ವಿದ್ಯಾರ್ಥಿಗಳ ಎದೆಯಲ್ಲಿ ಢವಢವ !

BKT 22-2
Published on

ಬಾಗಲಕೋಟೆ: ಪದವಿ ಅಂತಿಮ ವರ್ಷದ ತರಗತಿ ಆರಂಭಿಸಿ ವಾರ ಕಳೆದರೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು ಮಾತ್ರ ಇದೆ. ಕೋವಿಡ್ ಪರೀಕ್ಷೆ ಕಡ್ಡಾಯ ವಿದ್ಯಾರ್ಥಿಗಳನ್ನು ಇಬ್ಬಗೆಯ ಸಂಕಟಕ್ಕೆ ಸಿಲುಕಿಸಿದೆ.

ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಶಾಲೆ, ಕಾಲೇಜು ಸ್ತಬ್ಧಗೊಂಡಿತ್ತು. ಆನ್‌ಲೈನ್ ತರಗತಿ ಮೂಲಕ ಶಿಕ್ಷಣ ನೀಡಲಾಗುತ್ತಿತ್ತು. ಕೆಲವು ತಿಂಗಳಿನಿಂದ ಮಹಾಮಾರಿ ಕೋವಿಡ್ ಒಂದಿಷ್ಟು ಪ್ರಮಾಣ ಕಡಿಮೆಯಾಗಿದ್ದರಿಂದ ಸರ್ಕಾರ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಲೇಜುಗಳನ್ನು ಆರಂಭಿಸಿದೆ. ಆದರೆ, ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿದ್ದರಿಂದ ವಿದ್ಯಾರ್ಥಿಗಳು, ಪಾಲಕರ ಎದೆಯಲ್ಲಿ ಢವಢವ ಶುರುವಾಗಿದೆ.

ಪರೀಕ್ಷೆ ವರದಿ ವಿಳಂಬ
ಜಿಲ್ಲೆಯಲ್ಲಿ ಖಾಸಗಿ, ಸರ್ಕಾರಿ ಸೇರಿ 80 ಪದವಿ ಕಾಲೇಜಿನಲ್ಲಿ 1560 ವಿದ್ಯಾರ್ಥಿಗಳು ಅಂತಿಮ ವರ್ಷದಲ್ಲಿ ಓದುತ್ತಿದ್ದಾರೆ. ಕಾಲೇಜು ಆರಂಭದ ಶುಭ ಸುದ್ದಿಯಿಂದ ವಿದ್ಯಾರ್ಥಿಗಳು ಉತ್ಸಾಹ ತೋರಿದ್ದರು. ಕೋವಿಡ್ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು. ನೆಗೆಟಿವ್ ಬಂದರೆ ಮಾತ್ರ ಕಾಲೇಜು ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿ ಪರೀಕ್ಷೆಗೆ ಒಳಾಗುತ್ತಿದ್ದಾರೆ. ನ.17 ರಿಂದ ಈವರೆಗೆ ಜಿಲ್ಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಸ್ವಾೃಬ್ ಟೆಸ್ಟ್ ನೀಡಿದ್ದಾರೆ. ಆದರೆ, ವಾರ ಕಳೆದರೂ ವರದಿ ಮಾತ್ರ ಬಂದಿಲ್ಲ. ಕೋವಿಡ್ ಪರೀಕ್ಷೆ ವರದಿ ವಿಳಂಬಕ್ಕೆ ವಿದ್ಯಾರ್ಥಿಗಳು ಹೈರಾಣ ಆಗಿ ಹೋಗಿದ್ದಾರೆ. ಅಲ್ಲದೆ, ಟೆಸ್ಟ್ ವರದಿ ಬಗ್ಗೆ ಏನಾಗುತ್ತದೆ ಎನ್ನುವ ಭಯದಲ್ಲಿ ಕಾಲ ಕಳೆಯುವಂತಾಗಿದೆ.

ಹಿಂದೇಟು, ಬೇಕಿದೆ ಜಾಗೃತಿ
ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಸರ್ಕಾರ ಕರೊನಾ ಪರೀಕ್ಷೆ ಮಾಡಿಸಲು ತಿಳಿಸಿದೆ. ಆದರೆ, ಹೆಮ್ಮಾರಿ ಬಗ್ಗೆ ಸಾರ್ವಜನಿಕ ವಲಯದಲ್ಲಿರುವ ಆತಂಕ, ಭಯ ಮಾತ್ರ ಕಡಿಮೆಯಾಗಿಲ್ಲ. ವರದಿ ಪಾಸಿಟಿವ್ ಬಂದರೆ ಮುಂದಿನ ಗತಿ ಏನು? ಎನ್ನುವ ಭಯದಿಂದ ಅನೇಕ ಪಾಲಕರು ತಮ್ಮ ಮಕ್ಕಳನ್ನು ಕರೊನಾ ಪರೀಕ್ಷೆಗೆ ಒಳಪಡಿಸಲು ಹಿಂದೇಟು ಹಾಕುತ್ತಿದ್ದಾರೆ. ಒಂದು ವರ್ಷ ಬೇಕಿದ್ದರೆ ಶೈಕ್ಷಣಿಕವಾಗಿ ಹಿಂದುಳಿದರು ಪರವಾಗಿಲ್ಲ. ಇದರ ಗೊಡವೆ ಬೇಡ ಎನ್ನುವ ನಿರ್ಲಕ್ಷೃ ಧೋರಣೆ ಬಹುತೇಕ ಪಾಲಕರಲ್ಲಿ ಮನೆ ಮಾಡಿದೆ. ಸರ್ಕಾರ ಸಂಬಂಧಪಟ್ಟ ಇಲಾಖೆ ಮೂಲಕ ಜಾಗೃತಿ ಮೂಡಿಸಿ ಕೋವಿಡ್ ಬಗ್ಗೆ ತಿಳಿವಳಿಕೆ ಮೂಡಿಸಬೇಕಿದೆ. ಇಲ್ಲವಾದಲ್ಲಿ ಅನೇಕ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕತ್ತಲು ಆವರಿಸುವುದು ನಿಶ್ಚಿತ.

ಕೋವಿಡ್ ಪರೀಕ್ಷೆಗೆ ಒಳಗಾದರೂ ವರದಿ ವಿಳಂಬದಿಂದ ವಿದ್ಯಾರ್ಥಿಗಳು, ಪಾಲಕರು ಬೇಸರಗೊಂಡಿದ್ದಾರೆ. ಕೆಲವು ಪಾಲಕರು ಭಯದಿಂದ ತಮ್ಮ ಮಕ್ಕಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು, ಕಾಲೇಜಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕಾಲೇಜುಗಳಿಗೆ ವಿದ್ಯಾರ್ಥಿಗಳು ಆಗಮಿಸಲು ಸಾಧ್ಯವಾಗುತ್ತಿಲ್ಲ. ಒಂದು ವಾರದಿಂದ ಶೇ.5 ಹಾಜರಾತಿ ಕಂಡು ಬಂದಿಲ್ಲ. ಕೆಲವು ಕಾಲೇಜುಗಳಲ್ಲಿ ಶೂನ್ಯ ದಾಖಲಾತಿ ಇದೆ.
- ಡಾ.ಅರುಣಕುಮಾರ ಗಾಳಿ, ಪದವಿ ಕಾಲೇಜುಗಳ ಜಿಲ್ಲಾ ನೋಡಲ್ ಅಧಿಕಾರಿ

ಕೋವಿಡ್ ಪರೀಕ್ಷೆ ಬಗ್ಗೆ ಯಾರು ಭಯಪಡಬಾರದು. ರ‌್ಯಾಪಿಡ್ ಮಾಡಬಾರದು ಅಂತ ಸರ್ಕಾರ ಸೂಚನೆ ನೀಡಿದ್ದರಿಂದ ಆರ್‌ಪಿಸಿಆರ್ ಪರೀಕ್ಷೆ ಮಾಡಲಾಗುತ್ತಿದೆ. ಹೀಗಾಗಿ ವರದಿ ವಿಳಂಬವಾಗಿದೆ. ಬೇಗನೆ ವರದಿ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು. ಈವರೆಗೆ ಯಾವುದೇ ವಿದ್ಯಾರ್ಥಿಗಳಿಗೂ ಕೋವಿಡ್ ಪಾಸಿಟಿವ್ ವರದಿ ಬಂದಿಲ್ಲ. ಸುಳ್ಳು ಸುದ್ದಿಗಳನ್ನು ನಂಬಬಾರದು.
- ಡಾ.ಎ.ಎನ್. ದೇಸಾಯಿ, ಡಿಎಚ್‌ಒ ಬಾಗಲಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net