

ಬಾಗಲಕೋಟೆ: ಮೊದಲ ಹಂತದ ಗ್ರಾಪಂ ಪಂಚಾಯಿತಿ ಗದ್ದುಗೆಗೆ ಮಂಗಳವಾರ ಜಿಲ್ಲೆಯ ಜಮಖಂಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ನಡೆದ ಚುನಾವಣೆಯಲ್ಲಿ ಶೇ. 83.69 ರಷ್ಟು ಮತದಾನವಾಗಿರುವ ಬಗ್ಗೆ ಜಿಲ್ಲಾಡಳಿತ ಖಚಿತ ಪಡಿಸಿದೆ. ಮತದಾನದ ವೇಳೆ ಅಲ್ಲಲ್ಲಿ ಸಣ್ಣಪುಟ್ಟ ಮಾತಿನ ಚಕಮಕಿ ಹೊರತುಪಡಿಸಿದಲ್ಲಿ ಬಹುತೇಕ ಕಡೆ ಚುನಾವಣೆ ಶಾಂತಿಯುತವಾಗಿದೆ.
ಚುಮು ಚುಮು ಚಳಿ ಇರುವ ಕಾರಣಕ್ಕೆ ಬೆಳಗ್ಗೆ ನಿಧಾನಗತಿಯಲ್ಲಿ ಮತದಾನ ಆರಂಭಗೊಂಡಿತು. ಮತಗಟ್ಟೆ ಬಳಿ ಮತದಾರರಗಿಂತಲೂ ಅಭ್ಯರ್ಥಿಗಳ ಕುಟುಂಬ ಹಾಗೂ ಬೆಂಬಲಿಗ ಪಡೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಮತದಾನಕ್ಕೆ ಬರುವ ಜನರಿಗೆ ಒಬ್ಬರ ಹಿಂದೆ ಮತ್ತೊಬ್ಬರು ಕೈಮುಗಿತ್ತಿರುವ ದೃಶ್ಯ ಕಂಡು ಬಂದಿತು. ತಣ್ಣನೆ ಬಿಸುವ ಶೀತಗಾಳಿ ನಡುವೆ ಮತದಾರರು ಮತಗಟ್ಟೆಯಲ್ಲಿ ಸರದಿಯಲ್ಲಿ ನಿಂತು ಮತದಾನ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೆಳಗ್ಗೆ 9 ಗಂಟೆಗೆ ಶೇ.8.1 ರಷ್ಟು ಮತದಾನವಾದರೆ, 11 ಗಂಟೆಗೆ ಶೇ.25.15 ರಷ್ಟು, ಮಧ್ಯಾಹ್ನ 1ಕ್ಕೆ 46.08 ರಷ್ಟು ಹಾಗೂ 3 ಗಂಟೆಗೆ ಶೇ.66.05 ರಷ್ಟು ಮತದಾನವಾಗಿತ್ತು. ಅಂತಿಮವಾಗಿ ಶೇ.83.69 ಮತದಾನವಾಗಿದ್ದು, ಇದು ಈ ಹಿಂದಿನ ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಹೋಲಿಕೆ ಮಾಡಿದಲ್ಲಿ ಗರಿಷ್ಠ ಮತದಾನವಾಗಿದೆ ಎನ್ನಲಾಗಿದೆ.
ಹಕ್ಕು ಚಲಾಯಿಸಲು ಮಹಿಳೆಯರು, ವೃದ್ಧರು, ಅಂಗವಿಕಲರು ಉತ್ಸಾಹದಿಂದಲೇ ಭಾಗವಹಿಸಿದ್ದು ಗಮನ ಸೆಳೆಯಿತು. ಅಲ್ಲಲ್ಲಿ ಮತದಾರರಿಗೆ ಹಣದ ಆಮಿಷವೊಡ್ಡುತ್ತಿದ್ದಾರೆ ಎನ್ನುವ ಕೂಗು ಕೇಳಿ ಬಂದಿತು. ಕೆಲ ಅಭ್ಯರ್ಥಿಗಳು 100 ರೂ. ಕೊಟ್ಟು ಮತಹಾಕಿಸುತ್ತಿದ್ದಾರೆ ಎನ್ನುವ ಮಾತುಗಳು ಮತಗಟ್ಟೆ ಬಳಿ ಹರಿದಾಡಿದವು. ಮತದಾನ ದಿನವು ಮದ್ಯ, ಮಾಂಸದ ಬಾಡೂಟ ಭರ್ಜರಿಯಾಗಿ ನಡೆಯಿತು. ಹಿರಿಯರು, ಅಂಗವಿಕಲರು ಮತದಾನ ಮಾಡಲು ಕುಟುಂಬ ಸದಸ್ಯರು ನೆರವಾದರು. ಅನೇಕ ಹಳ್ಳಿಗಳಲ್ಲಿ ಮತದಾರರನ್ನು ಕರೆತರಲು ಅಭ್ಯರ್ಥಿಗಳು ಕ್ರೂಸರ್, ಟಂಟಂ, ಟ್ರಾೃಕ್ಟರ್ ವ್ಯವಸ್ಥೆ ಕಲ್ಪಿಸಿದ್ದರು.
ಒಟ್ಟಾರೆಯಾಗಿ ಜಿಲ್ಲೆಯ ಜಮಖಂಡಿ ಉಪವಿಭಾಗ ವ್ಯಾಪ್ತಿಯಲ್ಲಿ ಮೊದಲ ಹಂತದ 88 ಗ್ರಾಮ ಪಂಚಾಯಿತಿಗಳ 1397 ಸ್ಥಾನಗಳಿಗೆ ಶಾಂತಿಯುತವಾಗಿ ನಡೆದಿದ್ದು, ಯಾವುದೇ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿಲ್ಲ. ಎಲ್ಲೆಡೆ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಗಿತ್ತು.
ಕೋವಿಡ್ ಭಯ, ಮಾಸ್ಕ್ ಮಾಯ
ಮತದಾನ ವೇಳೆ ಬಹುತೇಕ ಹಳ್ಳಿಗಳಲ್ಲಿ ಕೋವಿಡ್ ಭೀತಿ ಸಂಪೂರ್ಣ ಮಾಯವಾಗಿತ್ತು. ಮಾಸ್ಕ್, ಪರಸ್ಪರ ಅಂತರವಿಲ್ಲದೆ ಸಮೂಹವಾಗಿ ಸೇರಿದ್ದರು. ಅಲ್ಲದೆ, ವಾಹನಗಳಲ್ಲಿ ತಂಡೋಪ ತಂಡವಾಗಿ ಆಗಮಿಸಿದರು. ಮತಗಟ್ಟೆ ಸಮೀಪಿಸುತ್ತಿದ್ದಂತೆ ಅನೇಕ ಜನರು ಮಾಸ್ಕ್ ಧರಿಸಿಕೊಳ್ಳುವ ದೃಶ್ಯ ಕಂಡು ಬಂದಿತ್ತು. ಆದರೆ, ಮತಗಟ್ಟೆ ಪ್ರವೇಶದ್ವಾರದಲ್ಲಿ ಚುನಾವಣೆ ಸಿಬ್ಬಂದಿ ಪ್ರತಿಯೊಬ್ಬ ಮತದಾರರನ್ನು ಧರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿ ಕೈಗಳಿಗೆ ಸ್ಯಾನಿಟೈಸರ್ ಸಿಂಪಡನೆ ಮಾಡಿದರು. ಮಾಸ್ಕ್ ಧರಿಸಿದವರಿಗೆ ಖಡಕ್ ಸೂಚನೆ ನೀಡಿದರು.
ಉತ್ಸಾಹ ತೋರಿದ ಮತದಾರರು
ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿರುವ ದೃಶ್ಯ ಕಂಡು ಬಂದಿತು. ಪುರುಷರಿಗಿಂತ ಮಹಿಳಾ ಮತದಾರರು ಮತಗಟ್ಟೆಯ ಮುಂದೆ ಸರತಿ ಸಾಲಿನಲ್ಲಿ ಹೆಚ್ಚಾಗಿ ನಿಂತಿದ್ದರು. ಬೀಳಗಿ ತಾಲೂಕಿನ ತುಮ್ಮರಮಟ್ಟಿ 75 ವಯಸ್ಸಿನ ದುಂಡವ್ವ ಕಡಣ್ಣವರ, ಅನಗವಾಡಿ ಗ್ರಾಮದ ವಾರ್ಡ್ ನಂಬರ್ 2 ರ ಮತಗಟ್ಟೆಯಲ್ಲಿ 98 ವಯಸ್ಸಿನ ದಾನಮ್ಮ ಬಟಕುರ್ಕಿ ತಮ್ಮ ಕುಟುಂಬ ಸದಸ್ಯರ ಸಹಾಯದೊಂದಿಗೆ ಮತದಾನ ಮಾಡಿದ್ದು ಗಮನ ಸೆಳೆಯಿತು.
ಮತಗಟ್ಟೆಗಳಿಗೆ ಅಧಿಕಾರಿಗಳ ಭೇಟಿ
ಜಿಲ್ಲಾ ಪಂಚಾಯಿತಿ ಸಿಇಒ ಟಿ.ಭೂಬಾಲನ್ ಬೀಳಗಿ ತಾಲೂಕಿನ ಸುನಗ ಮತ್ತು ಅನಗವಾಡಿ ಗ್ರಾಮಗಳಲ್ಲಿ ಮತದಾನ ನಡೆಯುತ್ತಿರುವ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆದ ಬಗ್ಗೆ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಕೆ.ರಾಜೇಂದ್ರ ಎರಡನೇ ಹಂತದ ಚುನಾವಣೆ ಸಿದ್ಧತೆ ಬಗ್ಗೆ ಹುನಗುಂದ ಮತ್ತು ಇಳಕಲ್ಲ ತಾಲೂಕಿನ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ, ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಎಲ್ಲೆಲ್ಲಿ ಎಷ್ಟೆಷ್ಟು ಮತದಾನ
ಜಿಲ್ಲೆಯಲ್ಲಿ ಒಟ್ಟು ಶೇ.83.69 ರಷ್ಟು ಮತದಾನವಾಗಿದೆ. ಇದರಲ್ಲಿ ಮುಧೋಳ ತಾಲೂಕಿನಲ್ಲಿ ಅತಿಹೆಚ್ಚು 84.90 ರಷ್ಟು ಮತದಾನವಾಗಿದ್ದರೆ ಬೀಳಗಿ ತಾಲೂಕಿನಲ್ಲಿ ಕನಿಷ್ಠ ಶೇ.81.43 ಜನರು ತಮ್ಮ ಚಲಾಯಿಸಿದ್ದಾರೆ. ಉಳಿದಂತೆ ಜಮಖಂಡಿಯಲ್ಲಿ ಶೇ. 83.58, ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಶೇ.84.87 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದ್ದಾರೆ.
ಪ್ರತಿಯೊಂದು ಚುನಾವಣೆಯಲ್ಲಿ ಮತದಾನ ಮಾಡಿದ್ದೇನೆ. ವಯಸ್ಸು ಆಗಿದೆ ಅಂತ ಬಿಟ್ಟಿಲ್ಲ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು.
- ದಾನಮ್ಮ ಬಟಕುರ್ಕಿ ಅನಗವಾಡಿ ಗ್ರಾಮ ಬೀಳಗಿ ತಾಲೂಕು
EndFragment