ಸುರಕ್ಷಿತವಾಗಿ ಹೋಳಿ ಆಚರಿಸಿ

BKT 232
Published on

ಬಾಗಲಕೋಟೆ: ಬಾಗಲಕೋಟೆ ನಗರದಲ್ಲಿ ಮಾ.29 ರಿಂದ 31 ವರೆಗೆ ಮೂರು ದಿನಗಳ ಕಾಲ ಜರುಗಲಿರುವ ಹೋಳಿ ಆಚರಣೆಯಲ್ಲಿ ಬಣ್ಣದ ಬಂಡಿ ಮೆರವಣಿಗೆ, ರೇನ್‌ಡ್ಯಾನ್ಸ್ ಹಾಗೂ ಸಾಮೂಹಿಕವಾಗಿ ಆಚರಣೆ ಆಯೋಜನೆೆ ಮಾಡುವದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹೇಳಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹೋಳಿ ಆಚರಣೆ ಕುರಿತ ಶಾಂತತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಂಪ್ರದಾಯಿಕವಾಗಿ ಹಾಗೂ ಐತಿಹಾಸಿಕವಾಗಿ ಅನೇಕ ವರ್ಷಗಳಿಂದ ಹೋಳಿ ಹಬ್ಬವನ್ನು ವಿಜೃಂಭನೆಯಿಂದ ಆಚರಿಸುತ್ತಾ ಬರಲಾಗಿದೆ. ಕಳೆದ ಒಂದು ವರ್ಷದಿಂದ ಕೋವಿಡ್ ಮಹಾಮಾರಿ ಸೋಂಕು ರೋಗದ ಹಾವಳಿಯಿಂದಾಗಿ ಜನರ ಆರೋಗ್ಯದ ದೃಷ್ಟಿಯಿಂದ ಈ ವರ್ಷ ಹೋಳಿ ಹಬ್ಬವನ್ನು ಸೀಮಿತವಾಗಿ ಆಚರಿಸುವ ಅವಶ್ಯಕತೆ ಇದೆ ಎಂದರು.

ಧಾರ್ಮಿಕವಾಗಿ ಕೈಗೊಳ್ಳುವ ಆಚರಣೆಗೆ ಸಂಬಂಧಿಸಿದಂತೆ ವಿಧಿ ವಿಧಾನಗಳನ್ನು ಪೂಜೆಗೆ ಸೀಮಿತಗೊಳಿಸಲಾಗಿದೆ. ತಮ್ಮ ಕುಟುಂಬ ಹಾಗೂ ಗೆಳೆಯರ ಜೊತೆ ಬಣ್ಣದ ಆಟವನ್ನು ಆಡಬಹುದಾಗಿದೆ. ಕೋವಿಡ್ 2ನೇ ಅಲೇ ಹರಡಬಹುದು ಎನ್ನುವ ರೋಗದ ಗಂಭೀರತೆ ಅರಿತು ಶಾಂತಿಯುತವಾಗಿ ಹಾಗೂ ಅರ್ಥಪೂರ್ಣವಾಗಿ ಹಬ್ಬ ಆಚರಿಸಬೇಕು. ಜನರ ಆರೋಗ್ಯದ ದೃಷ್ಟಿಯಿಂದ ಜಿಲ್ಲಾಡಳಿತದಿಂದ ಹೊರಡಿಸಲಾದ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು ಎಂದು ತಿಳಿಸಿದರು.

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ತಹಸೀಲ್ದಾರ ಗುರುಸಿದ್ದಯ್ಯ ಹಿರೇಮಠ, ನಗರಸಭೆ ಆಯುಕ್ತ ವಿ.ಮುನಿಶಾಮಪ್ಪ, ಆಚರಣೆ ಸಮಿತಿ ಮುಖಂಡರಾದ ಕಳಕಪ್ಪ ಬಾದೊಡಗಿ, ಬಸವರಾಜ ಕಟಗೇರಿ, ಅಶೋಕ ಮುತ್ತಿನಮಠ, ಎ.ಎ.ದಾಂಡಿಯಾ, ಕುತುಬುದ್ದಿನ ಖಾಜಿ ಇತರರು ಉಪಸ್ಥಿತರಿದ್ದರು.

ಕೋವಿಡ್ 2ನೇ ಅಲೆ ಹಿನ್ನಲೆಯಲ್ಲಿ ಮುಂಜಾಗ್ರತೆ ತೆಗೆದುಕೊಳ್ಳಲಾಗಿದೆ. ಹೀಗಾಗಿ ಹೋಳಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ. ತಮ್ಮ ಪರಿವಾರದ ಜೊತೆ, ಗೆಳೆಯರ ಜೊತೆ ಹಾಗೂ ಓಣಿಗೆ ಸೀಮಿತವಾಗಿ ಹೊಳಿ ಆಚರಿಸಬೇಕು. ರೋಗ ಹರಡಲಿಕ್ಕೆ ಅವಕಾಶ ನೀಡದಂತೆ ಎಚ್ಚರಿಕೆ ಕ್ರಮವಹಿಸಬೇಕು. ಅಜಾಗರುಕತೆ ಬೇಡ, ಸುರಕ್ಷತೆ ದೃಷ್ಟಿಯಿಂದ ಮಾಸ್ಕ, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಜರ್ ಬಳಸಬೇಕು.
- ಲೋಕೇಶ ಜಗಲಾಸರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net