

ಬಾಗಲಕೋಟೆ: ಜಿಲ್ಲಾಧಿಕಾರಿ ಕೆ.ರಾಜೇಂದ್ರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡುತ್ತಿದೆ. ಹೆದ್ದಾರಿಗಳ ನಿರ್ಮಾಣದಿಂದ ಅನೇಕ ಅನುಕೂಲಗಳು ಇವೆ ಎಂದು ಜಿಲ್ಲಾಧಿಕಾರಿ ಕೆ.ರಾಜೇಂದ್ರ ಅಭಿಪ್ರಾಯ ಪಟ್ಟರು.
ಬೆಳಗಾವಿ-ಹುನಗುಂದ 168 ಕಿ.ಮೀ. ಮತ್ತು ಹುನಗುಂದ-ರಾಯಚೂರು 156 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯ ಡಿಪಿಆರ್ ತಯಾರಿಸುವ ಕುರಿತಂತೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ನಡೆದ ಸಲಹಾ ಸಮಿತಿಯಲ್ಲಿ ಮಾತನಾಡಿದರು.
ಭಾರತ ಮಾಲಾ ಭಾಗವಾಗಿ ಹೈದರಾಬಾದ್-ಪಣಜಿ ಕಾರಿಡಾರ್ ಯೋಜನೆಯಡಿ ಬೆಳಗಾವಿ-ರಾಯಚೂರು ರಸ್ತೆ ಕಾಮಗಾರಿ ಬಗ್ಗೆ ವಿಸ್ತೃತವಾಗಿ ಚರ್ಚೆ ಅಗತ್ಯವಾದ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ. ಜಿಲ್ಲೆಯಲ್ಲಿ ಯೋಜನಾ ಅಧಿಕಾರಿಗಳು ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಜಮೀನನ್ನು ಹೊರತುಪಡಿಸಿ ಹೆದ್ದಾರಿ ಯೋಜನೆ ರೂಪಿಸಬೇಕು. ಇಲ್ಲವಾದಲ್ಲಿ ಋಣಭಾರ ಪತ್ರ ಪಡೆಯಲು ಸಮಯ ವಿಳಂಬವಾಗಿ ಕಾಮಗಾರಿ ಚಾಲನೆಗೂ ಹಿನ್ನಡೆಯಾಗುತ್ತದೆ. ಅಲ್ಲದೆ, ಜಿಲ್ಲೆಯಲ್ಲಿನ ಐತಿಹಾಸಿಕ ಸ್ಥಳವಿರುವ ಪ್ರದೇಶದಲ್ಲಿ ಹೆದ್ದಾರಿ ಹಾಯ್ದು ಹೋಗದಂತೆ ಯೋಜನೆ ಸಿದ್ಧಪಡಿಸಬೇಕು ಎಂದು ತಿಳಿಸಿದರು.
ಸಂಸದ ಪಿ.ಸಿ.ಗದ್ದಿಗೌಡ ಮಾತನಾಡಿ, ಬೆಳಗಾವಿಯಿಂದ ಜಿಲ್ಲೆಯ ಗಡಿ, ಬಾದಾಮಿ ತಾಲೂಕಿನ ಜಂಗವಾಡದಿಂದ ಹುನಗುಂದಕ್ಕೆ ಮುಕ್ತಾಯಗೊಳ್ಳುವ ಒಟ್ಟು 96 ಕಿ.ಮೀ. ಅಂದಾಜು ಯೋಜನೆ ಇದ್ದು, ಈ ಯೋಜನೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಹಾದು ಹೋಗುವ ಕಾಮಗಾರಿಯ ಅಲೈನ್‌ಮೆಂಟ್ ಸಿದ್ಧಪಡಿಸುವಲ್ಲಿ ಅಧಿಕಾರಿಗಳಿಂದ ಪಡೆದ ಸಲಹೆ ಮತ್ತು ನಿರ್ದೇಶನಗಳನ್ನು ಪಾಲಿಸುವಂತೆ ಕಾರಿಡಾರ್ ಯೋಜನೆಯ ಯೋಜನಾ ನಿರ್ದೇಶಕ ಅಜಯ ಮಾನಿಕುಮಾರ ಅವರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ಲೋಕೋಪಯೋಗಿ ಇಲಾಖೆಯ ಕಾರ್ನಿರ್ವಾಹಕ ಅಭಿಯಂತರ ಪ್ರಶಾಂತ ಬಿ. ಬಾಗಲಕೋಟೆಯ ನಗರಸಭೆ ಆಯುಕ್ತ ವಿ.ಮುನಿಶಾಮಪ್ಪ, ತಹಸೀಲ್ದಾರ್ ಗುರುಸಿದ್ದಯ್ಯ ಹಿರೇಮಠ, ಸ್ಥಳೀಯ ಸಂಸ್ಥೆ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಹೆದ್ದಾರಿ ಕಾಮಗಾರಿ 2022 ರಿಂದ ಪ್ರಾರಂಭ
ಕಾಮಗಾರಿಯ ಯೋಜನಾ ಸಂಯೋಜಕ ವೇಣುಗೋಪಾಲ ಪಿಪಿಟಿ ಮೂಲಕ, ಹೆದ್ದಾರಿಯ ಮಾರ್ಗ, ರೂಪಿಸಿದ ಯೋಜನೆ ಸಂಪೂರ್ಣ ಮಾಹಿತಿ ವಿವರಿಸಿದರು.
ಭಾರತದಲ್ಲಿ ಸರಕು ಸಾಗಣೆಯ ದಕ್ಷತೆಯನ್ನು ಸುಧಾರಿಸಲು ಆರ್ಥಿಕ ಕಾರಿಡಾರ್, ಅಂತರ ರಾಜ್ಯ ಕಾರಿಡಾರ್ ಮತ್ತು ಫೀಡರ್ ಮಾರ್ಗಗಳ ಅಭಿವೃದ್ಧಿಗೆ ಡಿಪಿಆರ್ ತಯಾರಿಸಲಾಗುತ್ತಿದೆ. ಭಾರತ ಮಾಲಾ ಪರಿಯೋಜನಾ ಲಾಟ್ 5, ಪ್ಯಾಕೇಜ್‌ನಲ್ಲಿ ಈ ಹೆದ್ದಾರಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಭಾರತಮಾಲಾ ಪರಿಯೋಜನಾ ಲಾಟ್ 5ರ ಭಾಗವಾಗಿ, ಬೆಳಗಾವಿ-ಹುನಗುಂದ, ಹುನಗುಂದ-ರಾಯಚೂರು ಮಾರ್ಗವಾಗಿದ್ದು, ಡಿಪಿಆರ್ ಸಿದ್ಧಪಡಿಸಿ ಅನುಮೋದನೆ ಪಡೆದ ನಂತರ ಹೆದ್ದಾರಿ ಕಾಮಗಾರಿ 2022 ರಿಂದ ಪ್ರಾರಂಭಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
EndFragment