

ಬಾಗಲಕೋಟೆ: ಐತಿಹಾಸಿಕ ಕೋಟೆನಗರಿ ಹೋಳಿ ಹಬ್ಬ ಉಳಿಸಿ-ಬೆಳೆಸುವ ಜವಾಬ್ದಾರಿ ಯುವಕರ ಮೇಲಿದೆ. ಸೌಹಾರ್ದದಿಂದ ಎಲ್ಲರೂ ಬಣ್ಣದಾಟ ಆಡಿ ದ್ವೇಷ ಮರೆಯಬೇಕು ಎಂದು ಡಾ.ಪ್ರಮೋದ ಮಿರ್ಜಿ ಹೇಳಿದರು.
ನಗರದ ವಲ್ಲಭಭಾಯಿ ವೃತ್ತದಲ್ಲಿ ಭಾನುವಾರ ರಾತ್ರಿ ಹೋಳಿ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ಬಾಗಲಕೋಟೆ ಹೋಳಿ ಹಬ್ಬ-2020 ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಾಗಲಕೋಟೆ ಹೋಳಿ ದೇಶದಲ್ಲಿಯೇ ವಿಶಿಷ್ಟ ಸ್ಥಾನ ಪಡೆದಿದೆ. ಇಟಲಿಯ ಟೊಮ್ಯಾಟೊ ಫೆಸ್ಟಿವಲ್ ವಿಶ್ವವ್ಯಾಪಿ ಪ್ರಚಾರಗೊಳಿಸಲಾಗಿದೆ. ಅದೇ ಮಾದರಿಯಲ್ಲಿ ಬಾಗಲಕೋಟೆ ಹೋಳಿ ಉತ್ಸವವನ್ನು ಹೊಸ ಸ್ಪರ್ಶದೊಂದಿಗೆ ಪ್ರವಾಸೋದ್ಯಮಕ್ಕೆ ಪೂರಕವಾಗಿ ಬೆಳೆಸಬೇಕಿದೆ. ದೇಶ, ವಿದೇಶಿ ಪ್ರವಾಸಿಗರನ್ನು ಆಕರ್ಷಿಸಬೇಕಿದೆ. ಜಾತಿ ಭೇದವಿಲ್ಲದೆ ಎಲ್ಲರೂ ಒಂದಾಗಿ ಆಚರಿಸುವ ಇಲ್ಲಿನ ಬಣ್ಣದಾಟದ ಖುಷಿ ಬೇರೆ ಎಲ್ಲಿಯೂ ಸಿಗುವುದಿಲ್ಲ. ಆರೋಗ್ಯಕರ ಬಣ್ಣ ಬಳಸಿ ಸಂಭ್ರಮ ಇನ್ನಷ್ಟು ಇಮ್ಮಡಿಗೊಳಿಸಬೇಕು. ಕಾಮದಹನ ಮೂಲಕ ಕೆಟ್ಟ ವಿಚಾರ ಸುಟ್ಟುಬಿಡಿ ಎಂದರು.
ಸಾಮಾಜಿಕ ಕಾರ್ಯಕರ್ತ ನಾರಾಯಣ ದೇಸಾಯಿ ಉಪನ್ಯಾಸ ನೀಡಿ, ಬಾಗಲಕೋಟೆ ಹೋಳಿಗೆ ಭವ್ಯ ಇತಿಹಾಸವಿದೆ. ನವಾಬರು, ಪೇಶ್ವೆಗಳು ಇದಕ್ಕೆ ಮಾರು ಹೋಗಿದ್ದರು. ಹಬ್ಬದ ಮೂಲಕ ಅಸ್ಪಶ್ಯತೆ ವಿರುದ್ಧ ನೀಡಿರುವ ಸಂದೇಶ ಮಾದರಿಯಾಗಿದೆ. ನಿಶಾನೆ, ಶಹನಾಯಿಯೊಂದಿಗೆ ನುಡಿಸುವ ಹಲಗೆ ನಾದ ಪುಳಕಿತಗೊಳಿಸುತ್ತದೆ. ಚಿಕ್ಕವರಿಂದ ದೊಡ್ಡವರು ಹೆಜ್ಜೆ ಹಾಕಿ ಸಂಭ್ರಮಿಸುತ್ತಾರೆ. ನಿಜಕ್ಕೂ ಇಂತಹ ಹೋಳಿಗೆ ಹೊಸ ಸ್ಪರ್ಶ ನೀಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು. ಸ್ಥಳೀಯ ಜನಪ್ರತಿನಿಧಿಗಳು ವಿಶೇಷ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎ.ಎಸ್.ಪಾವಟೆ, ಬಸವೇಶ್ವರ ಬ್ಯಾಂಕ್ ಮಾಜಿ ನಿರ್ದೇಶಕ ಎನ್.ಆರ್.ಕುಲಕರ್ಣಿ, ಆಚರಣಾ ಸಮಿತಿ ಅಧ್ಯಕ್ಷ ಕಳಕಪ್ಪ ಬಾದೋಡಗಿ, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಗುಡಗುಂಟಿ ಸೇರಿ ಇತರರು ಇದ್ದರು. ಸಂಜೀವ ವಾಡಕರ ನಿರೂಪಿಸದರು. ರಾಜು ನಾಯಕ ವಂದಿಸಿದರು.
ಸಮಾರಂಭದ ನಂತರ ಕಿಲ್ಲಾ, ಹೊಸಪೇಟೆ, ಹಳಪೇಟೆ, ಜೈನಪೇಟೆ, ವೆಂಕಟಪೇಟೆ ಓಣಿಯ ಚಿಣ್ಣರು ಶಿಸ್ತುಬದ್ಧವಾಗಿ ಹಲಗೆ ನುಡಿಸಿ ಗಮನ ಸೆಳೆದರು. 80ನೇ ವಯಸ್ಸಿನಲ್ಲಿಯೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಎಂ.ಎಸ್.ಜಿಗಜಿನ್ನಿ ಹಲಗೆ ನಾದಕ್ಕೆ ಹೆಜ್ಜೆ ಹಾಕಿ ಉತ್ಸಾಹ ಮೂಡಿಸಿದರು. ಹೋಳಿ ಪದಗಳು ಆಕರ್ಷಿಸಿದವು.
EndFragment