

ಬಾಗಲಕೋಟೆ: ದೇಶದಲ್ಲಿಯೇ ವಿಶೇಷವಾಗಿ ಆಚರಿಸುವ ಬಾಗಲಕೋಟೆ ಹೋಳಿಗೆ ಭವ್ಯ ಇತಿಹಾಸ, ಪರಂಪರೆ ಇದೆ. ವೈಶಿಷ್ಟ ಪೂರ್ಣವಾಗಿರುವ ಗತ ವೈಭವದ ಹೋಳಿ ಉಳಿಸಿ-ಬೆಳೆಸುವುದರ ಜತೆಗೆ ಸಾಂಪ್ರದಾಯಕ ಆಚರಣೆಗೆ ಹೊಸ ಸ್ಪರ್ಶ ನೀಡಬೇಕಿದೆ ಎಂದು ಉದ್ಯಮಿ ಮಹಾಂತೇಶ ಕುಮಟಗಿ ಹೇಳಿದರು.
ನಗರದ ಹೊಳೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಬುಧವಾರ ರಾತ್ರಿ ಮಾಧವ ಸೇವಾ ಕೇಂದ್ರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಹೋಳಿ ಹಬ್ಬ-ಹಲಗೆ ಮೇಳ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಈಚೆಗಿನ ದಿನಗಳಲ್ಲಿ ಯುವಕರು ಪಾಶ್ಚಾತ್ಯ ಸಂಸ್ಕೃತಿಗೆ ಮೊರೆ ಹೋಗುತ್ತಿದ್ದಾರೆ. ಇದರಿಂದ ಇತಿಹಾಸ ಪ್ರಸಿದ್ಧ ಹಬ್ಬಗಳ ಮೆರುಗು ಕಡಿಮೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಾಬುದಾರ ಬಸವಪ್ರಭು ಸರನಾಡಗೌಡ ಮಾತನಾಡಿ, ಹೋಳಿ ಹಬ್ಬ ಬದುಕಿನ ಹಬ್ಬವಾಗಿದೆ. ಎಲ್ಲ ಬಣ್ಣಗಳು ಒಂದೊಂದು ಸಂದೇಶ ಪಡೆದಿವೆ. ನಗರದ ಸಮಸ್ತ ಜನರು ಯಾವುದೇ ಗಲಾಟೆ, ಜಗಳಕ್ಕೆ ಅವಕಾಶ ನೀಡದೆ ಶಾಂತಿಯುತವಾಗಿ ಹೋಳಿ ಆಚರಿಸಬೇಕು. ಪರಸ್ಪರ ಪ್ರೀತಿ, ಸೌಹಾರ್ದತೆ ಮೆರೆಯಬೇಕು ಎಂದರು.
ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿರ್ದೇಶಕ ನಿಂಗನಗೌಡ ಪಾಟೀಲ, ಹೋಳಿ ಆಚರಣಾ ಸಮಿತಿ ಅಧ್ಯಕ್ಷ ಕಳಕಪ್ಪ ಬಾದವಾಡಗಿ, ಪ್ರಧಾನ ಕಾರ್ಯದರ್ಶಿ ಮಹಾಬಳೇಶ್ವರ ಗುಡಗುಂಟಿ, ಕರವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರ, ಪತ್ರಕರ್ತ ಈಶ್ವರ ಶೆಟ್ಟರ, ಮುಖಂಡರಾದ ಭಜನಲಾಲ ಚಾವಲಾ, ಸಂತೋಷ ಹೊಕ್ರಾಣಿ, ಅಶೋಕ ಎಲ್.ಜಾಲವಾದಿ, ಮಾಧವ ಸೇವಾ ಕೇಂದ್ರದ ಅಧ್ಯಕ್ಷ ನಾಗರಾಜ ಹದ್ಲಿ ಇತರರು ಇದ್ದರು. ಭರತ ಲೋಖಂಡೆ ಸ್ವಾಗತಿಸಿದರು. ಚೆನ್ನವೀರ ಅಂಗಡಿ ವಂದಿಸಿದರು. ವಿನಯ ಮತ್ತು ಪ್ರಭು ಇಂಡಿ ನಿರೂಪಿಸಿದರು.
ಭಗತ್ ಸಿಂಗ್ ತಂಡ ಪ್ರಥಮ
ಹಲಗೆ ಸ್ಪರ್ಧೆಯಲ್ಲಿ ನಗರದ ವಿವಿಧ ಭಾಗದಿಂದ 13 ತಂಡಗಳು ಭಾಗವಹಿಸಿದ್ದವು. ಸಾಂಪ್ರದಾಯಕ ಹಲಗೆಯನ್ನು ಶಿಸ್ತುಬದ್ಧವಾಗಿ ನುಡಿಸುವ ಮೂಲಕ ಗಮನ ಸೆಳೆದರು. ಹೊಸಪೇಟೆಯ ಭಗತ್‌ಸಿಂಗ್ ಯುವಕ ತಂಡ (ಪ್ರಥಮ), ಕಿಲ್ಲಾ ಗಲ್ಲಿಯ ಭವಾನಿ ಯುವಕ ಮಂಡಳಿ ತಂಡ (ದ್ವಿತೀಯ), ವೆಂಕಟಪೇಟೆ ಗೆಳೆಯರ ಬಳಗ (ತೃತೀಯ) ಬಹುಮಾನ ಪಡೆದವು. ಜೈನಪೇಟೆಯ ವಾಡಕರ ಗಲ್ಲಿಯ ಛತ್ರಪತಿ ಶಿವಾಜಿ ಮಹಾರಾಜರ ತಂಡ, ಎಂ.ಜಿ. ರಸ್ತೆಯ ಬಸವೇಶ್ವರ ಯುವಕ ಮಂಡಳಿ ತಂಡ, ವಿದ್ಯಾಗಿರಿಯ ನಾದಸಿರಿ ಕಲಾ ತಂಡ, ಕೌಲಪೇಟೆ ಯುವಕ ಮಂಡಳ, ಗಜಾನನ ಚೌಕ ಹಳಪೇಟಯ ಗಣೇಶ ಮಿತ್ರ ಮಂಡಳಿ ತಂಡ ಸಮಾಧಾನಕರ ಬಹುಮಾನಕ್ಕೆ ತೃಪ್ತಿ ಪಟ್ಟವು.
EndFragment