ವಹಿವಾಟು ಜೋರು, ಸ್ವಚ್ಛತೆ ಮಾಯ !

BKT 22
Published on

ಸಂತೋಷ ದೇಶಪಾಂಡೆ
ಬಾಗಲಕೋಟೆ: ಇವತ್ತಿನ ಕಾಲದಾಗ ರೈತರ ಬದುಕು ಭಾಳ ತ್ರಾಸದಾಗ ಐತರೀ..! ಮೂರು ನಾಲ್ಕು ವರ್ಷ ಮಳೆ ಆಗಲಿಲ್ಲ. ಪ್ರವಾಹ ಬಂದ ಮನೆ, ಮಠ ಕೊಂಚಿಕೊಂಡ ಹೋತರಿ. ಎಲ್ಲ ಚೂಲ ಐತಿ ಅನ್ನೋದ್ರಾಗ ಕರೊನಾ ಬಂದ ಲಾಕ್‌ಡೌನ್, ಬೆಲೆ ಏರಿಕೆ ಆಗಿ ಕೆಟ್ಟ ಪರಿಣಾಮ ಬೀರೈತರೀ. ಇಂತಹದ್ರಾಗ ದನಕರು ಸಾಕೋದು ಭಾಳ ಕಷ್ಟ ಆಗೈತರೀ..!!

ಹೀಗೆ ಹತಾಶೆಯ ಮಾತುಗಳು ಅನ್ನದಾತರಿಂದ ಕೇಳಿ ಬಂದಿದ್ದು ಮೋಟಗಿ ಬಸವೇಶ್ವರ ಜಾತ್ರೆ ಅಂಗವಾಗಿ ಬಾಗಲಕೋಟೆ ನಗರದ ಎಪಿಎಂಸಿ ಹಮಾಲರ ಕಾಲನಿ ಸಮೀಪ ಆರಂಭವಾಗಿರುವ ಜಾನುವಾರ ಜಾತ್ರೆಯಲ್ಲಿ. ಉತ್ತಮ ಬೆಲೆ ಇದ್ದಾಗ ಬೆಳೆ ಬರಲ್ಲ. ಎಲ್ಲ ಸರಿಹೋಗಿದೆ ಎನ್ನುವುದರಲ್ಲಿ ಏನಾದರು ಆಘಾತ ಅಪ್ಪಳಿಸಿ ಚಿಂತೆಗೆ ಕಾರಣ ಆಗುತ್ತದೆ. ಹೀಗಾಗಿ ದಿಕ್ಕು ತೋಚದಂತಾಗಿದೆ ಎಂದು ನೋವು ತೋಡಿಕೊಂಡರು.

ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯಿಂದ ಟ್ರಾೃಕ್ಟರ್ ಬಾಡಿಗೆ ಹೆಚ್ಚಳವಾಗಿದೆ. ಎತ್ತು, ಹೋರಿ ಸಾಕಿ ಉಳಮೆ ಮಾಡೋಣ ಅಂದ್ರ ಸುಲಭದ ಮಾತಲ್ಲ. ಕೂಲಿ ಆಳುಗಳ ಪಗಾರ ಜಾಸ್ತಿ ಆಗೈತರೀ. ಹಾಕಿದ ಬಂಡವಾಳ ವಾಪಸ್ಸ ಬಂದರೇ ನಮ್ಮ ಪುಣ್ಯ. ಸಾಲ, ಶೂಲ ಮಾಡಿ ಬಿತ್ತನೆ ಮಾಡುತ್ತೇವೆ. ಯಾವ ಸರ್ಕಾರ ಬಂದರೇನು ಕಣ್ಣೀರದೊಳಗೆ ಕೈ ತೊಳೆಯುವುದು ತಪ್ಪಿಲ್ಲ. ನಮ್ಮ ಪಾಡು ದೇವರ ಕಾಪಾಡಬೇಕು ಎಂದು ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ‘ವಿಜಯವಾಣಿ’ ಎದುರು ರೈತರು ಹರವಿದರು.

ಜಾನುವಾರು ಮಾರಾಟ ಜೋರು…
ಸತತವಾಗಿ ಕಾಡುವ ಭೀಕರ ಬರ, ಪ್ರವಾಹ, ಬೆಲೆ ಕುಸಿತ ಲಾಕ್‌ಡೌನ್ ಅಂತಹ ಸಮಸ್ಯೆಗಳಿಂದ ರೈತರ ಬಳಿ ದುಡ್ಡು ಇಲ್ಲ. ಇದರಿಂದ ರೈತರ ಮುಖದಲ್ಲಿ ಬೇಸರ ಮೂಡಿಸಿದೆ. ಆದರು ಸಹ ಕಳೆದ 3,4 ವರ್ಷ ಹೋಲಿಕೆ ಮಾಡಿದರೆ ಈ ಸಾರಿ ಜಾನುವಾರು ಜಾತ್ರೆಗೆ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನ ನೀರಸವಾದರೂ ಎರಡನೇ ದಿನ ವಿಜಯಪುರ, ಬಾಗಲಕೋಟೆ ಜಿಲ್ಲೆಯ ರೈತರು ಅಧಿಕ ಪ್ರಮಾಣದಲ್ಲಿ ಆಗಮಿಸಿದ್ದರಿಂದ ವ್ಯಾಪಾರ, ವಹಿವಾಟು ಜೋರಾಗಿ ನಡೆಯಿತು. 80 ಸಾವಿರ ರೂ.ದಿಂದ 1.20 ಲಕ್ಷ ರೂ. ವರೆಗೆ ಜೋಡೆತ್ತು, 90 ಸಾವಿರ ರೂ.ವರೆಗೆ ಹೋರಿ ಮಾರಾಟವಾಗುತ್ತಿದೆ. ಜಾನುವಾರು ಖರೀದಿಗೆ ಯುವ ಉತ್ಸಾಹಿ ಕೃಷಿಕರು ಹೆಚ್ಚಾಗಿ ಮುಗಿಬಿದ್ದಿರುವುದು ಗಮನ ಸೆಳೆಯಿತು. ಹಿಂದೆಂದಿಗ್ಗಿಂತಲು ಉತ್ತಮ ಬೆಲೆಗೆ ಜಾನುವಾರ ಮಾರಾಟವಾಗುತ್ತಿರುವುದು ಒಂದೇಡೆ ಸಂಭ್ರಮ ಮನೆ ಮಾಡಿದ್ದರೇ, ಇನ್ನೊಂದೆಡೆ ಜಾನುವಾರುಗಳ ಬೆಲೆ ಕೇಳಿಯೇ ರೈತರು ಬೆಚ್ಚಿ ಬಿದ್ದರು.

ಎಪಿಎಂಸಿ ನಿರ್ಲಕ್ಷೃ
ಕಿಲಾರಿ, ಪಾಳೇಕಾರ, ಜವಾರಿ ಹೋರಿಗಳು, ಆಕಳು ಜಾತ್ರೆಗೆ ಬಂದಿವೆ. ಉತ್ತಮ ಹಾಲಲ್ಲಿನ ಹೋರಿ, ಎರಡು ಹಲ್ಲಿನ ಹೋರಿ, ನಾಲ್ಕು ಹಲ್ಲಿನ ಹೋರಿ, ಆರು ಹಲ್ಲಿನ ಹೋರಿ, ಜೋಡು ಎತ್ತುಗಳಿಗೆ, ಕಿಲಾರಿ ಆಕಳಿಗೆ ಬಾಗಲಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆಯು ಪ್ರಥಮ, ದ್ವಿತೀಯ, ತೃತೀಯ ನಗದು ಸಹಿತ ಬಹುಮಾನ ನೀಡಲಿದೆ. ನೀರು, ವಿದ್ಯುತ್ ವ್ಯವಸ್ಥೆ ಕಲ್ಪಿಸಿದ್ದರು ಸಹ ಸ್ವಚ್ಛತೆ ಬಗ್ಗೆ ಎಪಿಎಂಸಿ ತೀವ್ರ ನಿರ್ಲಕ್ಷೃ ಧೋರಣೆ ಅನುಸರಿಸುತ್ತಿದೆ. ರೈತರೇ ಸ್ವಚ್ಛತೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಎಪಿಎಂಸಿ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕ ಭಾಗದಲ್ಲಿಯೆ ಪ್ರಸಿದ್ಧಿ ಪಡೆದಿರುವ ಬಾಗಲಕೋಟೆ ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆ ಭಾರತ ಹುಣ್ಣಿಮೆಯಿಂದ ಆರು ದಿನಗಳ ಕಾಲ ನಡೆಯುತ್ತದೆ. ಮಹಾರಾಷ್ಟ್ರದ ಅಕ್ಕಲಕೋಟ್, ಸೋಲಾಪುರ ಸೇರಿದಂತೆ ಕರ್ನಾಟಕ ಮಹಾರಾಷ್ಟ್ರದ ಗಡಿ ಭಾಗದ ರೈತರು ಜಾನುವಾರ ಖರೀದಿ ಮತ್ತು ಮಾರಾಟಕ್ಕೆ ಬರುತ್ತಾರೆ. ಅಲ್ಲದೆ ಬಾಗಲಕೋಟೆ, ವಿಜಯಪುರ, ಗದಗ, ಬೆಳಗಾವಿ, ರಾಯಚೂರ, ಬಳ್ಳಾರಿ ಭಾಗದಿಂದ ರಾಜ್ಯದ ರೈತರು ಆಗಮಿಸುವುದು ವಾಡಿಕೆ. ಈ ಸಾರಿ ಕೋವಿಡ್ ಭೀತಿ ಹಿನ್ನಲೆಯಲ್ಲಿ ಹೊರ ರಾಜ್ಯ, ಜಿಲ್ಲೆಗಳಿಂದ ರೈತರು ಹೇಳಿಕೊಳ್ಳುವ ಮಟ್ಟಿಗೆ ಆಗಮಿಸಿಲ್ಲ.

ಇನ್ನು ಈ ಜಾತ್ರೆಯಲ್ಲಿ ದನಕರುಗಳಿಗೆ ಉಪಯೋಗಿಸುವ ಸಾಮಾನುಗಳ ಮಾರಾಟ ಮತ್ತು ಖರೀದಿ ಕೂಡಾ ಜೋರಾಗಿ ನಡೆಯುತ್ತದೆ. ಗೆಜ್ಜಿಪಟ್ಟಾ, ಮೂಗದಾನ, ಮಗಡಾ, ಹಿಡಿಹಗ್ಗ, ಹಿತ್ತಾಳೆ ಸವಣಿ, ಜತಿಗಿ ಸೇರಿದಂತೆ ವಿವಿಧ ವಸ್ತುಗಳ ಖರೀದಿ ಮಾಡಲು ರೈತರು ಮುಗಿಬಿಳ್ಳುತ್ತಿದ್ದಾರೆ. ಕಳೆದ ವರ್ಷ ಹೋಲಕೆ ಮಾಡಿದರೇ ಈ ಸಾರಿ ಉತ್ತಮ ವಹಿವಾಟು ಕಂಡು ಬಂದಿದೆ ಎಂದು ಬಾಗಲಕೋಟೆ ವ್ಯಾಪಾರಸ್ಥ ಅಮೀರ ನಾಲಬಂದ ‘ವಿಜಯವಾಣಿ’ ಗೆ ತಿಳಿಸಿದರು.

ಇಂದು ಕೃಷಿ ಸುಲಭವಾಗಿಲ್ಲ. ಖರ್ಚು, ವೆಚ್ಚಗಳು ಹೆಚ್ಚಳ ಆಗಿದೆ. ಡೀಸೆಲ್ ಬೆಲೆ ಅಧಿಕವಾಗಿ ಟ್ರಾೃಕ್ಟರ್ ಬಾಡಿಗೆ ಹೆಚ್ಚಳವಾಗಿದೆ. ಜಾನುವಾರು ಖರೀದಿ ದೊಡ್ಡ ಮಾತಲ್ಲ. ಅವುಗಳ ಸಾಕಣೆ ಬಹಳ ಹೊರೆಯಾಗುತ್ತಿದೆ. ಕೃಷಿಯಲ್ಲಿ ನಿಶ್ಚಿತ ಆದಾಯವಿಲ್ಲ. ಸರ್ಕಾರದ ನೀತಿ, ನಿರೂಪಣೆಗಳು ನಮಗೆ ಲಾಭದಾಯಕವಾಗಿಲ್ಲ. ಕಷ್ಟ, ನಷ್ಟಗಳ ನಡುವೆ ಬದುಕು ಸಾಗುತ್ತಿದೆ.
- ಹನುಮಂತ ದೊಡ್ಡನಗೌಡ, ನಕ್ಕರಗುಂದಿ ಗ್ರಾಮ, ನಂದಪ್ಪ ಸಂಗಣ್ಣವರ, ಸೂಳಿಭಾವಿ ಗ್ರಾಮ ರೈತರು

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net