

ಬಾಗಲಕೋಟೆ: ಬಾಗಲಕೋಟೆ ಉಪವಿಭಾಗ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ಎರಡನೇ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಭಾನುವಾರ ಶೇ. 79.67 ರಷ್ಟು ಮತದಾನವಾಗಿದೆ. ಒಂದು ಮತ್ತು ಎರಡನೇ ಹಂತ ಸೇರಿ ಗ್ರಾಪಂ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ. 87.50 ರಷ್ಟು ಮತದಾನವಾಗಿದೆ.
ಅತಿ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದ್ದ ಹುನಗುಂದ, ಬಾಗಲಕೋಟೆ ತಾಲೂಕು ಸೇರಿ ಜಿಲ್ಲೆಯಲ್ಲಿ ಬಹುತೇಕ ಭಾಗದಲ್ಲಿ ಶಾಂತಿಯುತವಾಗಿ ಚುನಾವಣೆ ಜರುಗಿತು.
ಚುಮುಚುಮು ಚಳಿ ನಡುವೆಯೂ102 ಗ್ರಾಮ ಪಂಚಾಯಿತಿಗಳ1380 ಸ್ಥಾನಗಳ ಆಯ್ಕೆಗೆ ಬೆಳಗ್ಗೆ ಮತದಾನಕ್ಕೆ ಚಾಲನೆ ಸಿಕ್ಕಿತು. ಹಕ್ಕು ಚಲಾಯಿಸಲು ಮಹಿಳೆಯರು, ವೃದ್ಧರು, ಅಂಗವಿಕಲರು ಉತ್ಸಾಹದಿಂದಲೇ ಮತದಾನದಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು. ಅಲ್ಲಲ್ಲಿ ಮತದಾರರಿಗೆ ಹಣದ ಆಮಿಷವೊಡ್ಡುತ್ತಿದ್ದಾರೆ ಎನ್ನುವ ಕೂಗು ಕೇಳಿ ಬಂದಿತು. ಸಣ್ಣಪುಟ್ಟ ಮಾತಿನ ಚಕಮಕಿ ಹೊರತುಪಡಿಸಿ ಉಳಿದಂತೆ ಸಮಾಧಾನದಿಂದ ಮತದಾರರು ತಮ್ಮ ಹಕ್ಕು ಚಲಾಯಿಸಿದರು. 1367 ಅಭ್ಯರ್ಥಿಗಳ ಭವಿಷ್ಯ ಮತಪಟ್ಟೆಗೆಯಲ್ಲಿ ಭದ್ರವಾಯಿತು.
ಬಾದಾಮಿ ತಾಲೂಕಿನ ಮತ್ತಿಕಟ್ಟಿ ಗ್ರಾಮದ ಮತಗಟ್ಟೆ ಸಂಖ್ಯೆ 161 ರಲ್ಲಿ ಮತಪತ್ರದಲ್ಲಿ ಮೊಹರಿನಿಂದ ಒತ್ತಿದಾಗ ಸರಿಯಾಗಿ ಇಂಕು ಸರಿಯಾಗಿ ಮೂಡಲಿಲ್ಲ. ಇದರಿಂದ ಅಭ್ಯರ್ಥಿಗಳು ಕೆಲ ಸಮಯ ಗಾಬರಿಗೊಂಡಿದ್ದರು. ಮತಗಟ್ಟೆ ಅಧಿಕಾರಿಗಳು ಪರಿಶೀಲಿಸಿ ಎಲ್ಲವನ್ನು ಸರಿಪಡಿಸಿದ ಬಳಿಕ ಅಭ್ಯರ್ಥಿಗಳು ನಿರಾಳರಾದರು. ತುಳಸಿಗೇರಿ ಗ್ರಾಮದ ವಾರ್ಡ್ ನಂಬರ್ 1 ರಲ್ಲಿ ಮತದಾನ ವೇಳೆ ಜನ ಸಮೂಹ ಏರ್ಪಟ್ಟಿದ್ದರಿಂದ ಪೊಲೀಸರು ಲಾಠಿ ಬೀಸಿದ ಘಟನೆ ನಡೆಯಿತು. ನಾವೇನು ಯಾರ ಬೆಂಬಲಿಗರು ಅಲ್ಲ. ಮತಗಟ್ಟೆ ಬಳಿ ಅಭ್ಯರ್ಥಿ ಬೆಂಬಲಿಗರು ಓಡಾಡುತ್ತಿದ್ದಾರೆ. ಅಮಾಯಕ ಮತದಾರರ ಮೇಲೆ ಲಾಠಿ ಬೀಸ್ತಿರಾ ಎಂದು ಮತದಾರರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.
ಮತದಾನಕ್ಕೆ ಬರುವ ಜನರಿಗೆ ಅಭ್ಯರ್ಥಿಗಳು ನಾ ಮುಂದು, ತಾ ಮುಂದು ಎಂದು ಒಬ್ಬರ ಹಿಂದೆ ಮತ್ತೊಬ್ಬರು ಕೈಮುಗಿಯುತ್ತಿರುವ ದೃಶ್ಯ ಕಂಡು ಬಂದಿತು.
ಹಂತ ಹಂತವಾಗಿ ಏರಿದ ಪ್ರಮಾಣ
ಬೆಳಗ್ಗೆ 9 ಗಂಟೆಗೆ ಶೇ.6.75 ರಷ್ಟು ಮತದಾನವಾದರೆ, 11 ಗಂಟೆಗೆ ಶೇ.23.97 ರಷ್ಟು, ಮಧ್ಯಾಹ್ನ 1ಕ್ಕೆ 45.03 ರಷ್ಟು ಹಾಗೂ 3 ಗಂಟೆಗೆ ಶೇ.63.45 ರಷ್ಟು ಮತದಾನವಾಗಿತ್ತು. ಅಂತಿಮವಾಗಿ ಶೇ.79.67 ಮತದಾನವಾಗಿದೆ.
ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಮತದಾರರು ಮತದಾನ ಮಾಡಿದರು. ಕೋವಿಡ ನಿಯಮವಾಳಿ ಪಾಲಿಸುವಂತೆ ಪೊಲೀಸರು, ಚುನಾವಣೆ ಸಿಬ್ಬಂದಿ ಕಟ್ಟುನಿಟ್ಟಿನ ಸೂಚನೆ ನೀಡುತ್ತಿರುವ ದೃಶ್ಯ ಕಂಡು ಬಂದಿತು. ಕೆಲವು ಹಳ್ಳಿಗಳಲ್ಲಿ ಕೋವಿಡ್ ಭೀತಿ ಸಂಪೂರ್ಣ ಮಾಯವಾಗಿತ್ತು. ಮಾಸ್ಕ್, ಪರಸ್ಪರ ಅಂತರವಿಲ್ಲದೆ ಸಮೂಹವಾಗಿ ಸೇರಿದ್ದರು. ಅಲ್ಲದೆ, ವಾಹನಗಳಲ್ಲಿ ತಂಡೋಪತಂಡವಾಗಿ ಆಗಮಿಸಿದರು. ಆದರೆ, ಮತಗಟ್ಟೆ ಪ್ರವೇಶ ದ್ವಾರದಲ್ಲಿ ಚುನಾವಣೆ ಸಿಬ್ಬಂದಿ ಪ್ರತಿಯೊಬ್ಬ ಮತದಾರನನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿ ಕೈಗಳಿಗೆ ಸ್ಯಾನಿಟೈಜರ್ ಸಿಂಪಡಣೆ ಮಾಡಿದರು.
ಎಲ್ಲೆಲ್ಲಿ ಎಷ್ಟೆಷ್ಟು ಮತದಾನ ?
ಬಾಗಲಕೋಟೆ ತಾಲೂಕಿನಲ್ಲಿ ಅತಿಹೆಚ್ಚು ಅಂದರೆ ಶೇ. 82.45 ರಷ್ಟು ಮತದಾನವಾಗಿದ್ದರೆ, ಇಳಕಲ್ಲ ತಾಲೂಕಿನಲ್ಲಿ ಕನಿಷ್ಠ ಶೇ.75.2 ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಉಳಿದಂತೆ ಹುನಗುಂದ ತಾಲೂಕಿನಲ್ಲಿ 78.14, ಬಾದಾಮಿ ತಾಲೂಕಿನಲ್ಲಿ ಶೇ.81.39, ಗುಳೇದಗುಡ್ಡ ತಾಲೂಕಿನಲ್ಲಿ 81.39 ರಷ್ಟು ಮತದಾನವಾಗಿದೆ. ಒಂದು ಮತ್ತು ಎರಡನೇ ಹಂತ ಸೇರಿ ಶೇ. 81.50 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ತಿಳಿಸಿದ್ದಾರೆ.
EndFragment