ಕೃಷಿ ಹೊಂಡ ನಿರ್ಮಾಣಕ್ಕೆ ಆದ್ಯತೆ ನೀಡಿ

GANGUBAI MANAKAR
Published on

ಬಾಗಲಕೋಟೆ: ಜಿಲ್ಲೆಯಲ್ಲಿ ಬರ ತಡೆಯುವ ನಿಟ್ಟಿನಲ್ಲಿ ಜಲಾನಯನ ಅಭಿವೃದ್ಧಿ ಯೋಜನೆಯಡಿ ಕೃಷಿಕರಿಗೆ ಕೃಷಿಹೊಂಡ ನಿರ್ಮಿಸಲು ಹೆಚ್ಚಿನ ಆದ್ಯತೆ ನೀಡುವಂತೆ ಜಿ.ಪಂ ಸಿಇಒ ಗಂಗೂಬಾಯಿ ಮಾನಕರ ಹೇಳಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಮಂಗಳವಾರ ಕೃಷಿ ಇಲಾಖೆಯ ಜಲಾನಯನ ಅಭಿವೃದ್ಧಿ ಮೂಲಕ ಬರಗಾಲ ತಡೆಯುವಿಕೆಯ ಯೋಜನೆ ಕಾರ್ಯಕ್ರಮಗಳ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸತತ ಬರಗಾಲಕ್ಕೆ ತುತ್ತಾಗುವ ತಾಲೂಕುಗಳನ್ನು ಗುರುತಿಸಬೇಕು. ಜಲಾನಯನಕ್ಕೆ ಲಭ್ಯವಿರುವ ಪ್ರದೇಶವನ್ನು ಗುರುತಿಸಿ ಎರಡು ತಾಲೂಕುಗಳನ್ನು ಆಯ್ಕೆ ಮಾಡಿ ಈ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಯೋಜನೆ ಹುನಗುಂದ ತಾಲೂಕಿನ ಗುಡೂರ ಪ್ರದೇಶಗಳಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಉಳಿದ ತಾಲೂಕುಗಳು ಮನೆಯ ಅಂಗಳ ಕೈತೋಟ ಚಟುವಟಿಕೆಯನ್ನು ಹಮ್ಮಿಕೊಳ್ಳಬೇಕು. ಜಲಾನಯನ ಸಮಿತಿಯನ್ನು ನಿಯೋಜಿಸಿ ಆಯಾ ಪ್ರದೇಶಗಳಿಗೆ ಸಂಬಂಧಿಸಿದಂತೆ 14 ರಿಂದ 19 ಸ್ಥಳೀಯರನ್ನು ಹಾಗೂ ಇಲಾಖೆಯ ಅಧಿಕಾರಿಗಳನ್ನು ಸದಸ್ಯರನ್ನಾಗಿ ಮಾಡಿ ಕಾರ್ಯನಿರ್ವಹಿಸಬೇಕು ಎಂದರು.

ಇನ್ನು ಬಾದಾಮಿ ಮತ್ತು ಹುನಗುಂದ ತಾಲೂಕಿನಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿಯುತ್ತಿದೆ. ಕೊಳವೆಬಾಯಿ ಕೊರೆಯಬೇಕಾದಲ್ಲಿ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕಾಗಿದೆ. ಆದ್ದರಿಂದ ರೈತರು ಅಂತರ್ಜಲ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಜಾಗೃತಿ ಅಭಿಯಾನ ಅಗತ್ಯವಾಗಿದೆ ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಈ ಯೋಜನೆ ಯಶಸ್ವಿಗೊಳಿಸಲು ಕೃಷಿ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಭೂ ಸಂಪನ್ಮೂಲ ಸಮೀಕ್ಷಾ ಹಾಗೂ ಜಲಾನಯನದ ವೈಜ್ಞಾನಿಕ ಮಾಹಿತಿ ಆಧಾರದ ಮೇಲೆ ಈ ಕಾರ್ಯಗತಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಪ್ರಭುರಾಜ ಹಿರೇಮಠ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net