ಬಡವರ ವೈದ್ಯ ಅಶೋಕ ಸೊನ್ನದ ಇನ್ನಿಲ್ಲ

BKT 251
Published on

ಬಾಗಲಕೋಟೆ: ನಗರದ ಹಿರಿಯ ವೈದ್ಯ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಧುಮೇಹ ತಜ್ಞ ಡಾ.ಅಶೋಕ ರಾಮಣ್ಣ ಸೊನ್ನದ (81) ಮಂಗಳವಾರ ಬೆಳಗ್ಗೆ ನಿಧನರಾದರು.

ಕಳೆದ 20 ದಿನಗಳ ಹಿಂದೆ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ಸೋಂಕಿನಿಂದ ಗುಣಮುಖರಾದರು ಸಹ ಅನಾರೋಗ್ಯದ ಕಾರಣದಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಲಿಸದೆ ಅವರು ಮಂಗಳವಾರ ಬೆಳಗ್ಗೆ ಕೊನೆಯುಸಿರೆಳೆದರು. ಸ್ವಗ್ರಾಮ ಮುಧೋಳ ತಾಲೂಕಿನ ಭಂಟನೂರ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿದ್ದು ಎಲ್ಲರೂ ಅಮೆರಿಕದಲ್ಲಿ ನೆಲೆಸಿದ್ದಾರೆ. ಡಾ.ಸೊನ್ನದ ಕೂಡ ಮೂವತ್ತಕ್ಕೂ ಹೆಚ್ಚು ವರ್ಷ ಅಮೆರಿಕದಲ್ಲೇ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ತಾಯ್ನಡಿನ ಜನರ ಸೇವೆಗಾಗಿ 2010ರಲ್ಲಿ ಬಾಗಲಕೋಟೆ ನಗರಕ್ಕೆ ಮರಳಿ ತಮ್ಮ ತಾಯಿಯ ಹೆಸರಿನಲ್ಲಿ ‘ಮಾತೋಶ್ರೀ ಪಾರ್ವತಿಬಾಯಿ ಸೊನ್ನದ ಸಾರ್ವಜನಿಕ ಸೇವಾ ಸಂಘ’ ಆರಂಭಿಸಿ ಎಲ್ಲರಿಗೂ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ, ಆರ್ಥಿಕ ತೊಂದರೆಯಲ್ಲಿರುವ ಜನರಿಗೆ ಉಚಿತ ಔಷಧವನ್ನೂ ನೀಡುವ ಮೂಲಕ ಬಡವರ ವೈದ್ಯ ಎಂದೇ ಖ್ಯಾತರಾಗಿದ್ದರು.

ಮೃತರ ನಿಧನಕ್ಕೆ ಡಿಸಿಎಂ ಗೋವಿಂದ ಕಾರಜೋಳ, ವಿ.ಪಕ್ಷ ನಾಯಕ ಸಿದ್ದರಾಮಯ್ಯ, ವಿ.ಪ ವಿಪಕ್ಷ ನಾಯಕ ಎಸ್.ಆರ್.ಪಾಟೀಲ, ಶಾಸಕ ವೀರಣ್ಣ ಚರಂತಿಮಠ, ಮಾಜಿ ಶಾಸಕ ಪಿ.ಎಚ್.ಪೂಜಾರ, ಎಚ್.ವೈ.ಮೇಟಿ, ಜೆ.ಟಿ.ಪಾಟೀಲ, ಮಾಜಿ ಸಂಸದ ಅಜಯಕುಮಾರ ಸರನಾಯಕ ಸೇರಿ ಜಿಲ್ಲೆಯ ಜನ ಪ್ರತಿನಿಧಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಡಾ.ಸೊನ್ನದ ಅವರ ವೈದ್ಯಕೀಯ ಸೇವೆ ಸ್ಮರಿಸಿಕೊಂಡಿದ್ದಾರೆ.

ಹುಂಡಿ ಕಾಣಿಕೆ ವೈದ್ಯ..
ಭಂಟನೂರಿನ ರಾಮಪ್ಪ ಹಾಗೂ ಪಾರ್ವತಿಬಾಯಿ ದಂಪತಿಯ 12 ಜನ ಮಕ್ಕಳಲ್ಲಿ ಡಾ.ಅಶೋಕ ಸೊನ್ನದ ಎಂಟನೇಯವರು. ಬಾಗಲಕೋಟೆಯ ಸಕ್ರಿ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದುಕೊಂಡರು. 1965 ರಲ್ಲಿ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಎಂಬಿಬಿಎಸ್,ಅಹಮದಾಬಾದ್‌ನಲ್ಲಿ ಎಂ.ಡಿ ಪೂರ್ಣಗೊಳಿಸಿ 1972 ರಲ್ಲಿ ಅಮೆರಿಕಾಗೆ ತೇರಳಿ ಅಲ್ಲಿಯೇ ನೆಲೆಸಿದ್ದರು. ಅಲ್ಲಿನ ಪ್ರಜೆ ಐಲಿನ್ ಅವರನ್ನು ಮದುವೆಯಾಗಿದ್ದರು.

ಡಾ.ಅಶೋಕ ಸೊನ್ನದ ಅವರ ಬಳಿ ಚಿಕಿತ್ಸೆ ಪಡೆಯಲು ಬಂದ ರೋಗಿಗಳು ಸೇವೆಯಿಂದ ತೃಪ್ತಿಯಾದರೇ ಮಾತ್ರ ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ಇಟ್ಟಿದ್ದ ಕಾಣಿಕೆ ಹುಂಡಿಗೆ ಕೈಲಾದಷ್ಟು ಹಣ ಹಾಕಲು ತಿಳಿಸುತ್ತಿದ್ದರು. ಈ ಹಣವನ್ನು ಬಡವರಿಗೆ ಉಚಿತ್ಸವಾದ ಔಷಧಿ ಒದಗಿಸುತ್ತಿದ್ದರು. ಅಲ್ಲದೆ ಸ್ವ ಗ್ರಾಮ ಭಂಟನೂರಿನಲ್ಲಿ ರುದ್ರಭೂಮಿಗೆ 1 ಎಕರೇ ಜಮೀನು ಉಚಿತವಾಗಿ ಗ್ರಾಮ ಪಂಚಾಯಿತಿ ಹಸ್ತಾಂತರ ಮಾಡಿದ್ದರು. ಈ ಸೇವೆ ಗಮನಿಸಿ 2020 ರಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

ಇನ್ನು ಒಂದೇ ಕುಟುಂಬದ 7 ಜನ ಡಾಕ್ಟರೇಟ್ ಪಡೆದಿದ್ದಾರೆ ಎಂಬ ಕಾರಣಕ್ಕೆ ಡಾ.ಸೊನ್ನದ ಅವರ ಪರಿವಾರದ ಹೆಸರು ಗಿನ್ನೀಸ್ ಬುಕ್ ಆ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿರುವುದು ವಿಶೇಷವಾಗಿದೆ.

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net