

ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ 2020 ಸಾಲಿನ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಬುಧವಾರ ಸಂಭ್ರಮದ ತೆರೆ ಬಿದ್ದಿತು. ಬಾಗಲಕೋಟೆ ಡಿಎಆರ್ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.
ಪುರುಷರ ವಿಭಾಗದಲ್ಲಿ ಪ್ರಕಾಶ ಲಮಾಣಿ, ಮಹಿಳಾ ವಿಭಾಗದಲ್ಲಿ ವಿದ್ಯಾಶ್ರೀ ಹಿರೇನಾಯಕ ವೈಯಕ್ತಿಕ ಚಾಂಪಿಯನ್, ನವನಗರದ ಪೊಲೀಸ್ ಠಾಣೆ ಜಿಲ್ಲೆಯ ಉತ್ತಮ ಪೊಲೀಸ್ ಠಾಣೆ ಪ್ರಶಸ್ತಿಗೆ ಭಾಜನವಾಯಿತು.
ನವನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಸಂಜೆ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಉತ್ತರ ವಲಯದ ಐಜಿಪಿ ರಾಘವೇಂದ್ರ ಸುಹಾಸ ಮಾತನಾಡಿ, ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಸಕ್ರಿಯವಾಗಿ ಭಾಗವಹಿಸುವುದು ಮಹತ್ವ ಪಡೆದಿದೆ. ಪರಸ್ಪರ ಬಾಂಧವ್ಯ ವೃದ್ಧಿಸುವಲ್ಲಿ ಸಹಕಾರಿಯಾಗಿದೆ. ಬಾಗಲಕೋಟೆ ಜಿಲ್ಲಾ ಪೊಲೀಸ್ ಸಿಬ್ಬಂದಿ ಸೇವೆ ಬಗ್ಗೆ ರಾಜ್ಯದಲ್ಲಿ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ. ಪ್ರವಾಹ ಸಂದರ್ಭದಲ್ಲಿ 3 ಲಕ್ಷ ಜನರನ್ನು ರಕ್ಷಿಸಿದ್ದೀರಿ, ಕೋವಿಡ್ ವೇಳೆ ಜೀವದ ಹಂಗು ತೊರೆದು ಜನರಿಗೆ ನೀಡಿದ ಸೇವೆ ಅವಿಸ್ಮರಣೀಯ. ತುರ್ತು ಸೇವೆ, ಸ್ಪಂದನೆಯಲ್ಲಿ ರಾಜ್ಯದಲ್ಲಿಯೇ ಬಾಗಲಕೋಟೆ ಜಿಲ್ಲೆ ಮಾದರಿಯಾಗಿದೆ ಎಂದು ಬಣ್ಣಿಸಿದರು.
ಇಲಾಖೆ ಸಿಬ್ಬಂದಿ ಎಂದಿಗೂ ತಮ್ಮ ಸೇವೆಯ ಮೂಲ ಧ್ಯೇಯ ಮರೆಬಾರದು. ಜನರ ಕಾಳಜಿ ಬಿಡಬಾರದು. ಇಲ್ಲದೆ ಹೋದಲ್ಲಿ ಅಸ್ತಿತ್ವದ ಪ್ರಶ್ನೆ ಬರುತ್ತದೆ. ಸದಾ ಎಚ್ಚರದಿಂದ ಕಾರ್ಯನಿರ್ವಹಿಸಬೇಕು. ವರ್ಷದಿಂದ ವರ್ಷಕ್ಕೆ ತಮ್ಮ ಸೇವೆ, ವ್ಯಕ್ತಿತ್ವ, ಪೊಲೀಸ್ ಠಾಣೆಯ ವರ್ಚಸ್ಸು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಪೊಲೀಸ್ ಇಲಾಖೆ ಸಿಬ್ಬಂದಿಗೆ ಸಲಹೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಉಪಸ್ಥಿತರಿದ್ದರು.
ಕ್ರೀಡಾಕೂಟದಿಂದ ಮಾನಸಿಕ, ದೈಹಿಕ ಆರೋಗ್ಯ ಸುದಾರಣೆಯಾಗುತ್ತದೆ. ದೈಹಿಕ ಆರೋಗ್ಯ ಚೆನ್ನಾಗಿ ಇದ್ದಾಗ ಮಾತ್ರ ಮಾನಸಿಕ ಸಮತೋಲನ, ಕರ್ತವ್ಯದಲ್ಲಿ ಉತ್ಸಾಹ ಮೂಡುತ್ತದೆ. ಇಲಾಖೆ ಸಿಬ್ಬಂದಿ 60 ವರ್ಷದ ನಂತರ ಕುಟುಂಬದೊಂದಿಗೆ ನಿವೃತ್ತಿ ಜೀವನ ಕಳೆಯುವುದು ದೊಡ್ಡ ವಿಷಯವಲ್ಲ. ತಮ್ಮ ಕೆಲಸದ ಜತೆಗೆ ಕುಟುಂಬದ ಜತೆಗೂ ಕಾಲ ಕಳೆಯಬೇಕು. ಕುಟುಂಬ, ಕರ್ತವ್ಯ ಎರಡನ್ನು ಉತ್ತಮವಾಗಿ ನಿಭಾಯಿಸುವ ಜೀವನ ಶೈಲಿ ರೂಢಿಸಿಕೊಳ್ಳಬೇಕು. ಸರ್ಕಾರ ಪೊಲೀಸ್ ಸಿಬ್ಬಂದಿ ಕುಟುಂಬದ ಹಿತಕಕ್ಕಾಗಿ ವಸತಿ ನಿಲಯಗಳನ್ನು ಹೆಚ್ಚಿಸುತ್ತಿದೆ.
- ರಾಘವೇಂದ್ರ ಸುಹಾಸ ಐಜಿಪಿ ಉತ್ತರ ವಲಯ ಬೆಳಗಾವಿ
EndFragment