

ಬಾಗಲಕೋಟೆ: ದೇಶದಲ್ಲಿಯೇ ಗಮನ ಸೆಳೆದಿರುವ ಬಾಗಲಕೋಟೆಯ ಬಣ್ಣದೋಕುಳಿ ಮಂಗಳವಾರದಿಂದ ಮೂರು ದಿನ ಸಂಭ್ರಮದಿಂದ ನಡೆಯಲಿದೆ.
ಹೋಳಿ ಹುಣ್ಣಿಮೆಯ ದಿನ ಸೋಮವಾರ ಬೆಳಗಿನ ಜಾವ ಹುಬ್ಬಾ ನಕ್ಷತ್ರ ಗೋಚರಿಸುತ್ತಿದ್ದಂತೆ ನಗರದ ಕಿಲ್ಲಾ ಓಣಿಯಲ್ಲಿ ದಲಿತ ಕುಟುಂಬದಿಂದ ತಂದ ಕಿಚ್ಚಿನಿಂದ ಮೊದಲು ಕಾಮದಹನ ಮಾಡಿ ಉತ್ಸವಕ್ಕೆ ಅದ್ದೂರಿ ಚಾಲನೆ ನೀಡಲಾಯಿತು.
ತುರಾಯಿ ಹಲಗೆ, ಗಂಟೆ ನಾದ, ಮಹಿಳೆಯರ ಆರತಿ, ನಿಶಾನೆಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿ ಮೊದಲು ಕಿಲ್ಲಾದಲ್ಲಿ ಕಾಮದಹನ ಕಾರ್ಯ ಮುಗಿದ ನಂತರ ಹಳಪೇಟೆ, ಜೈನ್‌ಪೇಟೆ ಹೊಸಪೇಟೆ, ವೆಂಕಟಪೇಟೆಗಳಲ್ಲಿ ಕಾಮದಹನ ನಡೆಯಿತು. ಮಧ್ಯಾಹ್ನದಿಂದ ರಾತ್ರಿವರೆಗೂ ಬಾಗಲಕೋಟೆ, ವಿದ್ಯಾಗಿರಿ ಹಾಗೂ ನವನಗರದ ವಿವಿಧ ಕಡೆ ಕಾಮದಹನ ಕಾರ್ಯ ಜರುಗಿತು. ಕಾಮದಹನ ಸಂದರ್ಭದಲ್ಲಿ ಯುವಪಡೆ ವಿಶಿಷ್ಟ ರೀತಿಯಲ್ಲಿ ಹಲಗೆ ಬಾರಿಸುತ್ತ ಬಾಯಿ ಬಡಿದುಕೊಳ್ಳುವ ಮೂಲಕ ಹೋಳಿ ಆಚರಣೆ ಮೆರಗು ಹೆಚ್ಚಿಸಿದರು. ಬೆಳ್ಳಂ ಬೆಳಗ್ಗೆಯಿಂದ ನಗರದ ಪ್ರಮುಖ ಗಲ್ಲಿ ಗಲ್ಲಿಗಳಲ್ಲಿ ಯುವಕರು, ಬಾಲಕರು ಸ್ಪರ್ಧೆಗೆ ಇಳಿದಂತೆ ಹಲಗೆ ಬಾರಿಸಿದರು. ಮಾ.9 ರಂದು ಇಡೀ ದಿನ ಕಾಮದಹನ ಕಾರ್ಯ ನಡೆಯಿತು.
ಇನ್ನು ಮಾ. 10, 11, 12ರಂದು ನಗರದಲ್ಲಿ ಬಣ್ಣದೋಕುಳಿಯ ಅಬ್ಬರ ಜೋರಾಗಲಿದೆ. ಓಕುಳಿ ಹಿನ್ನೆಲೆ ಮಾರುಕಟ್ಟೆಯಲ್ಲಿ ವಿವಿಧ ಬಣ್ಣಗಳ ಮಾರಾಟ ಜೋರಾಗಿ ನಡೆದಿದೆ. ಪಾಲಕರು ಮಕ್ಕಳಿಗಾಗಿ ಪಿಚಕಾರಿ ಕೊಂಡುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ಯುವಕರು ಹೆಚ್ಚಿನ ಪ್ರಮಾಣದಲ್ಲಿ ನಾನಾ ಬಣ್ಣಗಳ ಖರೀದಿಗೆ ಮುಗಿಬಿದ್ದಿದ್ದರು.
ದೇಶದಲ್ಲಿ ಕೊಲ್ಕತಾ ನಂತರ ಬಣ್ಣದೋಕುಳಿಗೆ ಹೆಸರುವಾಸಿಯಾಗಿರುವ ಬಾಗಲಕೋಟೆಯ ಬಣ್ಣದ ಆಟ ಮೂರು ದಿನ ನಗರವನ್ನು ಆವರಿಸಲಿದೆ. ಮಂಗಳವಾರ ಬೆಳಗ್ಗೆಯಿಂದ ಅಧಿಕೃತವಾಗಿ ರಂಗಿನಾಟ ರಂಗೇರಲಿದೆ. ಸೋಗಿನ ಬಂಡಿ ಹಾಗೂ ಬಣ್ಣದ ಬಂಡಿಗಳು ಆಕರ್ಷಕ ಸಂಚಾರ ನೋಡುಗರ ಗಮನ ಸೆಳೆಯಲಿವೆ. ಬಾಗಲಕೋಟೆ ಜಿಲ್ಲೆಯ ವಿವಿಧ ಗ್ರಾಮಗಳಿಂದ, ಅಕ್ಕಪಕ್ಕದ ಜಿಲ್ಲೆ ಹಾಗೂ ರಾಜ್ಯಗಳಿಂದ ಸಾವಿರಾರು ಜನ ಹೋಳಿ ನೋಡಲು ಆಗಮಿಸಲಿದ್ದಾರೆ.
ಮೊದಲ ದಿನ ಕಿಲ್ಲಾ, 2ನೇ ದಿನ ಹಳಪೇಟ, ಜೈನ್‌ಪೇಟ ಮತ್ತು ವೆಂಕಟಪೇಟ ಹಾಗೂ 3ನೇ ದಿನ ಹೊಸಪೇಟದಲ್ಲಿ ಬಣ್ಣದ ಹಬ್ಬ ನಡೆಯಲಿದೆ. ಕರೊನಾ ಭೀತಿ ಹಿನ್ನೆಲೆಯಲ್ಲಿ ಬಣ್ಣದ ಸಂಭ್ರಮಕ್ಕೆ ಸ್ವಲ್ಪ ಅಡೆ-ತಡೆ ಉಂಟಾದರೂ ಮೂರು ದಿನಗಳ ಕಾಲ ಸಾವಿರ, ಸಾವಿರ ಸಂಖ್ಯೆಯಲ್ಲಿ ಜನರು ಸೇರಿ ಓಕುಳಿಯಲ್ಲಿ ಪಾಲ್ಗೊಂಡು ರಂಗಿನ ಲೋಕದಲ್ಲಿ ತೇಲುತ್ತಾರೆ.
ಮೂರು ದಿನ ಅಕ್ಷರಶಃ ಕೋಟೆನಗರಿ ಬಂದ್
ಮೂರು ದಿನ ನಗರ ವ್ಯಾಪ್ತಿಯಲ್ಲಿ ರಂಗಿನಾಟ ನಡೆಯುವುದರಿಂದ ಕೋಟೆನಗರಿ ಅಕ್ಷರಶಃ ಸ್ವಯಂ ಬಂದ್‌ನಂತೆ ಗೋಚರಿಸಲಿದೆ. ವ್ಯಾಪಾರ ವಹಿವಾಟು ಸಂಪೂರ್ಣ ಸ್ತಬ್ಧಗೊಳ್ಳಲಿದೆ. ಬಸ್ ನಿಲ್ದಾಣ, ವಲ್ಲಭಭಾಯಿ ಚೌಕ್, ಬಸವೇಶ್ವರ ವೃತ್ತ ಸೇರಿ ಪ್ರಮುಖ ಜನದಟ್ಟನೆ ಪ್ರದೇಶಗಳು ಬಿಕೋ ಎನ್ನಲಿವೆ. ಹೋಳಿ ರಂಗಿನಲ್ಲಿ ಮುಳುಗಡೆ ನಗರಿ ಕಂಗೊಳಿಸಲಿದೆ. ನಗರದಲ್ಲಿ ವಹಿವಾಟು ನಡೆಯದೆ ಇರುವುದರಿಂದ ಸುತ್ತಮುತ್ತಲ ಗ್ರಾಮಗಳ ಜನರು ನಗರದ ಕಡೆ ಆಗಮಿಸುವುದು ಬಲು ಅಪರೂಪ.
‘ನಮ್ಮೂರ ನಮ್ಮ ರಂಗು‘
ಹೋಳಿ ಹಬ್ಬಕ್ಕೆ ಆಧುನಿಕತೆಯ ಸ್ಪರ್ಶ ನೀಡಲು ಹೋಳಿ ಆಚರಣಾ ಸಮಿತಿ ಮುಂದಾಗಿದೆ. ‘ನಮ್ಮೂರು ನಮ್ಮ ರಂಗು’ ಎಂಬ ಘೊಷಣೆ ಅಡಿ ಮಾ.11 ರಂದು ಬಸವೇಶ್ವರ ವೃತ್ತದಲ್ಲಿ ಬೃಹತ್ ವೇದಿಕೆಯಲ್ಲಿ ಬಣ್ಣದ ಕಾರಂಜಿ ಮತ್ತು ಡಿಜೆ ಸೌಂಡ್ ಅಳವಡಿಸಿ ಬಣ್ಣದೋಕುಳಿ ಆಡಲಾಗುತ್ತದೆ. ಬೆಳಗ್ಗೆ 10.30 ಗಂಟೆಗೆ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಂ.ಜೀರಗಾಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಬಸವರಾಜ ಶಿರೂರ ಉದ್ಘಾಟಿಸಲಿದ್ದಾರೆ. ಡಾ.ಉತ್ಕಲಾ ಸರನಾಡಗೌಡರ ಅಧ್ಯಕ್ಷತೆ ವಹಿಸಲಿದ್ದಾರೆ. ಹೋಳಿ ಆಚರಣಾ ಸಮಿತಿ ಅಧ್ಯಕ್ಷ ಕಳಕಪ್ಪ ಬಾದೋಡಗಿ, ಪ್ರಧಾನ ಕಾರ್ಯದರ್ಶಿ ಮಹಾಬಳೇಶ್ವರ ಗುಡಗುಂಟಿ, ಸಂಘಟನಾ ಕಾರ್ಯದರ್ಶಿ ಸಂಜೀವ ವಾಡಕರ, ಮುಖಂಡರಾದ ಜಯಂತ ಕುರಂದವಾಡ, ರವಿ ಕುಮಟಗಿ, ಆನಂದ ಜಿಗಜಿನ್ನಿ, ವಿರೇಶ ರೋಣದ, ದುಂಡಪ್ಪ ಏಳಮ್ಮಿ, ಸಂಗಣ್ಣ ಕಾರಪುಡಿ ಉಪಸ್ಥಿತರಿರುವರು.
EndFragment