

ಅಶೋಕ ಶೆಟ್ಟರ
ಬಾಗಲಕೋಟೆ: ಇವರು ಆಸ್ತಿ ಹಂಚಿಕೆ, ಮಾರಾಟ, ಖರೀದಿ ಯಾವುದು ಮಾಡುವಂತಿಲ್ಲ. ಮಳೆಗೆ ಸಿಕ್ಕು ಮನೆ ಬಿದ್ದಿದ್ರು ಪರಿಹಾರವೂ ಇಲ್ಲ. ರಿಪೇರಿ ಮಾಡಿಸಲು ಪರವಾನಗಿಯೂ ಸಿಗ್ತಿಲ್ಲ. ಸರ್ಕಾರದ ಸಾಲ ಸೌಲಭ್ಯಖಿ ಮರೀಚಿಕೆ…!
ಐದಾರು ವರ್ಷಗಳಿಂದ ಹೀಗೆಯೇ ಸಾಗಿ ಬಂದಿರುವ ಅವರ ಬದುಕು ಅತಂತ್ರವಾಗಿದೆ. ಅಷ್ಟಕ್ಕೂ ಇವರೆಲ್ಲ ತಮ್ಮದಲ್ಲದ ತಪ್ಪಿಗೆ ಕಷ್ಟದ ಸರಮಾಲೆಗೆ ಹೊತ್ತು ಪರದಾಡುತ್ತಿದ್ದಾರೆ ಎನ್ನುವುದು ವಿಪರ್ಯಾಸ.
ಹೌದು, ಇದು ಬಾಗಲಕೋಟೆ ತಾಲೂಕಿನ ಗೋವಿಂದಕೊಪ್ಪ ಗ್ರಾಮಸ್ಥರು ಕಳೆದ ಆರು ವರ್ಷಗಳಿಂದ ಅನುಭವಿಸುತ್ತಿರುವ ನರಕಯಾತನೆ.
ಕಾರಣ ಈ ಊರಲ್ಲಿ ಮಳೆ ಬಂದು ಮನೆ ಬಿದ್ದಿದ್ದರೂ ಅದನ್ನು ದುರಸ್ತಿ ಮಾಡಿಸುವಂತಿಲ್ಲ. ಬಿದ್ದ ಮನೆಯಲ್ಲಿಯೇ ವಾಸ ಮಾಡಬೇಕು. ಇಲ್ಲವಾದರೆ ಮನೆ ತೊರೆದು ಎಲ್ಲಿಗಾದರೂ ಹೋಗಬೇಕಿದೆ. ಊರಲ್ಲಿ ಮೂಲ ಸೌಲಭ್ಯ ಕೇಳಲೇಬೇಡಿ ಎನ್ನುವ ವಾತಾವರಣ ಇದೆ. ಇದಕ್ಕೆಲ್ಲ ಕಾರಣ ಆಲಮಟ್ಟಿ ಜಲಾಶಯಕ್ಕೆ ಮುಳುಗಡೆ ಆಗಲಿರುವ ಗ್ರಾಮ ಎನ್ನುವ ಹಣೆಪಟ್ಟಿ.
ಆಲಮಟ್ಟಿ ಜಲಾಶಯಮಟ್ಟ 524.256 ಮೀಟರ್‌ಗೆ ಎತ್ತರಿಸಿದಾಗ ಈ ಗ್ರಾಮ ಹಾಗೂ ಜಮೀನುಗಳು ಮುಳುಗಡೆ ಆಗುತ್ತವೆ. ಹೀಗಾಗಿ ಕಳೆದ 6 ವರ್ಷಗಳ ಹಿಂದೆ ಗ್ರಾಮದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭ ಆಗಿತ್ತು. ಆಗಲೇ ಗ್ರಾಮಸ್ಥರ ಆಸ್ತಿಯ ಉತಾರದಲ್ಲಿ (ಜಮೀನು ಪತ್ರ) ಯುಕೆಪಿಯಡಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಇದೆ ಎಂದು ಸರ್ಕಾರ ನಮೂದು ಮಾಡಿದೆ.
2011 ರಲ್ಲಿ ಈ ಪ್ರಕ್ರಿಯೆ ಆರಂಭವಾಗಿದ್ದು, 2014ರಲ್ಲಿ ಸ್ವಾಧೀನದ ನೋಟಿಸ್ ನೀಡಿದ್ದರು. ಆಗಲೇ ರೈತರು, ಗ್ರಾಮಸ್ಥರ ಆಸ್ತಿ ಉತಾರದಲ್ಲಿ ಮುಳುಗಡೆ ಗ್ರಾಮ, ಯುಕೆಪಿ ಯೋಜನೆ ಎಂದು ನಮೂದಿಸಿ ಬಿಟ್ಟಿದ್ದಾರೆ. ಆದರೆ, ಜೆಎಂಸಿವರೆಗೂ ಸ್ವಾಧೀನ ಪ್ರಕ್ರಿಯೆ ನಡೆದು ಬಳಿಕ ಮುಂದಿನ ಪ್ರಕ್ರಿಯೆ ಸ್ಥಗಿತವಾಗಿದೆ. ಇದರಿಂದ ಸಂತ್ರಸ್ತರಿಗೆ ಯುಕೆಪಿಯಡಿ ಪರಿಹಾರ ಸಿಕ್ಕಿಲ್ಲ.
ಜತೆಗೆ ಜಮೀನುಗಳ ಉತಾರದಲ್ಲಿ ಯುಕೆಪಿ ಸ್ವಾಧೀನ ಪ್ರಕ್ರಿಯೆ ನಮೂದುಗೊಂಡ ಕಾರಣ ಯಾವುದೇ ಬ್ಯಾಂಕ್‌ನಲ್ಲಿ ರೈತರಿಗೆ ಸಾಲ ಸೌಲಭ್ಯ ಸಿಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಇದಲ್ಲದೆ, ಗ್ರಾಮವೂ ಸಂಪೂರ್ಣ ಸ್ಥಳಾಂತರ ಆಗಬೇಕಿದ್ದು, ಅದು ಕೂಡ ಕೈಗೊಂಡಿಲ್ಲ. ಆದರೆ, ಬಿದ್ದ ಮನೆಗಳನ್ನು ರಿಪೇರಿ ಮಾಡಿಸಬೇಕು. ಜತೆಗೆ ಹೊಸ ಮನೆ ಕಟ್ಟಿಸಬೇಕು ಎಂದರೂ ಯುಕೆಪಿ ಯೋಜನೆ ಅಡ್ಡ ಬರುತ್ತಿದೆ. ಇದರಿಂದ ಸಾಕಷ್ಟು ತೊಂದರೆಗೆ ಒಳಗಾಗಿರುವ ಗೋವಿಂದಕೊಪ್ಪ ಜನರು ಯುಕೆಪಿ ಯೋಜನೆಯಡಿ ನಮಗೆ ಪರಿಹಾರವನ್ನಾದರೂ ಕೊಡಿ ಇಲ್ಲವಾದಲ್ಲಿ ನಮ್ಮ ಜಮೀನುಗಳು, ಮನೆಗಳ ಉತಾರದಲ್ಲಿ ಸ್ವಾಧೀನ ಪ್ರಕ್ರಿಯೆ ಬರಹವನ್ನಾದರೂ ತೆಗೆದು ಅನುಕೂಲ ಮಾಡಿಕೊಡಿ ಅಂತಾ ಗೋಳು ತೋಡಿಕೊಳ್ಳುತ್ತಿದ್ದಾರೆ.
2014ರಲ್ಲೇ ಭೂಸ್ವಾಧೀನ
2014 ರಲ್ಲಿ ಅಂದಿನ ಸರ್ಕಾರ ಕೈಗೊಂಡ ಭೂಸ್ವಾಧೀನ ಪ್ರಕ್ರಿಯೆ ವೇಳೆ ಬಾಗಲಕೋಟೆ ತಾಲೂಕಿನ ಗೋವಿಂದಕೊಪ್ಪ ಗ್ರಾಮದ 400ಕ್ಕೂ ಹೆಚ್ಚು ಎಕರೆ ಜಮೀನು ಸ್ವಾಧೀನ ಪ್ರಕ್ರಿಯೆಗೆ ಒಳಪಡಿಸಲಾಗಿದೆ. 300 ಕ್ಕೂ ಹೆಚ್ಚು ಮನೆಗಳನ್ನು ಸ್ಥಳಾಂತರಕ್ಕೆ ಒಪ್ಪಿಗೆ ನೀಡಿದೆ. ಆದರೆ, ಕಳೆದ ಆರು ವರ್ಷಗಳಿಂದ ಸ್ವಾಧೀನ ಪ್ರಕ್ರಿಯೆಯನ್ನೆ ಸರ್ಕಾರ ಮಾಡಿಲ್ಲ. ಇದರಿಂದ ರೈತರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಮನೆಯಲ್ಲಿ ಸಹೋದರರಿಗೆ ಆಸ್ತಿ ಪಾಲುವಾಟು ಮಾಡಲು ಆಗುತ್ತಿಲ್ಲ. ಆಸ್ತಿ ಮಾರಾಟ, ಖರೀದಿ ಮಾಡಲು ಆಗುತ್ತಿಲ್ಲ. ಎಲ್ಲ ಜಮೀನುಗಳು ತೋಟಗಾರಿಕೆ ಬೆಳೆ ಹೊಂದಿದ್ದು ಅವುಗಳನ್ನು ಅಭಿವೃದ್ಧಿಪಡಿಸಲು, ಹಾಳಾಗಿದ್ದವುಗಳನ್ನು ತೆಗೆದು ಹೊಸದಾಗಿ ಬೆಳೆ ಮಾಡಲು ಆಗುತ್ತಿಲ್ಲ. ಎಲ್ಲದಕ್ಕೂ ಉತಾರದಲ್ಲಿ ಸಮೂದಿಸಿರುವ ಆ ಅಂಶ ಅಡ್ಡಿ ಬರುತ್ತಿದೆ. ಇನ್ನು ನೆರೆ, ಅತಿವೃಷ್ಟಿಯಿಂದ ಗ್ರಾಮದಲ್ಲಿ ಅನೇಕ ಮನೆಗಳು ಬಿದ್ದಿದ್ದರಿಂದ ಇದು ಮುಳುಗಡೆ ಆಗಲಿರುವ ಗ್ರಾಮ ಅಂತ ಪರಿಹಾರವನ್ನು ಕೊಟ್ಟಿಲ್ಲ. ದುರಸ್ತಿ ಮಾಡಿಸಿಕೊಳ್ಳಬೇಕೆಂದರೆ ಪಂಚಾಯಿತಿಯಿಂದ ಪರವಾನಗಿ ಸಿಗುತ್ತಿಲ್ಲ. ಪಂಚಾಯಿತಿಯಲ್ಲಿ ಇರುವ ಆಸ್ತಿ ರಜಿಸ್ಟರ್ ಬುಕ್ ಸಹ ಯುಕೆಪಿ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ. ಇತ್ತ ಗ್ರಾಮ ಮುಳುಗಡೆಯ ಭೂಸ್ವಾಧೀನವೂ ಆಗದೆ ಪರಿಹಾರವೂ ಬರುತ್ತಿಲ್ಲ. ಇದೆಲ್ಲದರಿಂದ ನಮ್ಮ ಗ್ರಾಮಸ್ಥರು ಬದುಕು ಅಯೋಮಯ, ಅತಂತ್ರವಾಗಿ ಹೋಗಿದೆ ಎಂದು ಗ್ರಾಮಸ್ಥರಾದ ಮಾರುತಿ ತೋಟದ, ರಮೇಶ ಎನ್ನುವವರು ನೋವು ಹೊರಹಾಕುತ್ತಾರೆ.
ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದರು
ಇನ್ನು ಇದೇ ವಿಚಾರವಾಗಿ ಕಳೆದ ಐದು ವರ್ಷಗಳಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವುದೇ ಸ್ಪಂದನೆ ನೀಡುತ್ತಿಲ್ಲ ಎನ್ನುವ ಆಕ್ರೋಶ ಅಲ್ಲಿನ ಪ್ರತಿಯೊಬ್ಬರಲ್ಲೂ ಮನೆ ಮಾಡಿದೆ. ಇನ್ನು ಕ್ಷೇತ್ರದ ಶಾಸಕ ಮುರುಗೇಶ ನಿರಾಣಿ ಅವರಿಗೆ ಅನೇಕ ಸಲ ಮನವಿ ಮಾಡಿಕೊಂಡರೂ ಅವರು ಸ್ಪಂದಿಸಿಲ್ಲ ಎನ್ನುವುದು ಅಲ್ಲಿನ ಜನರ ಒಕ್ಕೂರಲ ಕೂಗು ಆಗಿದೆ. ಇದೇ ಕಾರಣಕ್ಕೆ ಕಳೆದ ಲೋಕಸಭೆ ಚುನಾವಣೆ ಹಾಗೂ ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಘೋಷಿಸಿ ಆ ಬಗ್ಗೆ ಬ್ಯಾನರ್ ಸಹ ಹಾಕಿದ್ದರು. ಆದರೆ, ಜಿಲ್ಲೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ನಿಮ್ಮ ತೊಂದರೆ ನಿವಾರಿಸುತ್ತೇವೆ ಎಂದು ಭರವಸೆ ನೀಡಿ ಮತದಾನ ಮಾಡಿಸುವಲ್ಲಿ ಮನವೊಲಿಸಿದ್ದರು. ಚುನಾವಣೆ ಮುಗಿದ ಬಳಿಕ ಯಾರೂ ಮಾತನಾಡುತ್ತಿಲ್ಲ. ಇದರಿಂದ ನಮಗೆ ಅಧಿಕಾರಿಗಳ ನಡೆ ಬಗ್ಗೆ ಸಾಕಾಗಿ ಹೋಗಿದೆ ಎಂದು ಅಲ್ಲಿನ ಜನರು ಹೇಳುತ್ತಾರೆ.
ಯುಕೆಪಿ ಅಡಿಯಲ್ಲಿ ನಮ್ಮ ಗ್ರಾಮ ಸ್ವಾಧೀನ ಪಡಿಸಿಕೊಳ್ಳುವುದಾಗಿ ಆರು ವರ್ಷಗಳ ಹಿಂದೆಯೇ ಉತಾರನಲ್ಲಿ ನಮೂದು ಮಾಡಿದ್ದಾರೆ. ಈವರೆಗೂ ಯಾವುದೇ ಪ್ರಕ್ರಿಯೆ ನಡೆಸಿಲ್ಲ. ಇದರಿಂದ ನಾವೆಲ್ಲ ತುಂಬ ತೊಂದರೆ ಅನುಭವಿಸುತ್ತಿದ್ದೇವೆ. ಸುಮ್ಮನೆ ನಮ್ಮ ಬದುಕಿನ ಜೊತೆ ಚೆಲ್ಲಾಟ ಆಡಬೇಡಿ.
ಮಾರುತಿ ತೋಟದ ( ಗ್ರಾಮಸ್ಥ) ರಮೇಶ ಗ್ರಾಮ ಪಂಚಾಯಿತಿ ಸದಸ್ಯ ಗೋವಿಂದಕೊಪ್ಪ
ಜಮೀನುಗಳ ದರ ನಿಗದಿ ಚರ್ಚೆಯಲ್ಲಿಯೇ ಸಮಯ ಕಳೆಯಿತು. ಹೀಗಾಗಿ ನಾವು ಆಯ್ಕೆ ಮಾಡಿಕೊಂಡ ಜಮೀನುಗಳು ಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತವನ್ನು ತಲುಪಲಿಲ್ಲ. ಅದಕ್ಕಾಗಿ ಎಲ್ಲ ಪ್ರಕರಣಗಳು ಅಸಿಂಧು ಆಗಿವೆ. ಅದಕ್ಕಾಗಿ ಹೊಸದಾಗಿ ಭೂಸ್ವಾಧೀನ ಪ್ರಕ್ರಿಯೆ ಹೊರಡಿಸುವಂತಹ ಪ್ರಾಥಮಿಕ ಅಧಿಸೂಚನೆ ಹೊರಡಿಸಬೇಕಿದೆ. ಸರ್ಕಾರ ಒಪ್ಪಿಗೆ ನೀಡಿದ ತಕ್ಷಣವೇ ಕಾರ್ಯ ಆರಂಭ ಮಾಡುತ್ತೇವೆ. ಜಮೀನುಗಳನ್ನು ಪರಭಾರೆ ಮಾಡಬಾರದು ಎಂದಿರುವ ನಮೂದನ್ನು ತೆಗೆದು ಸರಿಪಡಿಸುತ್ತೇವೆ.
ಮಹಾದೇವ ಮುರಗಿ ಅಪರ ಜಿಲ್ಲಾಧಿಕಾರಿ, ಬಾಗಲಕೋಟೆ