ಸ್ಟೋರ್ ರೂಮ್‌ನಲ್ಲಿ ಹೆಚ್ಚುವರಿ ಪೈಪ್

BKT 6-2
Published on

ಬಾಗಲಕೋಟೆ: ಹಿಂದಿನ ಅವಧಿಯಲ್ಲಿ ನವನಗರಕ್ಕೆ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ಪೈಪ್‌ಲೈನ್ ಅಳವಡಿಸಲು ಪೈಪ್‌ಗಳನ್ನು ಖರೀದಿಸಲಾಗಿತ್ತು. ಆದರೆ, ಸ್ಟೋರ್ ರೂಮ್‌ನಲ್ಲಿ ಬೆಲೆ ಬಾಳುವ ಪೈಪ್‌ಗಳು ಅಧಿಕ ಸಂಖ್ಯೆಯಲ್ಲಿ ಕಾಣಿಸಿವೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಬಿಟಿಡಿಎ ಅಧ್ಯಕ್ಷ, ಶಾಸಕ ವೀರಣ್ಣ ಚರಂತಿಮಠ ಬಿಟಿಡಿಎ ಮುಖ್ಯ ಇಂಜಿನಿಯರ್ ಅಶೋಕ ವಾಸನದ ಅವರಿಗೆ ಸೂಚನೆ ನೀಡಿದರು.

ಸೆಕ್ಟರ್ ನಂ.47ರಲ್ಲಿರುವ ಸಬ್ ಡಿವ್ಹಿಜನ್ ನಂ.4 ಸ್ಟೋರ್‌ಗೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಮಗಾರಿಗೆ ಅವಶ್ಯವಿರುವಷ್ಟು ಪೈಪ್‌ಗಳನ್ನು ತರಬೇಕಿತ್ತು. ಇಲ್ಲಿ ದೊಡ್ಡ ಪ್ರಮಾಣದಲ್ಲಿ ಪೈಪ್‌ಗಳು ಹಾಗೆ ಬಿದ್ದಿವೆ. ಅಲ್ಲದೆ, ದುಸ್ಥಿತಿಗೆ ತಲುಪಿವೆ. ಇದಕ್ಕೆ ಯಾರು ಹೊಣೆ?, ಸರ್ಕಾರ ನೀಡಿದ ಹಣಕ್ಕೆ ಕಿಮ್ಮತ್ತು ಇಲ್ಲವೆ? ಎಂದು ಅಲ್ಲಿನ ಸಿಬ್ಬಂದಿಗೆ ಪ್ರಶ್ನಿಸಿದರು. ಶಾಸಕ ಮಾತಿಗೆ ಉತ್ತರಿಸಲಾಗದೆ ಸಿಬ್ಬಂದಿ ತಬ್ಬಿಬ್ಬಾದರು.

ಪೈಪ್‌ಲೈನ್ ಅಳವಡಿಕೆಗೆ ಟೆಂಡರ್ ಮೊತ್ತವೆಷ್ಟು? ಇದಕ್ಕೆ ಖರ್ಚಾಗಿದ್ದು ಎಷ್ಟು? ಗುತ್ತಿಗೆದಾರರಿಗೆ ನೀಡಿದ ಬಿಲ್ ಮೊತ್ತವೆಷ್ಟು? ಎಂಬುದರ ಕುರಿತ ಸಂಪೂರ್ಣ ವರದಿಯನ್ನು ಒಪ್ಪಿಸಬೇಕು. ಮುಂದಿನ ಬಿಟಿಡಿಎ ಸಭೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಿಟಿಡಿಎ ಸದಸ್ಯರಾದ ಮೋಹನ್ ನಾಡಗೌಡ, ಕುಮಾರ ಯಳ್ಳಿಗುತ್ತಿ, ಶಿವಾನಂದ ಟವಳಿ ಅಧಿಕಾರಿಗಳು ಇದ್ದರು.

ನಿರ್ಲಕ್ಷೃ ಸರಿಯಲ್ಲ
ಇನ್ನು ಸ್ಟೋರ್ ರೂಮ್ ಆವರಣದಲ್ಲಿ ಸ್ವಚ್ಛತೆ ಇಲ್ಲದಿರುವುದು, ಬೇಕಾಬಿಟ್ಟಿಯಾಗಿ ವಸ್ತುಗಳನ್ನು ಎಸೆದಿರುವುದು ಕಣ್ಣಿಗೆ ಬೀಳುತ್ತಿದ್ದಂತೆ ಶಾಸಕ ವೀರಣ್ಣ ಚರಂತಿಮಠ ಕೆಂಡಾಮಂಡಲರಾದರು. ತಮ್ಮ ಮನೆ ಹೀಗೆ ಇಟ್ಟುಕೊಳ್ಳುತ್ತೀರಾ? ಸರ್ಕಾರಿ ಕಚೇರಿ ಬಗ್ಗೆ ನಿರ್ಲಕ್ಷೃ ವಹಿಸುವುದು ಸಲ್ಲ. ಮುಂದಿನವಾರ ಮತ್ತೆ ಭೇಟಿ ನೀಡುತ್ತೇನೆ. ಎಲ್ಲವು ಸರಿ ಹೋಗಬೇಕು ಎಂದು ಎಚ್ಚರಿಕೆ ನೀಡಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net