

ಬಾಗಲಕೋಟೆ: ಕೋಟೆನಗರಿಯ ಕಿಲ್ಲಾಭಾಗದಲ್ಲಿರುವ ಗ್ರಾಮ ದೇವತೆ (ದ್ಯಾಮವ್ವ ದೇವಿ) ಜಾತ್ರಾ ಮಹೋತ್ಸವವನ್ನು ಮೇ 24, 25ರಂದು ವೈಶಿಷ್ಟಪೂರ್ಣವಾಗಿ ಆಚರಿಸಲು ನಿರ್ಧಾರಿಸಲಾಗಿದೆ. 32 ವರ್ಷಗಳ ಬಳಿಕ ಜಾತ್ರೆ ಹಮ್ಮಿಕೊಳ್ಳುತ್ತಿರುವುದು ಸಂತಸ ಮೂಡಿಸಿದೆ.
ಗ್ರಾಮ ದೇವತೆ ದೇವಸ್ಥಾನದಲ್ಲಿ ಮಂಗವಾರ ರಾತ್ರಿ ನಡೆದ ಪೂರ್ವಭಾವಿ ಸಭೆಯಲ್ಲಿ ನಗರದ ಹಿರಿಯರು, ಮುಖಂಡರು, ಯುವಕರು ಭಾಗವಹಿಸಿ ಸುಧೀರ್ಘವಾಗಿ ಚರ್ಚೆ ನಡೆಸಿ ಜಾತ್ರೆ ನಡೆಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಯಿತು. ಅಲ್ಲದೆ, ಜಾತ್ರೆ ವೇಳೆ ವಿವಿಧ ಪೂಜಾ ಕೈಂಕರ್ಯಗಳು, ಹೋಮ, ಹವನ ನಡೆಸುವ ಮೂಲಕ ದೇಶ ಹಾಗೂ ವಿಶ್ವಕ್ಕೆ ಆವರಿಸಿರುವ ಕೋವಿಡ್‌ದಿಂದ ಮುಕ್ತಿ ನೀಡುವಂತೆ ದೇವಿಯಲ್ಲಿ ಪ್ರಾರ್ಥಿಸುವ ನಿರ್ಧಾರ ಪ್ರಕಟಿಸಲಾಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಮೇ 24 ರಂದು ಕುಂಭಮೇಳ, ಜಾನಪದ ಕಲಾ ತಂಡಗಳು, ಬಾಜಾ ಭಜಂತ್ರಿಯೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. ಮೇ 25 ರಂದು ಬೆಳಗ್ಗೆ ದೇವಿಗೆ ಹೋಮ ಹವನ, ಉಡಿತುಂಬುವ ಕಾರ್ಯಕ್ರಮ ಜರುಗಲಿವೆ. ಎರಡು ದಿನ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲು ತೀರ್ಮಾನಿಸಲಾಯಿತು.
ಮುಖಂಡ ಬಸವಪ್ರಭು ಸರನಾಡಗೌಡರ ಮಾತನಾಡಿ, ಪ್ರತಿ ಮೂರು ವರ್ಷಕ್ಕೊಮ್ಮೆ ಗ್ರಾಮ ದೇವತೆಯ ಜಾತ್ರೆ ನಡೆಸುವಂತಾಗಬೇಕು. ದೇವಸ್ಥಾನಕ್ಕೆ ಶಾಶ್ವತ ಸಮಿತಿ ರಚಿಸಬೇಕು ಎಂದು ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಸುರೇಶ ಕುದರಿಕಾರ ಮಾತನಾಡಿ, ಗ್ರಾಮದೇವತೆಯ ಜಾತ್ರೆಯನ್ನು ಮಾಡುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳ ಕುರಿತು ಇಂದಿನ ಯುವಕರಿಗೆ ತಿಳಿವಳಿಕೆ ಮೂಡಿಸುವ ಕೆಲಸವಾಗಬೇಕು ಎಂದರು.
ಅಶೋಕ ಲಿಂಬಾವಳಿ ಮಾತನಾಡಿ, ಮುಳುಗಡೆ ಬಳಿಕ ಇಲ್ಲಿನ ಆಚರಣೆ, ಸಂಪ್ರದಾಯಕ್ಕೆ ಧಕ್ಕೆ ಬಂದಿದೆ. ಅದನ್ನು ಮರು ಸ್ಥಾಪಿಸುವ ಕಾರ್ಯವಾಗಬೇಕು ಎಂದು ಹೇಳಿದರು. ಮುಖಂಡರಾದ ಸಂಗಯ್ಯ ಸರಗಣಾಚಾರಿ, ಗುಂಡೂರಾವ್ ಸಿಂಧೆ, ಸದಾನಂದ ನಾರಾ, ಹನುಮಂತ ಮಟ್ಯಾಳ, ಆನಂದ ಆಚಾರ್ಯ , ಬಂಡೆರಾವ್, ಕಾಂತು ಪತ್ತಾರ, ಬಸಪ್ಪ ಸ್ವಾಗಿ, ತಿಪ್ಪಣ್ಣ ಬಡಿಗೇರ, ಸಂಗಪ್ಪ ಸಜ್ಜನ, ಮಲ್ಲಪ್ಪ ಡಾವಣಗೇರಿ, ರಾಮು ಮುದಡಾ, ರಘುನಾಥ ದೋಂಗಡಿ, ಸಂತೋಷ ಕರ್ಣೆ, ಕಾಂತು ಬಡಿಗೇರ, ನಿರುಪಾದಪ್ಪ ಬಡಿಗೇರ, ಸುರೇಶ ಬಡಿಗೇರ, ಪ್ರದೀಪ ರಾಯಕರ, ಆನಂದ ಬಡಿಗೇರ ಸೇರಿ ಇತರರು ಇದ್ದರು.
32 ವರ್ಷಗಳ ನಂತರ ದೇವಿ ಜಾತ್ರೆ ನಡೆಯುತ್ತಿರುವುದರಿಂದ ಜಾತ್ರೆಯಲ್ಲಿ ಕುಂಭಮೇಳ, ಜಾನಪದ ಕಲಾ ತಂಡಗಳನ್ನು ಭಾಗವಹಿಸುವಂತೆ ಮಾಡಬೇಕು. ನಗರದ ಜನರು ತನುಮನದಿಂದ ಉತ್ಸವದಲ್ಲಿ ಭಾಗವಹಿಸಬೇಕು. ಗ್ರಾಮ ದೇವತೆ ಜಾತ್ರೆಯ ಅಂಗವಾಗಿ ಹೋಮ, ಹವನ ಪೂಜಾ ಕಾರ್ಯಕ್ರಮ ನಡೆಸಲಾಗುವುದು.
- ಸುರೇಶ ಮಜ್ಜಗಿ ನಗರ ನಿವಾಸಿ
EndFragment