ರಾಜ್ಯಕ್ಕೆ 63 ಸಾವಿರ ಕೋಟಿ ರೂ. ಆದಾಯ ಖೋತಾ

Govind karjol,
Published on

ಬಾಗಲಕೋಟೆ: ಕಳೆದ ಎರಡು ವರ್ಷದಲ್ಲಿ ಪ್ರವಾಹ, ಕೋವಿಡ್‌ನಂತಹ ಸಂಕಷ್ಟದಿಂದ ರಾಜ್ಯದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಸಾವಿರಾರು ಕೋಟಿ ರೂ. ಆದಾಯ ಬರಲಿಲ್ಲ. ಇದರಿಂದ ನಾವು ಅಂದುಕೊಂಡಿದ್ದ ಕನಸು ಸಾಕಾರಗೊಂಡಿಲ್ಲ. ಮುಂದಿನ ತಿಂಗಳು ಬಜೆಟ್ ಮಂಡಿಸಲಿದ್ದೇವೆ. ತನ್ಮೂಲಕ ಬದ್ಧತೆಯಿಂದ ಅಭಿವೃದ್ಧಿ ಮಾಡುತ್ತೇವೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರಲ್ಲಿ ಪ್ರವಾಹ, ಮಳೆಯಿಂದಾಗಿ 35 ಸಾವಿರ ಕೋಟಿ ರೂ., 2020 ರಲ್ಲಿ ಕೋವಿಡ್‌ನಿಂದ ರಾಜ್ಯಕ್ಕೆ 63 ಸಾವಿರ ಕೋಟಿ ರೂ. ಆದಾಯಕ್ಕೆ ಕೊಕ್ಕೆ ಬಿದ್ದಿತು. ಇದರಿಂದ ಕಳೆದ ಎರಡು ವರ್ಷದಿಂದ ಸಂಪೂರ್ಣ ಸಂಕಷ್ಟ ಅನುಭವಿಸಿದ್ದೇವೆ. ಹೀಗಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ನಾವು ಕಂಡಿದ್ದ ಕನಸು ಈಡೇರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಕೂಡ ಅಭಿವೃದ್ಧಿ ಜತೆಗೆ ದೊಡ್ಡಮಟ್ಟದ ಬದಲಾವಣೆ ತರುವ ಗುರಿ ಇಟ್ಟುಕೊಂಡಿದ್ದರು. ಆದರೆ, ಸಂಕಷ್ಟಗಳ ಸರಮಾಲೆ ಎದುರಾಯಿತು. ಇಂತಹ ಪರಿಸ್ಥಿತಿಯಲ್ಲಿಯೂ ರಾಜ್ಯದಲ್ಲಿ 18 ಸಾವಿರ ಕಿ.ಮೀ. ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಗಳನ್ನಾಗಿ, 10 ಸಾವಿರ ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದರು.

ಯುಕೆಪಿಗೆ ಬದ್ಧತೆ ಇದೆ
ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ನಿರ್ಲಕ್ಷೃ ಮಾಡಿಲ್ಲ. ಮರೆಯುವ ಪ್ರಶ್ನೆಯೂ ಇಲ್ಲ. ಆರ್ಥಿಕ ಸಂಕಷ್ಟದಿಂದ ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಾಗಲಿಲ್ಲ. ಈ ವರ್ಷದಿಂದ ಹೆಚ್ಚಿನ ಆದ್ಯತೆ ನೀಡುತ್ತೇವೆ. ಬಜೆಟ್‌ನಲ್ಲಿ ಅನುದಾನ ನಿಗದಿ ಪಡಿಸಿ 22 ಗ್ರಾಮಗಳ ಪುನರ್ವಸತಿ, 1.33 ಲಕ್ಷ ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸುತ್ತೇವೆ. ಅದರ ಜತೆಗೆ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರ ಸಹಕಾರ ನೀಡಿದಲ್ಲಿ ಯೋಜನೆ ಬೇಗನೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆ ವಿಷಯವನ್ನು ನಮ್ಮ ಪಕ್ಷದ ಸಂಸದರು ಗಂಭೀರವಾಗಿ ಪರಿಗಣಿಸಿದ್ದಾರೆ. ಶೀಘ್ರದಲ್ಲಿ ವಿಜಯಪುರ, ಕೊಪ್ಪಳ, ಬಾಗಲಕೋಟೆ ಸೇರಿ ನಾಲ್ಕಾರು ಜಿಲ್ಲೆಯ ಸಂಸದರು ಸಭೆ ನಡೆಸಲಿದ್ದೇವೆ. ರಾಜ್ಯ ಸರ್ಕಾರದಿಂದ ನಿಯೋಗ ತೆಗೆದುಕೊಂಡು ಕೇಂದ್ರಕ್ಕೆ ಮನವಿ ಸಲ್ಲಿಕೆ ಮಾಡಲಿದ್ದೇವೆ ಎಂದರು.

ಶಾಸಕ ಡಾ.ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಜಿ.ಪಂ ಸಿಇಒ ಟಿ.ಭೂಬಾಲನ್ ಇದ್ದರು.

ಪ್ರತಿಭಟನೆ ಕೈ ಬಿಡಲು ಮನವಿ
ಭೂ ಸುಧರಣಾ ಕಾಯ್ದೆ, ಎಪಿಎಂಸಿ ಕಾಯ್ದೆಗಳ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ರಾಜ್ಯ ಹಾಗೂ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ರೈತರು ಕೈ ಬಿಡಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಮನವಿ ಮಾಡಿದರು.

ಸರ್ಕಾರ ಉತ್ತಮವಾದ ಕಾಯ್ದೆ ಜಾರಿ ಮಾಡಿದೆ. ಎರಡು ವರ್ಷ ಕಾಯ್ದೆ ಅನುಷ್ಠಾನಕ್ಕೆ ಅವಕಾಶ ಕೊಡಿ. ಸರಿ ಇಲ್ಲ ಅಂದ್ರೇ ಮತ್ತೆ ಕಾಯ್ದೆಗೆ ತಿದ್ದು ಪಡಿ ತರುತ್ತೇವೆ. ಯಾರದೋ ಮಾತು ಕೇಳಿ ಪ್ರತಿಭಟನೆ ಮಾಡಬಾರದು ಎಂದು ಕೈ ಮುಗಿದು ವಿನಂತಿ ಮಾಡುತ್ತೇನೆ ಎಂದರು.

ದೇಶದ ಅಂದಾಜು ಶೇ.95 ರಷ್ಟು ರೈತರು ಈ ಕಾನೂನು ವಿರೋಧ ಮಾಡಿಲ್ಲ. ಬಿತ್ತನೆ ಮಾಡುವ ರೈತರಂತು ವಿರೋಧಿಸಿಯೇ ಇಲ್ಲ. ಬಿತ್ತನೆ ಮಾಡದ ಶೇ.5 ರಷ್ಟು ರೈತರು ಮಾತ್ರ ಇದಕ್ಕೆ ವಿರೋಧ ಮಾಡುತ್ತಿದ್ದಾರೆ. ಸ್ವಾತಂತ್ರೃ ಬಂದ ಬಳಿಕ ದೇಶದಲ್ಲಿ ಅನೇಕ ಸಾರಿ ಸಂವಿಧಾನ ತಿದ್ದು ಪಡಿಸಲಾಗಿದೆ. ರಾಜಕೀಯ ದುರದ್ದೇಶದಿಂದ ಕೆಲವರು ಪ್ರತಿಭಟನೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ದೂರಿದರು.

ಕೇಂದ್ರ ಸರ್ಕಾರ ರೈತರಿಗೆ ಅನುಕೂಲವಾಗಲು ಕಾಯ್ದೆ ಜಾರಿ ಮಾಡಿದೆ. ಕೃಷಿ ಸ್ಥಾಯಿ ಸಮಸ್ಯೆ ಅಧ್ಯಕ್ಷನಾಗಿದ್ದೇನೆ. ಯೋಜನಾ ಸಮಿತಿ ಸದಸ್ಯನು ಹೌದು. ಸಮಿತಿ ಸಭೆಯಲ್ಲಿ ಕಾಯ್ದೆಗಳಿಗೆ ಕಾಂಗ್ರೆಸ್ ಸಂಸದರು ಸಹಿ ಮಾಡಿದ್ದಾರೆ. ಇದೀಗ ರಾಜಕೀಯ ದುರುದ್ದೇಶದಿಂದ ಕಾಯ್ದೆ ವಿರೋಧಿಸಿ ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಪ್ರತಿಭಟನೆ ಮಾಡಲು ಕುಮ್ಮಕ್ಕು ನೀಡುತ್ತಿದ್ದಾರೆ.
-ಪಿ.ಸಿ. ಗದ್ದಿಗೌಡರ, ಕೇಂದ್ರದ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಸಂಸದ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net