ವರುಣಾಘಾತಕ್ಕೆ ಕೋಟೆ ನಾಡು ಸಂಪೂರ್ಣ ತತ್ತರ !

BKT 11-3
Published on

ಬಾಗಲಕೋಟೆ: ಪ್ರವಾಹ ಮತ್ತು ಮಳೆ ಈ ಎರಡು ಶಬ್ದಗಳು ಕೇಳಿದರೇನೇ ಬಾಗಲಕೋಟೆ ಜನ ಹೌಹಾರುತ್ತಿದ್ದಾರೆ, ನಿದ್ದೆಯಲ್ಲೂ ಬೆಚ್ಚಿಬೀಳುತ್ತಿದ್ದಾರೆ. ಕಾರಣ ಎರಡ್ಮೂರು ತಿಂಗಳಿಂದ ಭೀಕರ ಪ್ರವಾಹ ಮತ್ತು ಭಯಾನಕ ಮಳೆಯಿಂದ ಅನುಭವಿಸಿದ ಹಾನಿ, ಹಾಕಿದ ಕಣ್ಣೀರಿಗೆ ಲೆಕ್ಕವಿಲ್ಲವಾಗಿದೆ.

ಈಗ ಶನಿವಾರ ರಾತ್ರಿ ಜಿಲ್ಲಾದ್ಯಂತ ಸುರಿದ ರಕ್ಕಸ ಮಳೆಗೆ ಮತ್ತೊಮ್ಮೆ ಕೋಟೆನಾಡು ದಿಕ್ಕೆಟ್ಟು ಹೋಗಿದೆ. ಮನೆಗಳಿಗೆ ನುಗ್ಗಿದ್ದ ನೀರು, ಬಿದ್ದ ಮನೆಗಳು, ಹಾಳಾದ ಬೆಳೆ, ಕೊಚ್ಚಿ ಹೋದ ರೈತ, ಬಂದಾದ ರಸ್ತೆ ಸಂಪರ್ಕ, ದೇವಸ್ಥಾನಕ್ಕೂ ಎದುರಾದ ಜಲದಿಗ್ಭಂಧನ, ಹೀಗೆ ಸಾಲು ಸಾಲು ಸಂಕಷ್ಟವನ್ನು ವರುಣ ತಂದೊಡ್ಡಿದ್ದಾನೆ.

ನದಿಯಲ್ಲಿ ಕೊಚ್ಚಿಹೋದ ರೈತ
ಬಾದಾಮಿ ತಾಲೂಕಿನ ಗೋವನಕೊಪ್ಪ ಕಿರುಸೇತುವೆಯಲ್ಲಿ ಪಕ್ಕದ ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ರೈತ ಬಾಪುಗೌಡ(ವೆಂಕನಗೌಡ) ಸಾಲಿಗೌಡ್ರ(40) ಕೊಚ್ಚಿ ಹೋಗಿದ್ದು, ಆತನಿಗಾಗಿ ಸಂಜೆವರೆಗೂ ನಡೆಸಿದ ಶೋಧಕಾರ್ಯ ಫಲನೀಡಿಲ್ಲ. ರಾತ್ರಿಯಾಗಿದ್ದರಿಂದ ರಕ್ಷಣಾ ಕಾರ್ಯ ಸ್ಥಗಿತಗೊಳಿಸಲಾಗಿದೆ ಎಂದು ಬಾದಾಮಿ ತಹಸೀಲ್ದಾರ್ ಸುಹಾಸ್ ಇಂಗಳೇ ವಿಜಯವಾಣಿಗೆ ತಿಳಿಸಿದ್ದಾರೆ.

ವೆಂಕನಗೌಡ ಅವರು ಭಾನುವಾರ ಬೆಳಗ್ಗೆ ಕೊಣ್ಣೂರ ಗ್ರಾಮದ ತನ್ನ ಜಮೀನಿನಲ್ಲಿ ತೆಂಗಿನಕಾಯಿ ತೆಗೆದುಕೊಂಡು ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮಕ್ಕೆ ಬಂದು ಮಾರಾಟ ಮಾಡಿದ್ದರು. ಮಧ್ಯಾಹ್ನ ವಾಪಸ್ಸು ಕೊಣ್ಣೂರಗೆ ಹೋಗವ ವೇಳೆ ಕಿರುಸೇತುವೆಯಲ್ಲಿ ನೀರಿನ ರಭಸ ಹೆಚ್ಚಾಗಿ ನದಿಯಲ್ಲಿ ಕೊಚ್ಚಿಹೋಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಾದಾಮಿ ತಹಸೀಲ್ದಾರ್ ಸುಹಾಸ್ ಇಂಗಳೆ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದ್ದರು. ಆದರೆ, ನೀರಿನ ಸೆಳವು ಜಾಸ್ತಿ ಇದ್ದು, ಸಂಜೆ ವರೆಗೂ ರೈತನ ಸುಳಿವು ದೊರೆತಿಲ್ಲ. ಸೂರ್ಯಾಸ್ತ ಆಗಿದ್ದರಿಂದ ಶೋಧಕಾರ್ಯವನ್ನು ಸೋಮವಾರ ಬೆಳಗ್ಗೆ ಮುಂದುವರೆಸಲು ನಿರ್ಧರಿಸಿ ವಾಪಸ್ಸಾಗಿದ್ದಾರೆ.

ಜಿಲ್ಲಾದ್ಯಂತ ವರುಣನ ಆರ್ಭಟದಿಂದಾಗಿ ಸಾಕಷ್ಟು ಹಾನಿ ಮತ್ತು ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕಳೆದ ಎರಡು ತಿಂಗಳಿಂದ ಇದು ಹೀಗೆಯೇ ಮುಂದುವರೆದಿದ್ದು, ರೈತ ಸಮುದಾಯಕ್ಕೆ ದಿಕ್ಕುತೋಚದಂತೆ ಮಾಡಿದೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net