6 ರಂದು ಕೇಂದ್ರ ಅಧ್ಯಯನ ತಂಡ ಭೇಟಿ

BKT 21
Published on

ಬಾಗಲಕೋಟೆ: ಪ್ರಸಕ್ತ ಸಾಲಿಗೆ ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿ ಮತ್ತು ಪ್ರವಾಹದಿಂದಾದ ಹಾನಿ ಪರಿಶೀಲನೆಗೆ ಸೆ.5 ರಂದು ಅಂತರ ಸಚಿವಾಲಯದ ಕೇಂದ್ರ ಅಧ್ಯಯನ ತಂಡ ಜಿಲ್ಲೆಗೆ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಹೇಳಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಲಶಕ್ತಿ ಸಚಿವಾಲಯದ ಸೂಪರಿಂಟೆಂಡಿಂಗ್ ಇಂಜಿನಿಯರ್ ಗುರು ಪ್ರಸಾದ ನೇತೃತ್ವದ ತಂಡ ಸೆ.5 ರಂದು ರಾತ್ರಿ ಬಾಗಲಕೋಟೆಗೆ ಆಗಮಿಸಲಿದೆ. ಸೆ.6 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಜಮಖಂಡಿ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ತಾಲೂಕುಗಳಲ್ಲಿ ಪ್ರವಾಹದಿಂದಾದ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದರು.

ಪ್ರವಾಹದಿಂದ ಹಾನಿಗೊಳಗಾದ ರಸ್ತೆ, ಸೇತುವೆ, ಮನೆ, ಶಾಲೆ ಹಾಗೂ ಅಂಗನವಾಡಿ ಕೇಂದ್ರ, ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ವೀಕ್ಷಿಸಿ ಮಾಹಿತಿ ಪಡೆಯಲಿದ್ದಾರೆ. ಈ ನಿಟ್ಟಿನಲ್ಲಿ ಪ್ರವಾಹದಿಂದ ಉಂಟಾದ ಒಟ್ಟಾರೆ ಹಾನಿ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಬೇಕಾಗಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾನಿ ವರದಿಯನ್ನು ಸಿದ್ಧಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಅಂತರ ಸಚಿವಾಲಯದ ಕೇಂದ್ರ ತಂಡದಲ್ಲಿ ಕೇಂದ್ರ ಹಣಕಾಸು ಸಚಿವಾಲಯದ ಉಪ ಕಾರ್ಯದರ್ಶಿ ಮಹೇಶ ಕುಮಾರ ಹಾಗೂ ಸ್ಟೇಟ್ ರೆವಿನ್ಯೂ ಡಿಎಂ ಕನ್ಸಲ್‌ಟಂಟ್ ಶ್ರೀನಿವಾರ ರೆಡ್ಡಿ ಇರಲಿದ್ದಾರೆ ಎಂದು ತಿಳಿಸಿದರು.

ಜಿಪಂ ಸಿಇಒ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಉಪವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಲ್ಲೊಳ್ಳಿ, ಜಂಟಿ ಕೃಷಿ ನಿರ್ದೇಶಕಿ ಡಾ.ಚೇತನಾ ಪಾಟೀಲ, ತೋಟಗಾರಿಕೆ ಉಪನಿರ್ದೇಶಕ ರಾಹುಲಕುಮಾರಿ ಬಾವಿದಡ್ಡಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ ಬಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಸೇರಿ ತಹಸೀಲ್ದಾರರು ಇತರರಿದ್ದರು.

ಪ್ರತಿ ಬುಧವಾರ ಲಸಿಕಾ ಮೇಳ
ಕೋವಿಡ್-3 ಅಲೆ ತಪ್ಪಿಸುವ ನಿಟ್ಟಿನಲ್ಲಿ ಲಸಿಕಾ ಕಾರ್ಯ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರತಿ ಬುಧವಾರ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈಗಾಗಲೇ ಮೊದಲನೇ ಡೋಸ್ ಪಡೆದವರು ಹಾಗೂ ಯಾವುದೇ ಡೋಸ್ ಪಡೆಯದವರು ತಪ್ಪದೆ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಬೇಕು. ಕೋವಿಡ್ ತಡೆಗಟ್ಟಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net