ದೊರೆಯದ ಸರ್ಕಾರದ ಪರಿಹಾರ ಧನ

BKT NEWS 14-3
Published on

ಬಾಗಲಕೋಟೆ: ಪ್ರವಾಹ ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿ ತಲೆ ಮೇಲೆ ಕಲ್ಲು ಹೊತ್ತು ವಿನೂತನವಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ತಾಲೂಕಿನ ಹಳ್ಳೂರ ಗ್ರಾಮದ ರೈತ ರಾಮಣ್ಣ ಸುನಗದ ಮತ್ತು ಅಧಿಕಾರಿಗಳ ನಡುವೆ ಶುಕ್ರವಾರ ಮಾತಿನ ಚಕಮಕಿ ನಡೆಯಿತು.

ಹಳ್ಳೂರು ಗ್ರಾಮದಲ್ಲಿರುವ ತಮ್ಮ ಮನೆ ಮೇಲ್ಛಾವಣೆ ಕುಸಿದು ಶೇ.90 ಹಾನಿಯಾಗಿದೆ. ಇದುವರೆಗೂ ಬಿಡಿಗಾಸು ಪರಿಹಾರ ಕೊಟ್ಟಿಲ್ಲ. ಭಾಗಶಃ ಹಾನಿಯಾದ ಮನೆಗಳಿಗೆ ಪರಿಹಾರ ನೀಡಿದ್ದಾರೆ. ನನಗೆ ಸ್ಥಳೀಯ ಮಟ್ಟದ ಅಧಿಕಾರಿಗಳು ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ರೈತ ರಾಮಣ್ಣ ಸುನಗದ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಲು ಮುಂದಾದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರುಗಿ, ತಹಸೀಲ್ದಾರ್ ಗುರುಬಸಯ್ಯ ಹಿರೇಮಠ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದರು. ಆದರೂ ಪ್ರತಿಭಟನೆ ನಡೆಸಲು ರಾಮಣ್ಣ ಸುನಗದ ಮುಂದಾಗಿದ್ದರಿಂದ ಡಿವೈಎಸ್‌ಪಿ ರವೀಂದ್ರ ಶಿರೂರ ಅವರನ್ನು ಕೆರಳಿಸಿತು. ಮನವಿ ಆಲಿಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ ಮೇಲೆಯೂ ಪ್ರತಿಭಟನೆ ಮಾಡುವುದು ಸರಿಯಲ್ಲ. ನಿಮ್ಮನ್ನು ಬಂಧಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಕೆಲ ಸಮಯ ಮಾತಿನ ಚಕಮಕಿ ಬಳಿಕ ರಾಮಣ್ಣ ಸುನಗದ ಅವರನ್ನು ಅಧಿಕಾರಿಗಳು ಸಮಾಧಾನ ಪಡಿಸಿದರು.

ಮನೆ ಇಲ್ಲದ ಪರಿಣಾಮ ಗ್ರಾಮದ ಹೊರಗೆ ಇರುವ ತೋಟದ ಮನೆಯಲ್ಲಿ ವಾಸಿಸುತ್ತಿದ್ದೇನೆ. ಅಧಿಕಾರಿಗಳು ಪರಿಶೀಲನೆ ನಂತರವೂ ಪರಿಹಾರ ಒದಗಿಸದೆ ಹೋದಲ್ಲಿ ಜಿಲ್ಲಾಡಳಿತ ಭವನದ ಎದುರು ಕಲ್ಲು ಹೊತ್ತು ನಿಂತು ಪ್ರತಿಭಟನೆ ನಡೆಸಲಾಗುವುದು.
- ರಾಮಣ್ಣ ಸುನಗದ ಹಳ್ಳೂರು ಗ್ರಾಮದ ರೈತ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net