ಮುಗಿಲು ಮುಟ್ಟಿದ ಸಂಭ್ರಮಾಚರಣೆ

BKT 30-1
Published on

ಬಾಗಲಕೋಟೆ: ಜಿಲ್ಲೆಯ ಎರಡು ಹಂತದಲ್ಲಿ 191 ಗ್ರಾಮ ಪಂಚಾಯಿತಿಗಳ 2777 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯ ಮತದಾನದ ಎಣಿಕೆ ಕಾರ್ಯ ಜಿಲ್ಲೆಯ 9 ತಾಲೂಕು ಕೇಂದ್ರಗಳಲ್ಲಿ ಬುಧವಾರ ನಡೆಯಿತು. ಗೆದ್ದ ಅಭ್ಯರ್ಥಿಗಳು, ಅವರ ಬೆಂಬಲಿಗರು, ಸಂಬಂಧಿಕರು ಸಂಭ್ರಮಾಚರಣೆ ಮಾಡಿದರು.

ಬೆಳಗ್ಗೆ 8 ಗಂಟೆಗೆ ಜಿಲ್ಲೆಯ ಎಲ್ಲ ಮತ ಎಣಿಕೆ ಕೇಂದ್ರದಲ್ಲಿ ಯಾವುದೇ ಅಡೆತಡೆ ಇಲ್ಲದೆ ಮತದಾರರ ಅಂತಿಮ ನಿರ್ಧಾರ ಪ್ರಕಟಿಸುವ ಮತ ಎಣಿಕೆ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಅದಕ್ಕೂ ಮುನ್ನ ಮತ ಎಣಿಕೆಗೆ ನಿಯುಕ್ತಿಗೊಳಿಸಿದ್ದ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಲಾಯಿತು. ಅಲ್ಲದೆ, ಕೋವಿಡ್ ಹಿನ್ನೆಲೆಯಲ್ಲಿ ಥರ್ಮಲ್ ಸ್ಕ್ರೀನಿಂಗ್ ಮೂಲಕ ಪರೀಕ್ಷೆ ಮಾಡಲಾಯಿತು. ಮಾಸ್ಕ್, ಸ್ಯಾನಿಟೈಸರ್ ಸಿಂಪಡಣೆ ಮಾಡಲಾಯಿತು.

ಬೆಳಗ್ಗೆ ಮೊದಲ ಅವಧಿಗೆ 70ಕ್ಕೂ ಹೆಚ್ಚು ಗ್ರಾಪಂಗಳ ಮತಪೆಟ್ಟಿಗೆಗಳನ್ನು ಎಣಿಕೆಗೆ ತೆಗೆದುಕೊಳ್ಳಲಾಗಿತ್ತು. ಮಧ್ಯಾಹ್ನ 11 ಗಂಟೆ ವೇಳೆಗೆ ಮತ ಎಣಿಕೆ ಮುಕ್ತಾಯವಾಗುವ ನಿರೀಕ್ಷೆ ಇತ್ತಾದರೂ ಅದು ಸಕಾಲಕ್ಕೆ ಮುಗಿಯಲಿಲ್ಲ. ಮತ ಎಣಿಕೆ ಮುಗಿಯುತ್ತಿದ್ದಂತೆ ಆಯಾ ಗ್ರಾಮ ಪಂಚಾಯಿತಿಗಳ ವಾರ್ಡ್‌ಗಳ ಜಯಗಳಿಸಿದ ಅಭ್ಯರ್ಥಿಗಳು ಹೆಸರು, ಪಡೆದ ಮತ, ಗೆಲುವಿನ ಅಂತರ ಧ್ವನಿ ವರ್ಧಕಗಳ ಮೂಲಕ ಘೋಷಣೆ ಮಾಡಲಾಯಿತು. ಹಲವು ಕಡೆ ಮತ ಎಣಿಕೆ ಪೂರ್ಣಗೊಂಡರೂ ಫಲಿತಾಂಶ ಪ್ರಕಟವಾಗಲು ನಾನಾ ಕಾರಣಗಳಿಂದ ವಿಳಂಬವಾಯಿತು. ತಡರಾತ್ರಿ ವರೆಗೂ ಮತ ಎಣಿಕೆ ಕಾರ್ಯ ನಡೆಯಿತು.

9 ಗಂಟೆ ವೇಳೆಗೆ ಒಂದೊಂದೆ ಕ್ಷೇತ್ರಗಳ ಫಲಿತಾಂಶ ಹೊರ ಬರುತ್ತಿದ್ದಂತೆ ಗೆಲುವು ಪಡೆದ ಅಭ್ಯರ್ಥಿ ಹಾಗೂ ಅವರ ಬೆಂಬಲಿಗ ಪಡೆಯ ಸಂಭ್ರಮ ಎಲ್ಲೆ ಮೀರಿತ್ತು. ಪರಸ್ಪರ ಗುಲಾಲ ಎರೆಚಿ, ಸಿಹಿ ಹಂಚಿ ಸಂತಸ ಪಟ್ಟರು. ಅಭ್ಯರ್ಥಿ ಹಾಗೂ ಪಕ್ಷ ಹೆಸರು ಘೋಷಣೆ ಕೂಗಿ ಕೇಕೇ ಹಾಕಿದರು. ಅನೇಕ ಸಂದರ್ಭದಲ್ಲಿ ಬೆಂಬಲಿಗರು ಬ್ಯಾರಿಕೇಡ್ ನುಗ್ಗಿ ಒಳಗೆ ಪ್ರವೇಶಿಸಲು ಮುಂದಾಗುತ್ತಿದ್ದರು. ಇದಕ್ಕೆ ಖಾಕಿ ಪಡೆ ಅವಕಾಶ ಕೊಡದೆ ಆಗಾಗ ಬೆತ್ತದ ರುಚಿ ತೋರಿಸುವುದು ಸಾಮಾನ್ಯವಾಗಿತ್ತು.

ವಿಜಯೋತ್ಸವದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಬೆಂಬಲಿಗರು ಪೈಪೋಟಿಗೆ ಬಿದ್ದವರಂತೆ ಘೋಷಣೆ ಕೂಗುತ್ತಿದ್ದರು. ಆದರೆ, ಬಹುತೇಕ ಅಭ್ಯರ್ಥಿಗಳು ಮಾತ್ರ ಗೆಲುವಿನ ನಂತರದಲ್ಲಿ ತಾವು ಯಾವ ಪಕ್ಷದ ಬೆಂಬಲಿಗರು ಎನ್ನುವುದನ್ನು ಬಾಯಿ ಬಿಡಲು ಹಿಂದೇಟು ಹಾಕುತ್ತಿದ್ದರು.

ಅಧ್ಯಕ್ಷರ ಮೀಸಲಾತಿ ಪ್ರಕಟಗೊಂಡ ನಂತರವಷ್ಟೇ ತಾವು ಯಾವ ಪಕ್ಷದಲ್ಲಿ ಗುರುತಿಸಿಕೊಳ್ಳಬೇಕೆಂದು ನಿರ್ಧರಿಸುತ್ತೇವೆ ಎಂದು ಖಡಕ್ ಮಾತು ಹೇಳುತ್ತಿದ್ದರು. ಸೋತ ಅಭ್ಯರ್ಥಿಗಳು, ಅವರ ಬೆಂಬಲಿಗರು ನಿರಾಸೆಯಿಂದ ಮತ ಎಣಿಕೆ ಕೇಂದ್ರದಿಂದ ವಿಮುಖರಾದರು. ಅನೇಕ ಜನರು ಕಣ್ಣೀರು ಹಾಕುತ್ತಲೇ ಬೇಸರದಿಂದ ಹೊರ ನಡೆದರು.
ಜಿಲ್ಲೆಯಲ್ಲಿ ಮತ ಎಣಿಕೆ ಸಂದರ್ಭದಲ್ಲಿ ಎಲ್ಲಿಯೂ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿಲ್ಲ. ಆದರೆ, ಸಣ್ಣಪುಟ್ಟ ಮಾತಿನ ಚಕಮಕಿ, ಪೊಲೀಸರೊಂದಿಗೆ ತರಕಾರು, ಮತ ಎಣಿಕೆ ಕುರಿತು ಆಕ್ಷೇಪ, ಮರು ಎಣಿಕೆಗೆ ಒತ್ತಾಯಿಸುವುದು ಸಾಮಾನ್ಯವಾಗಿತ್ತು. ಉಳಿದಂತೆ ಜಿಲ್ಲಾದ್ಯಂತ ಶಾಂತಿಯುತ ಮತ ಎಣಿಕೆ ಕಾರ್ಯ ನಡೆಯಿತು.

ಬೆಳಗ್ಗೆಯಿಂದಲೇ ಜಿಲ್ಲೆಯ ಬಹುತೇಕ ಮತ ಎಣಿಕೆ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಕೆ. ರಾಜೇಂದ್ರ, ಎಸ್ಪಿ ಲೋಕೇಶ ಜಗಲಾಸರ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಚುನಾವಣೆ ವೀಕ್ಷಕ ಶಶಿಧರ ಕುರೇರ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ, ಕೆಲವು ಕಡೆ ಕಟ್ಟು ನಿಟ್ಟಿನ ಸೂಚನೆ ನೀಡಿ ಮತ ಎಣಿಕೆ ಶಿಸ್ತು ಬದ್ಧವಾಗಿ ನಡೆಸುವಂತೆ ತಿಳಿಸಿದರು. ಎಲ್ಲೆಡೆ ಪೊಲೀಸರು ಸೂಕ್ತ ಬಂದೋ ಬಸ್ತ್ ಒದಗಿಸಿದ್ದರು. ಮತ ಎಣಿಕೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿಗೆ ಟೀ, ಟಿಫನ್, ಊಟ, ಕುಡಿಯುವ ನೀರು ಸೇರಿದಂತೆ ಸಕಲ ರೀತಿಯ ವ್ಯವಸ್ಥೆ ಕಲ್ಪಿಸಲಾಗಿತ್ತು.

ಹಳ್ಳಿಗಳಲ್ಲೂ ಸಂಭ್ರಮ
ನಗರ ಪ್ರದೇಶದ ಕಾಲೇಜುಗಳಲ್ಲಿ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಗೆಲುವು ಸಾಧಿಸಿದ ಅಭ್ಯರ್ಥಿಗಳು, ಅವರ ಬೆಂಬಲಿಗರು ತಮ್ಮ ಗ್ರಾಮಗಳತ್ತ ಹೆಜ್ಜೆ ಹಾಕಿದರು. ಗ್ರಾಮಕ್ಕೆ ಪ್ರವೇಶ ಮಾಡುತ್ತಲೇ ಅನೇಕ ಜನ ಅಭ್ಯರ್ಥಿಗಳು ಆರತಿ ಮಾಡಿ ಭವ್ಯವಾದ ಸ್ವಾಗತ ನೀಡಲಾಯಿತು. ಗ್ರಾಮದ ಪ್ರಮುಖ ದೇವಸ್ಥಾನಗಳಿಗೆ ತೆರಳಿ ವಿಜಯಶಾಲಿ ಅಭ್ಯರ್ಥಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ತಮ್ಮ ನಾಯಕರು, ಮುಖಂಡರು, ಕುಟುಂಬದ ಹಿರಿಯರನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಇನ್ನು ಮಾರ್ಗ ಮಧ್ಯದಲ್ಲಿಯೂ ಗುಲಾಲ್ ಎರೆಚುವುದು, ಕುಣಿದು ಕುಪ್ಪಳಿಸುವುದು, ಘೋಷಣೆ ಕೂಗುವುದು ಸಾಮಾನ್ಯವಾಗಿತ್ತು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net