಿದೇಶಿ ಹಾಗೂ ಸೀತ ವಲಯದ ಹಣ್ಣುಗಳು, ಸಿರಿಲಗಳು, ವಾಣಿಜ್ಯ ಹಾಗೂ ಖುಷ್ಕಿ ಬೇಸಾಯದ ಹಣ್ಣುಗಳು, ಆಲೂಗಡ್ಡೆ, ಪುಷ್ಪ ಮತ್ತು ಉದ್ಯಾನ ವಿನ್ಯಾಸ, ಗೆಡ್ಡೆ ಗೆಣಸು, ಹಣ್ಣು ಮತ್ತು ತರಕಾರಿಗಳ ಮೌಲ್ಯವರ್ಧನೆ, ತೋಟಪಟ್ಟಿ, ಸಾಂಬಾರು, ಔಷಧಿ ಮತ್ತು ಸುಗಂಧಿ ಬೆಳೆಗಳು, ವಿವಿಧ ತಳಿಗಳ ದ್ರಾಕ್ಷಾರಸ, ಹಣ್ಣು ಮತ್ತು ತರಕಾರಿಗಳಿಂದ ಅರಳಿಸಿದ್ದ ಕಲಾಕೃತಿಗಳನ್ನು ವೀಕ್ಷಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನಮಗೌಡ ಬೆಳಗುರ್ಕಿ ಮಾತನಾಡಿ, ರೈತ ಅನೇಕ ಸಂಕಷ್ಟಗಳಿಗೆ ಒಳಗಾಗುತ್ತಿದ್ದಾನೆ. ಜಮೀನಿನಲ್ಲಿ ಉತ್ತಮ ಬೆಳೆ ಬೆಳೆದರು ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಹಿತಿ ಕೊರತೆಯಿಂದ ಉತ್ತಮ ಬೆಲೆ ಪಡೆಯಲು ಸಾಧ್ಯವಾಗತ್ತಿಲ್ಲ. ಪಾಕೃತಿಕ ವಿಕೋಪಗಳಿಗೆ ನಲುಗುತ್ತಿದ್ದಾರೆ. ಇಂತಹ ಅನೇಕ ಪರಿಸ್ಥಿತಿಗಳ ಅವಲೋಕನ ಮಾಡುವುದು ಅಗತ್ಯವಾಗಿದೆ ಎಂದರು.

ಹಿಂದಿನ ಕಾಲದಲ್ಲಿ ದುಡ್ಡು ಕೊಟ್ಟರು ಆಹಾರ ಪದಾರ್ಥಗಳು ಸಿಗುತ್ತಿರಲಿಲ್ಲ. ಇಂದು ರೈತರ ಹಾಗೂ ಸಂಶೋಧಕರ ಪರಿಶ್ರಮದಿಂದ ದೇಶದಲ್ಲಿ 285 ದಶಲಕ್ಷ ಟನ್ ಆಹಾರ ಪದಾರ್ಥ, 300 ದಶ ಲಕ್ಷ ಟನ್ ಕಾಯಿಪಲ್ಲೆ, 300 ಕೋಟಿ ಲೀಟರ್ ಹಾಲು ಉತ್ಪಾದಿಸಲಾಗುತ್ತಿರುವುದರಿಂದ ಆಹಾರ ಕೊರತೆ ಇಲ್ಲ. ಹಿಂದೆ ಹೊರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ರಪ್ತು ಪ್ರಮಾಣದಲ್ಲಿ ದೇಶ ಉನ್ನತ ಸಾಧನೆ ಮಾಡುತ್ತಿದೆ ಎಂದರು.

ಮೊದಲು ಕೃಷಿ ಉತ್ಪನ್ನಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿತ್ತು. ಆದರೆ ಈಗ ಆದಾಯಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಈ ದೇಶದಲ್ಲಿ ಮೌಲ್ಯವರ್ಧನ ಕಾರ್ಯಕ್ರಮಗಳನ್ನು ರೂಪಿಸುವುದು ಅಗತ್ಯವಾಗಿದೆ. ಕೃಷಿಕರ ಆದಾಯ ದ್ವಿಗುಣಗೊಳಿಸಿ ಉತ್ಪಾದನೆ ವೆಚ್ಚವನ್ನು ಕಡಿಮೆ ಮಾಡಿ ಉತ್ಪಾದಕತೆಯನ್ನು ಹೆಚ್ಚಿಸಲು ಮಹತ್ವದ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ತೋವಿವಿ ಕುಲಪತಿ ಕೆ.ಎಂ.ಇಂದಿರೇಶ ಮಾತಾನಾಡಿ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ 23 ಜಿಲ್ಲೆಗಳಲ್ಲಿ ತಮ್ಮ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಗೆ 15 ಕೋಟಿ ರೂ.ಗಳ ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಬಿಟಿಡಿಎದಿಂದ ಕುಡಿಯುವ ನೀರಿನ ವ್ಯವಸ್ಥೆ, ವಿಶ್ವವಿದ್ಯಾಲಯದಿಂದ 10 ಕಿ.ಮೀ ಅಂತರದಲ್ಲಿ 62 ಎಕರೆ ಜಮೀನು ಮಂಜೂರು ಮಾಡುವ ಬಗ್ಗೆ ಹಾಗೂ ಮುಂದಿನ ಬಜೆಟ್‌ನಲ್ಲಿ ತೋವಿವಿಗೆ ಹೆಚ್ಚಿನ ಅನುದಾನ ನೀಡುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದರು.

ಸಂಸದ ಪಿ.ಸಿ.ಗದ್ದಿಗೌಡರ ಜ್ಯೋತಿ ಬೆಳೆಗಿಸಿದರು. ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಅವರು ವಿವಿಧ ಪ್ರಕಟಣೆಗಳನ್ನು ಬಿಡುಗಡೆ ಮಾಡಿದರು. ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕಾ ಪಂಚಾಯಿತಿ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಂ.ದೇಸಾಯಿ, ತೋವಿವಿಯ ವ್ಯಸ್ಥಾಪಕ ಮಂಡಳಿಯ ಸದಸ್ಯರಾದ ಆರ್.ಎಂ.ನಾಗೇಶ, ಎಸ್.ಎನ್.ಮಂಜುನಾಥಗೌಡ, ಶಂಕ್ರಪ್ಪ ಮಳಲಿ ಇತರರು ಉಪಸ್ಥಿತರಿದ್ದರು.

ಖುರ್ಚಿಗಳು ಖಾಲಿ ಖಾಲಿ !
ಪ್ರಚಾರದ ಕೊರತೆಯೂ, ರೈತರ ಇಚ್ಛಾಶಕ್ತಿಯ ಕೊರತೆಯೋ ಕ್ಷೇತ್ರೋತ್ಸವಕ್ಕೆ ನೀರಿಕ್ಷಿತ ಪ್ರಮಾಣದಲ್ಲಿ ರೈತರು ಆಗಮಿಸಲಿಲ್ಲ. ವೇದಿಕೆ ಕಾರ್ಯಕ್ರಮದ ಖುರ್ಚಿಗಳು ಖಾಲಿ ಖಾಲಿಯಾಗಿದ್ದವು. ಕೇವಲ ತೋವಿವಿ ವಿಜ್ಞಾನಿಗಳು, ವಿದ್ಯಾರ್ಥಿಗಳು ಮಾತ್ರ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net